ADVERTISEMENT

ಪಿಂಚಣಿ: 5 ವರ್ಷದಲ್ಲಿ 20 ಲಕ್ಷ ಕೋಟಿಗೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2012, 19:30 IST
Last Updated 22 ಜುಲೈ 2012, 19:30 IST

ನವದೆಹಲಿ(ಪಿಟಿಐ): ಭಾರತದಲ್ಲಿನ ಪಿಂಚಣಿ ಕ್ಷೇತ್ರದ ಮಾರುಕಟ್ಟೆ 2015ರ ವೇಳೆಗೆ ರೂ 20 ಲಕ್ಷ ಕೋಟಿ ಪ್ರಮಾಣಕ್ಕೆ ಬೆಳವಣಿಗೆ ಕಾಣಲಿದೆ. ಸಂಘಟಿತ ವಲಯದ ಕಾರ್ಮಿಕರ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವುದು ಪಿಂಚಣಿ ಕ್ಷೇತ್ರದಲ್ಲಿನ ಈ ವೃದ್ಧಿಗೆ ಕಾರಣವಾಗಲಿದೆ ಎಂದು ಇತ್ತೀಚಿನ ಅಧ್ಯಯನ ವರದಿಯೊಂದು ತಿಳಿಸಿದೆ.

ಸಂಘಟಿತ ವಲಯದಲ್ಲಿನ ಕಾರ್ಮಿಕರು ಮತ್ತು ಸಿಬ್ಬಂದಿ ಸಂಖ್ಯೆ ದಿನಕಳೆದಂತೆ ಹೆಚ್ಚುತ್ತಲೇ ಇದೆ. ಹಾಗಾಗಿ ಸದ್ಯ ರೂ 15.4 ಲಕ್ಷ ಕೋಟಿಯಷ್ಟಿರುವ ಪಿಂಚಣಿ ಸೌಲಭ್ಯದ ಮಾರುಕಟ್ಟೆಯ ಗಾತ್ರ ಮುಂದಿನ ಮೂರು ವರ್ಷಗಳಲ್ಲಿ ರೂ20 ಲಕ್ಷ ಕೋಟಿಗೆ ಹೆಚ್ಚಲಿದೆ ಎಂದು `ಅಸೋಚಾಂ~ನ ಇತ್ತೀಚಿನ ಅಧ್ಯಯನ ವರದಿ ತಿಳಿಸಿದೆ.
ದೇಶದಲ್ಲಿನ ಅಸಂಘಟಿತ ವಲಯದ ಕಾರ್ಮಿಕರ (ಶೇ 80) ಸಮೂಹ ಈಗಲೂ ಬಹಳ ದೊಡ್ಡದೇ  ಇದೆ. 

ಇವರಿಗೆ ನಿಶ್ಚಿತ ವೇತನ ಎಂಬುದೇ ಇಲ್ಲ. ಜತೆಗೆ ಪಿಂಚಣಿ ಸೌಲಭ್ಯದಿಂದ ದೂರವಿರುವವರ ಸಂಖ್ಯೆಯೂ ಹೆಚ್ಚಿದೆ. ಈ ಅಂಶಗಳು ಇಲ್ಲಿನ ಪಿಂಚಣಿ ಸೌಲಭ್ಯ ಕ್ಷೇತ್ರದಲ್ಲಿ ಖಾಸಗಿ ಕಂಪೆನಿಗಳಿಗೆ, ವಿದೇಶಿ ಸಂಸ್ಥೆಗಳಿಗೆ ತೊಡಗಿಸಿಕೊಳ್ಳಲು, ಚಟುವಟಿಕೆ ಆರಂಭಿಸಲು ವಿಪುಲ ಅವಕಾಶವಿದೆ ಎಂಬುದನ್ನು ಎತ್ತಿ ತೋರುತ್ತಿವೆ.

`ಅಸೋಚಾಂ~ನ `ಹಣಕಾಸು ಮಾರುಕಟ್ಟೆ: ಹೊಸ ತಲೆಮಾರಿನ ಸುಧಾರಣೆಗಳಿಗೆ ಸುಸಂದರ್ಭ~ ಅಧ್ಯಯನ ವರದಿ ಈ ವಿಚಾರಗಳತ್ತ ನೋಟ ಹರಿಸಿದೆ.

ಪ್ರಸ್ತುತ ಪಿಂಚಣಿ ಸವಲತ್ತಿನ ಮಾರುಕಟ್ಟೆಯ ಒಟ್ಟಾರೆ ವಾರ್ಷಿಕ ಪ್ರಗತಿ ಶೇ 10ರಷ್ಟು ಮಾತ್ರವೇ ಇದೆ. ಆದರೆ, 30 ಕೋಟಿಗೂ ಅಧಿಕ ಮಂದಿ ದುಡಿಯುವ ವರ್ಗ ಈ ಸೌಲಭ್ಯದಿಂದ ವಂಚಿತವಾಗಿರುವುದರಿಂದ ಪಿಂಚಣಿ ಕ್ಷೇತ್ರದಲ್ಲಿ ಹೂಡಿಕೆಗೆ ಭಾರಿ ಅವಕಾಶಗಳಿವೆ ಎಂಬುದರತ್ತಲೂ ವರದಿ ಗಮನ ಸೆಳೆದಿದೆ.

ಇಷ್ಟು ದೊಡ್ಡ ಪ್ರಮಾಣದ ಅಸಂಘಟಿತ ವರ್ಗವೂ ಪಿಂಚಣಿ ಸವಲತ್ತು ಪಡೆಯುವಂತಾದರೆ, ಈ ವರ್ಗದ ಕೊಡುಗೆಯೂ ಒಂದೆಡೆಗೆ ಹರಿದುಬರುವಂತಾದರೆ ಅದು ದೇಶದ ಒಟ್ಟಾರೆ ಆರ್ಥಿಕ ಪ್ರಗತಿಗೂ (ಜಿಡಿಪಿ) ಉತ್ತೇಜನಕಾರಿಯಾಗಲಿದೆ. ಸದ್ಯ `ಜಿಡಿಪಿ~ಗೆ ಪಿಂಚಣಿ ಕ್ಷೇತ್ರದ ಕೊಡುಗೆ ಕೇವಲ ಶೇ 5ರಷ್ಟಿದೆ. 2017ರ ವೇಳೆಗೆ ಸಾಕಷ್ಟು ಸುಧಾರಣೆ ಕಂಡುಬಂದರೆ ಜಿಡಿಪಿಗೆ ಇದರ ಕೊಡುಗೆ ಶೇ 17ಕ್ಕೆ ಹೆಚ್ಚುವ ಸಂಭವವಿದೆ ಎಂದು ವರದಿ ಮುನ್ನೋಟದ ಚಿತ್ರಣ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.