ADVERTISEMENT

ಪುನರ್ಧನ: ಪರಾಮರ್ಶೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 19:35 IST
Last Updated 2 ಏಪ್ರಿಲ್ 2018, 19:35 IST
ಪುನರ್ಧನ: ಪರಾಮರ್ಶೆ ಅಗತ್ಯ
ಪುನರ್ಧನ: ಪರಾಮರ್ಶೆ ಅಗತ್ಯ   

ಬೆಂಗಳೂರು: ಬ್ಯಾಂಕುಗಳಿಗೆ ಸರ್ಕಾರ ಮರು ಬಂಡವಾಳ ಹೂಡಿಕೆ ಮಾಡುತ್ತಿರುವುದನ್ನು ಪುನರ್‌ ಪರಿಶೀಲಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್‌ ಸುಬ್ರಮಣಿಯನ್‌ ಅಭಿಪ್ರಾಯಪಟ್ಟರು.

ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ ನಗರದಲ್ಲಿ ಸೋಮವಾರ ಆಯೋಜಿಸಿದ್ದ 2017–18ರ ಆರ್ಥಿಕ ಸಮೀಕ್ಷೆ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

ಕೆಲವು ಬ್ಯಾಂಕುಗಳು ಸ್ವಯಂ ಬಂಡವಾಳ ಕ್ರೋಡೀಕರಿಸುವ ಸಾಮರ್ಥ್ಯ ಹೊಂದಿವೆ. ಬ್ಯಾಂಕುಗಳಿಗೆ ಮರು ಬಂಡವಾಳ ಒದಗಿಸಲು ಸರ್ಕಾರ ಬದ್ಧವಾಗಿರುವುದನ್ನು ಮರುಪರಿಶೀಲಿಸಲು ಇದು ಸಕಾಲವೆಂದು ಉನ್ನತ ಅಧಿಕಾರಿಗಳೂ ಹೇಳುತ್ತಿದ್ದಾರೆ ಎಂದರು.

ADVERTISEMENT

2017ರ ನವೆಂಬರ್‌ನಲ್ಲಿ ಆರ್ಥಿಕ ಇಲಾಖೆಯು ₹2.11 ಲಕ್ಷ ಕೋಟಿ ಹಣವನ್ನು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಮರು ಬಂಡವಾಳ ಒದಗಿಸಲು ಮೀಸಲಿಟ್ಟಿತ್ತು. ದೇಶದ ಬ್ಯಾಂಕಿಂಗ್‌ ವಲಯದ ಶೇ 70ರಷ್ಟು ಆಸ್ತಿಗೆ ಸಮನಾದ ಬಂಡವಾಳವಿದು. ಇದರಲ್ಲಿ 21 ಸಾರ್ವಜನಿಕ ವಲಯದ ಬ್ಯಾಂಕುಗಳು, 26 ಖಾಸಗಿ ವಲಯ ಬ್ಯಾಂಕುಗಳು, 43 ವಿದೇಶಿ ಬ್ಯಾಂಗಳು ಹಾಗೂ 56 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಒಳಗೊಂಡಿವೆ. ₹1.35 ಲಕ್ಷ ಕೋಟಿಯನ್ನು ಮರು ಬಂಡವಾಳದ ಬಾಂಡ್‌ಗಳ ಮಾರಾಟದಿಂದ ಮತ್ತು ಉಳಿದ ₹76,000 ಕೋಟಿಯನ್ನು ಬಜೆಟ್‌ ಅನುದಾನದಿಂದ ಹೊಂದಿಸಲಾಗಿದೆ ಎಂದರು.

ಸದ್ಯ ಎದುರಿಸುತ್ತಿರುವ ಬಿಕ್ಕಟ್ಟಿನಿಂದ ಬ್ಯಾಂಕುಗಳು ಹೊರಬರಲು ಬ್ಯಾಂಕುಗಳ ಖಾಸಗೀಕರಣದ ಅಗತ್ಯವಿದೆ ಎಂದರು.

ನೋಟು ರದ್ದತಿ ಮತ್ತು ಸರಕು ಸೇವಾ ತೆರಿಗೆಯಿಂದ (ಜಿಎಸ್‌ಟಿ) ಆರಂಭದಲ್ಲಿ ಕೆಲವು ತೊಂದರೆಗಳು ಎದುರಾದರೂ ಕ್ರಮೇಣ ಆರ್ಥಿಕ ಶುದ್ಧೀಕರಣಕ್ಕೆ ಇವು ಮಹತ್ವದ ಪಾತ್ರವಹಿಸಿವೆ. ನೋಟು ರದ್ದತಿಯಿಂದ ಕೆಲವು ಸಮಯ ನಗದು ಕೊರತೆ ಉಂಟಾಗಿ, ಕೃಷಿ ಕ್ಷೇತ್ರ ಸ್ವಲ್ಪ ಸಮಸ್ಯೆ ಎದುರಿಸಿತು. ನಂತರದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿತು ಎಂದರು. ನನ್ನ ಅವಧಿಯಲ್ಲಿ 4 ಆರ್ಥಿಕ ಸಮೀಕ್ಷೆಗಳನ್ನು ಮಾಡಲಾಗಿದೆ. ಯಾವುದೇ ಯೋಜನೆ ಅನುಷ್ಠಾನಗೊಳಿಸುವಾಗ ಏಕಾಏಕಿ ಅದನ್ನು ಅನುಷ್ಠಾನಕ್ಕೆ ತರುವುದಿಲ್ಲ. ಸಾಕಷ್ಟು ಅಧ್ಯಯನ ನಡೆಸಲಾಗಿರುತ್ತದೆ ಎಂದು ನೋಟು ರದ್ದತಿ ಮತ್ತು ಜಿಎಸ್‌ಟಿ ವ್ಯವಸ್ಥೆಯನ್ನು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.