ADVERTISEMENT

ಪೆಟ್ರೋಲ್ ಲೀ.ಗೆ 1000 ಕಿ.ಮೀ. ಓಡುವ ಕಾರು!

ಕೆ.ಎಸ್.ಗಿರೀಶ್
Published 9 ಏಪ್ರಿಲ್ 2013, 19:53 IST
Last Updated 9 ಏಪ್ರಿಲ್ 2013, 19:53 IST

ಇದೇನು ಕನಸೋ ನನಸೋ ಎಂದು ಹುಬ್ಬೇರಿಸದಿರಿ. ಕೇವಲ ಒಂದು ಲೀಟರ್ ಪೆಟ್ರೋಲ್ ಹಾಕಿದರೆ ಸಾಕು ಬರೋಬ್ಬರಿ ಸಾವಿರ ಕಿ.ಮೀ.ವರೆಗೂ ಓಡುವ ಕಾರೊಂದನ್ನು ಅಭಿವೃದ್ಧಿಪಡಿಸಿರುವ ಸುದ್ದಿಯೊಂದು ಕಾರಿನಷ್ಟೇ ವೇಗವಾಗಿ ದುಬೈನಿಂದ ಬಂದಿದೆ.

ಇನ್ನೇನು ಕೆಲವೇ ದಶಕಗಳಲ್ಲಿ ಮುಗಿದು ಹೋಗಲಿರುವ ನೈಸರ್ಗಿಕ ಸಂಪನ್ಮೂಲವಾದ ಕಚ್ಛಾತೈಲ ಮತ್ತು ಅದರ ವಿವಿಧ ಉತ್ಪನ್ನಗಳನ್ನು(ಪೆಟ್ರೋಲ್, ಡೀಸೆಲ್) ಉಳಿಸಿ ಮುಂದಿನ ಪೀಳಿಗೆಗೂ ನೀಡುವ ಸಲುವಾಗಿ ಹಾಗೂ ಮೇರೆ ಮೀರಿರುವ ಪರಿಸರ ಮಾಲಿನ್ಯವನ್ನು ನಿಯಂತ್ರಣಕ್ಕೆ ತರುವುದಕ್ಕಾಗಿ ವಿಶ್ವದಾದ್ಯಂತ ವಿಜ್ಞಾನಿಗಳು ಪರಿಸರ ಸ್ನೇಹಿ ವಾಹನಗಳನ್ನು ಅಭಿವೃದ್ಧಿಪಡಿಸಲು ಶ್ರಮಿಸುತ್ತಿದ್ದಾರೆ. ಸಾಕಷ್ಟು ಪ್ರಮಾಣದಲ್ಲಿ ಪೆಟ್ರೋಲ್ ಸಿಗುವ ದುಬೈನಲ್ಲೇ ಇಡೀ ಜಗತ್ತೇ ಹುಬ್ಬೇರಿಸುವಂತಹ ಇಂಧನ ಕ್ಷಮತೆಯ ಕಾರೊಂದನ್ನು ಅಲ್ಲಿನ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವುದಾಗಿ ತಿಳಿಸಿದ್ದಾರೆ.

`ಎಕೊ ದುಬೈ 1' ಎಂದು ನಾಮಕರಣಗೊಂಡಿರುವ ಈ ಅದ್ಭುತ ಕಾರನ್ನು ಇಲ್ಲಿನ ತಂತ್ರಜ್ಞಾನ ಕಾಲೇಜೊಂದರ ವಿದ್ಯಾರ್ಥಿಗಳ ಗುಂಪೊಂದು ರೂಪಿಸುತ್ತಿದೆ. ಅತ್ಯಂತ ಹಗುರವಾದ ಈ ಕಾರು ಕೇವಲ 25 ಕೆ.ಜಿ. ತೂಗುತ್ತದೆ. ಎರಡು ಮೀಟರ್ ಉದ್ದ ಹಾಗೂ ಅರ್ಧ ಮೀಟರ್ ಅಗಲದ ಅತಿ ಚಿಕ್ಕ ಕಾರು ಇದಾಗಿದೆ. ಆದರೆ ಒಂದು ಲೀಟರ್ ಪೆಟ್ರೋಲ್ ಹಾಕಿದರೆ ಸಾಕು ಸಾವಿರ ಕಿ.ಮೀ.ವರೆಗೂ ಕ್ರಮಿಸುವ ಕ್ಷಮತೆ ಇದಕ್ಕಿದೆ ಎನ್ನುವುದು ಇದರ ನಿರ್ಮಾತೃಗಳ  ಪ್ರತಿಪಾದನೆ!

ಜುಲೈ 4 -5ರಂದು ಕೌಲಾಲಂಪುರದಲ್ಲಿ ನಡೆಯಲಿರುವ `ಷೆಲ್ಸ್ ಎಕೋ ಮ್ಯಾರಾಥಾನ್' ಜಾಗತಿಕ ಸ್ಪರ್ಧೆಯಲ್ಲಿ ಈ ಮಿತವ್ಯಯಿ ಕಾರು ಪ್ರದರ್ಶಿಸುವುದು ಮಾತ್ರವಲ್ಲ ಪರೀಕ್ಷೆಗೊಳಪಡಿಸಿ ಪ್ರಥಮ ಸ್ಥಾನ ಗಳಿಸುವ ವಿಶ್ವಾಸವೂ ಈ ವಿದ್ಯಾರ್ಥಿಗಳ ತಂಡದ್ದಾಗಿದೆ.

ಎಕೋ ಮ್ಯಾರಾಥಾನ್ ಒಂದು ವಿಶಿಷ್ಟ ಬಗೆಯ ಜಾಗತಿಕ ಸ್ಪರ್ಧೆ. ಜಗತ್ತಿನಲ್ಲೇ ಪೆಟ್ರೋಲಿಯಂ ಕಂಪೆನಿಗಳಲ್ಲಿ 2ನೇ ಸ್ಥಾನದಲ್ಲಿ ನಿಲ್ಲುವಂತಹ ಆಂಗ್ಲೊ-ಡಚ್ ಬಹುರಾಷ್ಟ್ರೀಯ ತೈಲ ಕಂಪೆನಿಯಾದ `ಷೆಲ್' ಪ್ರತಿವರ್ಷ ಈ ಸ್ಪರ್ಧೆ ಆಯೋಜಿಸುತ್ತದೆ. ತೈಲ ಉಳಿಸುವಿಕೆ ಹಾಗೂ ಪರ್ಯಾಯ ಇಂಧನಗಳ ಶೋಧ ಈ ಸ್ಪರ್ಧೆಯ ಮುಖ್ಯ ಉದ್ದೇಶ. ಕಡಿಮೆ ಇಂಧನದಲ್ಲಿ ಅತಿ ಹೆಚ್ಚು ದೂರ ಸಾಗುವ ವಿಶಿಷ್ಟ ವಿನ್ಯಾಸದ ವಾಹನಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ವಿವರಗಳಿಗೆ http://www.shell.com/global/environmentsociety/ecomarathon.html

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.