ADVERTISEMENT

ಪೇಟೆಗೆ ಮರಳಿದ ಗೂಳಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 19:30 IST
Last Updated 15 ಫೆಬ್ರುವರಿ 2012, 19:30 IST

ಮುಂಬೈ (ಪಿಟಿಐ): ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕವು ಬುಧವಾರದ ವಹಿವಾಟಿನಲ್ಲಿ 354 ಅಂಶಗಳಷ್ಟು ಭರ್ಜರಿ ಏರಿಕೆ ಕಂಡಿದ್ದು, 18 ಸಾವಿರದ ಗಡಿ ದಾಟಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬಡ್ಡಿ ದರ ತಗ್ಗಿಸಲಿದೆ ಎನ್ನುವ ಸುದ್ದಿಯಿಂದ ವಿದೇಶಿ ವಿತ್ತೀಯ ಹೂಡಿಕೆದಾರರ (ಎಫ್‌ಐಐ) ಚಟುವಟಿಕೆಗಳು ತೀವ್ರಗೊಂಡಿವೆ. ಮಂಗಳವಾರದ ವಹಿವಾಟಿನಲ್ಲಿ `ಎಫ್‌ಐಐ~ ಹೂಡಿಕೆದಾರರು ರೂ.1,030 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಬಿರುಸಿನ ಚಟುವಟಿಕೆಯಿಂದ ಸೂಚ್ಯಂಕವು ಕಳೆದ 6 ತಿಂಗಳಲ್ಲೇ ಗರಿಷ್ಠ ಮಟ್ಟ ತಲುಪಿದ್ದು, 18,202 ಅಂಶಗಳಿಗೆ ದಿನದ ವಹಿವಾಟು ಕೊನೆಗೊಳಿಸಿತು.

ಯೂರೋಪ್ ಸಾಲದ ಬಿಕ್ಕಟ್ಟು ಶಮನಕ್ಕೆ  ತ್ವರಿತ ಮತ್ತು ಕ್ರಾಂತಿಕಾರಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎನ್ನುವ ಸುದ್ದಿಯಿಂದ ಜಾಗತಿಕ ಷೇರು ಪೇಟೆಗಳಲ್ಲೂ ಸಂಚಲನ ಮೂಡಿದೆ. ದೇಶೀಯ ಮಟ್ಟದಲ್ಲಿ ಟಾಟಾ ಮೋಟಾರ್ಸ್ ಪ್ರಕಟಿಸಿದ ಮೂರನೇಯ ತ್ರೈಮಾಸಿಕ ಅವಧಿಯ ಹಣಕಾಸು ಫಲಿತಾಂಶವು ಬುಧವಾರ ವಹಿವಾಟಿನಲ್ಲಿ ಹೂಡಿಕೆದಾರರಿಗೆ ಲಾಭ ತಂದಿದೆ.
 
`ಗೂಳಿ ಮತ್ತೆ ಪೇಟೆಗೆ ಮರಳಿದೆ~ ಎಂದು ಮೋತಿಲಾಲ್ ಓಸ್ವಾಲ್ ಸಂಸ್ಥೆಯ ಸಂಶೋಧನಾ ಮುಖ್ಯಸ್ಥ ವಿಕಾಸ್ ವರ್ಧನ್ ಅಭಿಪ್ರಾಯಪಟ್ಟಿದ್ದಾರೆ. ಸೂಚ್ಯಂಕ 18 ಸಾವಿರದ ಗಡಿ ದಾಟಿದ ಹಿನ್ನೆಲೆಯಲ್ಲಿ ಬ್ಯಾಂಕಿಂಗ್, ಆಟೊ, ರಿಯಾಲ್ಟಿ ವಲಯಗಳ ಷೇರುಗಳ ಖರೀದಿ ಒತ್ತಡ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.