ADVERTISEMENT

ಪೇಟೆಗೆ ಮುಂಗಾರು ಮುನಿಸು

​ಪ್ರಜಾವಾಣಿ ವಾರ್ತೆ
Published 22 ಜುಲೈ 2012, 19:30 IST
Last Updated 22 ಜುಲೈ 2012, 19:30 IST

ನವದೆಹಲಿ (ಪಿಟಿಐ): ದೇಶದ ದೊಡ್ಡ ಕಂಪೆನಿಗಳ ತ್ರೈಮಾಸಿಕ ಲೆಕ್ಕಪತ್ರ ಪ್ರಕಟಣೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪ್ರಕಟಿಸಲಿರುವ ಹಣಕಾಸು ಪರಾಮರ್ಶೆ ಮತ್ತು  ಮುಂಗಾರಿನ ಚಟುವಟಿಕೆಯು ಈ ವಾರ ಷೇರುಪೇಟೆಯ ವಹಿವಾಟನ್ನು ನಿರ್ಧರಿಸಲಿವೆ ಎಂದು ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದಾರೆ.

`ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಕೃಷಿ ಸಚಿವ ಶರದ್ ಪವಾರ್ ನಡುವಿನ ಭಿನ್ನಮತ ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರದ ಸ್ಥಿರತೆಗೆ ಧಕ್ಕೆ ತರಲಿದೆ. ಈ ಸಂಗತಿ ಕೂಡ ಮಾರುಕಟ್ಟೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ರಾಷ್ಟ್ರಪತಿ ಚುನಾವಣೆ ನಂತರ ಕೇಂದ್ರ ಸರ್ಕಾರವು ಆರ್ಥಿಕ ಸುಧಾರಣೆಗಳಿಗೆ ಆದ್ಯತೆ ನೀಡಲಿದೆ ಎನ್ನುವುದು ಮಾತ್ರ ಧನಾತ್ಮಕ ಅಂಶ~ ಎಂದು `ಕೊಟಕ್ ಸೆಕ್ಯುರಿಟೀಸ್~ ಕಂಪೆನಿ ಮುಖ್ಯಸ್ಥ ದಿಪಿನ್ ಷಾ ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರ ಶೀಘ್ರದಲ್ಲೇ ಡೀಸೆಲ್ ದರ ಹೆಚ್ಚಿಸಲಿದೆ. ವಿಮಾನಯಾನ ಮತ್ತು ಬಹುಬಗೆ ಬ್ರಾಂಡ್‌ಗಳ ಚಿಲ್ಲರೆ ವಹಿವಾಟು ಕ್ಷೇತ್ರಕ್ಕೆ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ನೀಡಲಿದೆ ಎನ್ನುವ ಅಭಿ    ಪ್ರಾಯಗಳೂ ಕಾರ್ಪೊರೇಟ್ ವಲಯದಿಂದ ಇತ್ತೀಚೆಗೆ ಕೇಳಿಬರುತ್ತಿವೆ.

ಮುಂಗಾರು ಮುನಿಸು: `ಮುಂಗಾರು ಮುನಿಸಿಕೊಂಡಿರುವುದು ಷೇರುಪೇಟೆಯಲ್ಲಿ ಒತ್ತಡ ಹೆಚ್ಚಿಸಿದೆ. ಮಳೆ ಆಧರಿಸಿ `ಆರ್‌ಬಿಐ~ ತ್ರೈಮಾಸಿಕ ಹಣಕಾಸು ನೀತಿ ಪ್ರಕಟಿಸಲಿರುವುದರಿಂದ ಇದು ಪ್ರಮುಖ ಅಂಶ. 

ಮುಂಗಾರಿಗೂ ಆಹಾರ ಹಣದುಬ್ಬರಕ್ಕೂ ನೇರ ಸಂಬಂಧವಿದೆ~  `ಎಡಿಲ್‌ವೈಸ್ ಸೆಕ್ಯುರಿಟೀಸ್~ ಸಂಸ್ಥೆಯ ವರದಿ.
ಈ ವಾರ ಪ್ರಮುಖವಾಗಿ ವಿಪ್ರೊ, ಎಚ್‌ಯುಎಲ್, ಎಲ್ ಅಂಡ್ ಟಿ, ಜಿಂದಾಲ್ ಸ್ಟೀಲ್ ತ್ರೈಮಾಸಿಕ ಹಣಕಾಸು ಸಾಧನೆ ಪ್ರಕಟಿಸಲಿವೆ.

ಮಾರುಕಟ್ಟೆ ಮೌಲ್ಯ ಕುಸಿತ

ಮುಂಬೈ (ಪಿಟಿಐ): ಮುಂಬೈ ಷೇರುಪೇಟೆಯಲ್ಲಿ ಕಳೆದ ವಾರದ ವಹಿವಾಟಿನಲ್ಲಿ ಪ್ರಮುಖ ಏಳು ಕಂಪೆನಿಗಳ ಮಾರುಕಟ್ಟೆ ಮೌಲ್ಯ ರೂ 14,931 ಕೋಟಿಯಷ್ಟು ಕುಸಿದಿದೆ. ಟಿಸಿಎಸ್ ಕಂಪೆನಿ ಗರಿಷ್ಠ ಪ್ರಮಾಣದ ಬೆಲೆ ಕಳೆದುಕೊಂಡಿದ್ದು, ಅದರ ಷೇರು ಮೌಲ್ಯ ರೂ5,207 ಕೋಟಿಯಷ್ಟು ತಗ್ಗಿದೆ.

ಪ್ರಮುಖವಾಗಿ ಒಎನ್‌ಜಿಸಿ, ಐಟಿಸಿ, ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್, ಎನ್‌ಟಿಪಿಸಿ ಮತ್ತು ಇನ್ಫೋಸಿಸ್ ಮಾರುಕಟ್ಟೆ ಮೌಲ್ಯ ಕುಸಿದಿವೆ.  ಒಎನ್‌ಜಿಸಿ ಮೌಲ್ಯ ರೂ3,003 ಕೋಟಿಯಷ್ಟು ಇಳಿಕೆಯಾಗಿದ್ದರೆ, ಎಚ್‌ಡಿಎಫ್‌ಸಿ ಬ್ಯಾಂಕ್ ರೂ906 ಕೋಟಿಯಷ್ಟು ಮೌಲ್ಯ ಕಳೆದುಕೊಂಡಿದೆ.

ಇದೇ ವೇಳೆ ರಿಲಯನ್ಸ್ ಇಂಡಸ್ಟ್ರೀಸ್‌ನ ರೂ1,277 ಕೋಟಿಯಷ್ಟು ಏರಿಕೆ ಕಂಡಿದೆ. ಭಾರ್ತಿ ಏರ್‌ಟೆಲ್‌ನ  ಮಾರುಕಟ್ಟೆ ಮೌಲ್ಯ ರೂ2,450 ಕೋಟಿಯಷ್ಟು ಹೆಚ್ಚಾಗಿದ್ದು, ರೂ1,19,337 ಕೋಟಿಗೆ ಏರಿದೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.