ADVERTISEMENT

ಪೇಟೆಯಲ್ಲಿ ಖರೀದಿ ಉತ್ಸಾಹ

ದೇಶಿ, ಜಾಗತಿಕ ವಿದ್ಯಮಾನಗಳ ಪ್ರಭಾವ

ಪಿಟಿಐ
Published 27 ಏಪ್ರಿಲ್ 2018, 19:05 IST
Last Updated 27 ಏಪ್ರಿಲ್ 2018, 19:05 IST

ಮುಂಬೈ : ಉತ್ತರ ಮತ್ತು ದಕ್ಷಿಣ ಕೊರಿಯಾದ ಐತಿಹಾಸಿಕ ಶೃಂಗಸಭೆಯಿಂದ ಏಷ್ಯಾದ ಮಾರುಕಟ್ಟೆಗಳಲ್ಲಿ ಹೊಸ ಉತ್ಸಾಹ ಮೂಡಿದೆ. ಭಾರತದ ಷೇರುಪೇಟೆಯಲ್ಲಿಯೂ ಸಕಾರಾತ್ಮಕ ವಹಿವಾಟು ಮುಂದುವರಿದಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) ಶುಕ್ರವಾರ 256 ಅಂಶ ಜಿಗಿತ ಕಂಡು 34,969 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ದಿನದ ವಹಿವಾಟಿನಲ್ಲಿ 35 ಸಾವಿರದ ಗಡಿ ದಾಟಿ ಗರಿಷ್ಠ ಮಟ್ಟವಾದ 35,065 ಅಂಶಗಳನ್ನೂ ತಲುಪಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 75 ಅಂಶ ಏರಿಕೆ ಕಂಡು, 10,692 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ.

ADVERTISEMENT

ಪ್ರಮುಖ ಸೂಚ್ಯಂಕಗಳು ಸತತ ಐದನೇ ವಾರವೂ ಗಳಿಕೆ ಕಂಡಿವೆ.

ಉತ್ತರ ಮತ್ತು ದಕ್ಷಿಣ ಕೊರಿಯಾದ ಅಧ್ಯಕ್ಷರು ಭೇಟಿಯಾಗಿ ಅಣ್ವಸ್ತ್ರ ಮುಕ್ತ–ಶಾಂತಿ ಸ್ಥಾಪನೆಗೆ ಬದ್ಧ
ರಿರುವುದಾಗಿ ಘೋಷಿಸಿದ್ದಾರೆ.

ಈ ಬೆಳವಣಿಗೆಯಿಂದ ಏಷ್ಯಾದ ಬಹುತೇಕ ಎಲ್ಲಾ ಮಾರುಕಟ್ಟೆಗಳ ವಹಿವಾಟು ಗರಿಷ್ಠ ಮಟ್ಟದಲ್ಲಿಯೇ ಅಂತ್ಯವಾಯಿತು.

‘ಬಿಎಸ್‌ಇ’ಯಲ್ಲಿ ಆ್ಯಕ್ಸಿಸ್‌ ಬ್ಯಾಂಕ್‌, ಎಸ್‌ಬಿಐ ಮತ್ತು ಐಸಿಐಸಿಐ ಬ್ಯಾಂಕ್‌ ಷೇರುಗಳು ಶೇ 9 ರವರೆಗೂ ಏರಿಕೆ ಕಂಡವು.

‘ಜಾಗತಿಕ ಮಾರುಕಟ್ಟೆಯ ಉತ್ತಮ ಗಳಿಕೆಯಿಂದ ದೇಶಿ ಮಾರುಕಟ್ಟೆ ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯಗೊಳಿಸಿದೆ. ತ್ರೈಮಾಸಿಕದಲ್ಲಿ ಕೆಲವು ಕಂಪನಿಗಳ ಉತ್ತಮ ಸಾಧನೆಯು ಹೂಡಿಕೆ ಚಟುವಟಿಕೆಯನ್ನು ಹೆಚ್ಚಿಸಿವೆ. ಹೀಗಾಗಿ ಷೇರುಪೇಟೆಯು ತೈಲ ಬೆಲೆ ಏರಿಕೆ ಮತ್ತು ರೂಪಾಯಿ ಮೌಲ್ಯದಲ್ಲಿನ ಏರಿಳಿತದ ನಕಾರಾತ್ಮಕ ಪರಿಣಾಮವನ್ನೂ ಮೀರಿ ವಹಿವಾಟು ನಡೆಸುತ್ತಿದೆ’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.