ADVERTISEMENT

ಪ್ರಶ್ನೋತ್ತರ

​ಪ್ರಜಾವಾಣಿ ವಾರ್ತೆ
Published 3 ಮೇ 2016, 19:30 IST
Last Updated 3 ಮೇ 2016, 19:30 IST
ಪ್ರಶ್ನೋತ್ತರ
ಪ್ರಶ್ನೋತ್ತರ   

ವಸಂತ ಜಿ.ಕೆ., ಬೆಳಗಾವಿ
* ರಾಜ್ಯ ಸರ್ಕಾರದ ನೌಕರ. ತಿಂಗಳ ಸಂಬಳ ₹ 27,866. ಕಡಿತ: ಪಿ.ಟಿ. ₹ 200,  ಜಿ.ಟಿ.ಎಸ್‌. ₹ 120, ಎನ್‌.ಪಿ.ಎಸ್‌. ₹ 2568, ಕೆ.ಜಿ.ಐಡಿ. ₹ 2000, ಪಿ.ಎಲ್‌.ಐ. ₹ 4020, ಕೋಮಲ್‌ ಜೀವನ್‌ ₹ 682 ಒಟ್ಟು ₹ 9,590 ಹಾಗೂ ಮನೆ ಖರ್ಚು ₹ 10,000. ಈ ಎಲ್ಲಾ ಕಡಿತ–ಖರ್ಚು ಕಳೆದು ₹ 8000 ಉಳಿತಾಯ ಮಾಡಬಹುದು. ನನಗೆ ಮದುವೆಯಾಗಿ ಎರಡು ಮಕ್ಕಳಿದ್ದು, ಮೊದಲನೆ ಮಗನಿಗೆ 7 ವರ್ಷ, ಅವನಿಗೆ ಕೋಮಲ ಜೀವನ ಪಾಲಿಸಿ ಇದೆ. ಎರಡನೆ ಮಗ 1 ವರ್ಷ. ಅವನ ಭವಿಷ್ಯ ಹಾಗೂ ಶಿಕ್ಷಣಕ್ಕೆ ಸಹಾಯವಾಗಲು ಎಲ್‌ಐಸಿ ಅಥವಾ ಆರ್‌.ಡಿ. ಯಾವುದು ಸೂಕ್ತ.
ಉತ್ತರ:
ನೀವು ನಿಮ್ಮ ಸಂಬಳದ ಶೇ 25 ರಷ್ಟು ವಿಮೆಗೆ ತೆಗೆದಿಟ್ಟಿದ್ದೀರಿ. ಇನ್ನೂ ಹೆಚ್ಚಿನ ವಿಮೆ ನಿಮಗೆ ಅಗತ್ಯವಿಲ್ಲ. ಜೊತೆಗೆ ಇಲ್ಲಿ ಉಳಿತಾಯದ ತತ್ವಕ್ಕಿಂತ ವಿಮೆಯೇ ಮುಖ್ಯವಾಗುತ್ತದೆ. ನೀವು ಉಳಿಸಬಹುದಾದ ₹ 8000 ನೀವು ಸಂಬಳ ಪಡೆಯುವ ಬ್ಯಾಂಕಿನಲ್ಲಿ 5 ವರ್ಷಗಳ ಆರ್‌.ಡಿ. ಮಾಡಿರಿ. 5 ವರ್ಷ ಮುಗಿಯುತ್ತಲೇ, ನಿಮ್ಮ ಸಂಬಳದ ಆಧಾರದ ಮೇಲೆ ಸ್ವಲ್ಪ ಸಾಲ ಪಡೆದು ಹಾಗೂ ಬರುವ ಆರ್‌.ಡಿ. ಮೊತ್ತದಿಂದ ಬೆಳಗಾವಿ ಅಥವಾ ಅಲ್ಲಿಗೆ  ಸಮೀಪದ ಊರಿನಲ್ಲಿ ಒಂದು ನಿವೇಶನ ಕೊಂಡುಕೊಳ್ಳಿ.

5 ವರ್ಷಗಳ ನಂತರ ನೀವು ಉಳಿಸಬಹುದಾದ ಹಣ ಸಾಲಕ್ಕೆ ಜಮಾ ಮಾಡುತ್ತಾ ಬಂದು, ಸಾಲ ತೀರಿಸಿರಿ. ನಿಮ್ಮ ಪುಟ್ಟ ಕಂದನ ಸಲುವಾಗಿ, ವಾರ್ಷಿಕವಾಗಿ ಬರುವ ಇನ್‌ಕ್ರಿಮೆಂಟ್‌ ಹಾಗೂ ಎರಡು ಸಲ ಬರುವ ಹೆಚ್ಚಿನ ಡಿ.ಎ. ಇವುಗಳ ಶೇ 50 ರಷ್ಟು 10 ವರ್ಷಗಳ ಆರ್‌.ಡಿ. ಪ್ರತಿ ವರ್ಷ ಮಾಡುತ್ತಾ ಬನ್ನಿರಿ. ಹೀಗೆ ಮಾಡಿದ ಆರ್ಥಿಕ ಪ್ಲ್ಯಾನ್‌ ಮಕ್ಕಳ ವಿದ್ಯಾಭ್ಯಾಸ ಹಾಗೂ ಇನ್ನುಳಿದ ಖರ್ಚಿಗೆ ನೆರವಾಗುತ್ತದೆ.

ಆರ್‌.ಕೆ. ಬೀನಾ, ಶ್ರೀರಾಮಪುರ
* 2006–2007 ರಲ್ಲಿ ಅಂಚೆ ಕಚೇರಿಯಿಂದ ಎನ್‌.ಎಸ್‌.ಸಿ. ಸರ್ಟಿಫಿಕೇಟು ಕೊಂಡಿದ್ದೆ. ವಾರ್ಡ್‌ರೋಬಿನಲ್ಲಿ ಗೆದ್ದಲು ತಿಂದು ಹಾಳಾಗಿದೆ. 2012–13 ರಲ್ಲಿ ಹಣ ಪಡೆಯಬೇಕಾಗಿತ್ತು. ಅಂಚೆ ಕಚೇರಿಯಲ್ಲಿ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಈ ಹಣ ಪಡೆಯಲು ಸಾಧ್ಯವೇ?
ಉತ್ತರ:
ಎನ್‌ಎಸ್‌ಸಿ ಕೊಂಡ ತಾರೀಕು (ಕನಿಷ್ಠ ತಿಂಗಳ–ಇಸವಿ) ನಿಮಗೆ ತಿಳಿದಿರುವಲ್ಲಿ, ಅಂಚೆ ಕಚೇರಿಗೆ ಸಂಜೆ ಹೋಗಿ, ಪೋಸ್‌್ಟಮ್ಯಾನ್‌ಗೆ ಒಳ್ಳೆ ರೀತಿಯಲ್ಲಿ ತಿಳಿಸಿ, ನೀವು ಎನ್‌ಎಸ್‌ಸಿ ಪಡೆಯಲು ಅರ್ಜಿ ಕೊಟ್ಟು ಹುಡುಕಲು ಕೇಳಿಕೊಳ್ಳಿ. ಆ ಕಚೇರಿಯಲ್ಲಿ ಇದಕ್ಕೆ ಸಂಬಂಧಿಸಿದ ಕಾಗದ ಪತ್ರ ಇದ್ದೇ ಇರುತ್ತದೆ. ನಂತರ ಇಡೆಂಮ್‌ನಿಟಿ ಬಾಂಡು ಕೊಟ್ಟು, ಹಣ ಪಡೆಯಬಹುದು.

ಒಟ್ಟಿನಲ್ಲಿ ಸರಿಯಾದ ಪ್ರಯತ್ನ ಮಾಡಿದರೆ ಹಣ ಪಡೆಯಬಹುದು. ಓದುಗರಿಗೊಂದು ಕಿವಿ ಮಾತು. ಎನ್‌ಎಸ್‌ಸಿ ಹಾಗೂ ಯಾವುದೇ ಠೇವಣಿ, ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಯಲ್ಲಿ ಇರಿಸಿ, ಬಾಂಡು ಪಡೆದಾಗ, ಸದರಿ ಬಾಂಡಿನ ‘ಜೆರಾಕ್‌್ಸ’ ತೆಗೆದು ಬೇರೊಂದು ಫೈಲಿನಲ್ಲಿ ಇರಿಸಲು ಮರೆಯಬಾರದು. ಇದರಿಂದ ಬಾಂಡು ಕಳೆದರೂ ಮುಂದೆ ಡೂಪ್ಲಿಕೇಟ್‌ ಬಾಂಡು ಪಡೆಯಲು ಅನುಕೂಲವಾಗುತ್ತದೆ.

ಅರುಣ್‌ ಕುಮಾರ್‌.ಡಿ.ಜಿ., ದಾವಣಗೆರೆ
* 2010–11 ರಲ್ಲಿ ಬಿ.ಇ. ಪದವಿ ಮಾಡಲು ಎಸ್‌.ಬಿ.ಎಂ.ನಿಂದ ₹ 1 ಲಕ್ಷ ಸಾಲ ಪಡೆದಿದ್ದೆ. 2014 ರಲ್ಲಿ ಪದವಿ ಮುಗಿದು ಸ್ನಾತಕೋತ್ತರ ಪದವಿ ಮಾಡುತ್ತಿದ್ದೇನೆ. ನನಗೀಗ ಬ್ಯಾಂಕಿನವರು 2 ಲಕ್ಷ ಸಾಲ ಕೊಡಲು ಒಪ್ಪಿದ್ದಾರೆ. ಇದೇ ವೇಳೆ ಹಳೆ ಸಾಲದ ಬಡ್ಡಿ ಕಟ್ಟಲು ಹೇಳಿದ್ದಾರೆ. ನನಗೆ ತಿಳಿದ ಪ್ರಕಾರ 2008ರ ನಂತರ ಶೈಕ್ಷಣಿಕ ಸಾಲಗಳಿಗೆ ಶಿಕ್ಷಣ ಅವಧಿ ಮುಗಿಯುವ ತನಕ ಬಡ್ಡಿಯಿಂದ ವಿನಾಯತಿ ಇರುತ್ತದೆ ಎಂದೆನಿಸುತ್ತದೆ.
ಉತ್ತರ:
ಬಡ್ಡಿ ಅನುದಾನಿತ ವೃತ್ತಿಪರ ಶಿಕ್ಷಣ ಸಾಲ 1–4–2009 ರಿಂದಲೇ ಜಾರಿಗೆ ಬಂದಿದೆ. ಯಾವುದೇ ವಿದ್ಯಾರ್ಥಿ ಆರ್ಥಿಕವಾಗಿ ಹಿಂದುಳಿದ ಕುಟುಂಬದಲ್ಲಿ ಜನಿಸಿ, ಹೆತ್ತವರ ವಾರ್ಷಿಕ ಒಟ್ಟು ಆದಾಯ ₹ 4.50 ಲಕ್ಷದೊಳಗಿರುವಲ್ಲಿ,  ಈ ಸೌಲಭ್ಯ ಪಡೆಯಬಹುದಾಗಿದೆ. ಆದಾಯದ ವಿಚಾರದಲ್ಲಿ ತಹಶೀಲ್‌ದಾರರ ಸರ್ಟಿಫಿಕೇಟ್‌ ಅಗತ್ಯವಿದೆ.

ಈ ಅನುದಾನಿತ ಬಡ್ಡಿ ಸೌಲತ್ತು ಶಿಕ್ಷಣದ ಅವಧಿಗೆ ಸೀಮಿತವಾಗಿದೆ. ನೀವು ಬಿ.ಇ. ಓದಲು ಪಡೆದ ಸಾಲದ ಶಿಕ್ಷಣದ ಅವಧಿ ಮುಗಿದು, ಸ್ನಾತಕೋತ್ತರ ಪದವಿ ಓದಲು ಸಾಲ ಪಡೆದಂತಿದೆ. ಈ ಕಾರಣದಿಂದ ಮೊದಲಿನ ಸಾಲದ ಬಡ್ಡಿ ಪಾವತಿಸಲು ಬ್ಯಾಂಕಿನವರು ತಿಳಿಸಿರಬೇಕು.

ಮಂಜುಳ, ವಿಜಾಪುರ
* ಸರ್ಕಾರಿ ನೌಕರಳು. ತಂದೆ ವ್ಯಾಪಾರಸ್ತರು. ನಾವು 5 ಜನ ಹೆಣ್ಣುಮಕ್ಕಳು.  ಪಿತ್ರಾರ್ಜಿತ 4 ಎಕರೆ ವ್ಯವಸಾಯ ಭೂಮಿ ಇದ್ದು, ಇದನ್ನು ₹ 96 ಲಕ್ಷಕ್ಕೆ ಮಾರಾಟ ಮಾಡಿ, ಇದರಲ್ಲಿ ನಮ್ಮ ಮದುವೆ, ಮನೆ ಕಟ್ಟಡ, ಇತರೆ ಖರ್ಚು ಕಳೆದು ₹ 60 ಲಕ್ಷ. 7 ಜನರ ಹೆಸರಿನಲ್ಲಿ ಭಾಗ ಮಾಡಿ ಸಹಕಾರಿ ಬ್ಯಾಂಕಿನಲ್ಲಿ ಎಫ್‌.ಡಿ. ಮಾಡಿದ್ದೆವು. ಈ ಬ್ಯಾಂಕು ತೆರಿಗೆ ಮುರಿಯಲಿಲ್ಲ. ಈಗೊಂದು ತಿಂಗಳ ಕೆಳಗೆ ನಮ್ಮ ತಂದೆಯವರಿಗೆ ಆದಾಯ ತೆರಿಗೆ ಇಲಾಖೆಯಿಂದ ನೊಟೀಸ್‌ ಬಂದಿತ್ತು ಅದರಲ್ಲಿ ‘Entering into financia* transaction non quoting of PAN’ ಎಂಬುದಾಗಿ ಇತ್ತು. ಇದರಂತೆ ನಾವು ₹ 3000 ತೆರಿಗೆ ಸಲ್ಲಿಸಿದೆವು. ವ್ಯವಸಾಯ ಭೂಮಿಗೆ ಆದಾಯ ತೆರಿಗೆ ಅನ್ವಯವಾಗುತ್ತದೆಯೇ?
ಉತ್ತರ:
ಸೆಕ್ಷನ್‌ 194–ಎ ಆಧಾರದ ಮೇಲೆ, ಯಾವುದೇ ಮೂಲದಿಂದ ಹಣಬಂದು, ಬ್ಯಾಂಕ್‌ ಠೇವಣಿ ಇರಿಸಿದರೂ, ಪ್ಯಾನ್‌ ಕಾರ್ಡ್‌ ಠೇವಣಿ ಇಡುವಾಗ ಬ್ಯಾಂಕಿಗೆ ಒದಗಿಸದಿರುವಲ್ಲಿ, ಬಂದಿರುವ ಬಡ್ಡಿಯ ಶೇ 20 ರಷ್ಟು ಮುರಿದು, ಆದಾಯ ತೆರಿಗೆ ಇಲಾಖೆಗೆ ಸಲ್ಲಿಸುವುದು, ಠೇವಣಿ ಸ್ವೀಕರಿಸಿದ ಬ್ಯಾಂಕಿನ ಜವಾಬ್ದಾರಿಯಾಗಿರುತ್ತದೆ.

ವ್ಯವಸಾಯ ಭೂಮಿಯಿಂದ ಬರುವ ಆದಾಯ ಅಂದರೆ ಭೂಮಿಯಲ್ಲಿ ವ್ಯವಸಾಯ ಮಾಡಿ ಬರುವ ಉತ್ಪನ್ನ ಅಥವಾ ಆದಾಯಕ್ಕೆ ಸೆಕ್ಷನ್‌ 10(1) ಆಧಾರದ ಮೇಲೆ ತೆರಿಗೆ ಇರುವುದಿಲ್ಲ. ಆದರೆ ಜಮೀನು ಮಾರಾಟ ಮಾಡಿ, ಠೇವಣಿ ಇರಿಸಿದಾಗ ಬರುವ ಬಡ್ಡಿ ಹಣ ವ್ಯಕ್ತಿಯ ವಾರ್ಷಿಕ ಆದಾಯದ ಮಿತಿ ದಾಟಿದಾಗ, ಆ ಮೊತ್ತಕ್ಕೆ ತೆರಿಗೆ ಬರುತ್ತದೆ ಹಾಗೂ ಪ್ಯಾನ್‌ ಕಾರ್ಡು ಒದಗಿಸುವುದು ಕಡ್ಡಾಯವಾಗಿರುತ್ತದೆ. ತೆರಿಗೆಗೆ  ಒಳಗಾಗದ ವ್ಯಕ್ತಿಗಳು 15ಜಿ ಅಥವಾ 15ಎಚ್‌ನ ನಮೂನೆ ಫಾರಂ ಬ್ಯಾಂಕಿಗೆ ಸಲ್ಲಿಸಿ ಪ್ಯಾನ್‌ ಕಾರ್ಡು ಒದಗಿಸಿ ಬಡ್ಡಿ ಮೂಲದಿಂದ (ಟಿಡಿಎಸ್‌) ತೆರಿಗೆ ಮುರಿಯದಂತೆ ಮಾಡಿಕೊಳ್ಳಬಹುದು.

ಭಾಗ್ಯಲಕ್ಷ್ಮಿ, ಗದಗ
* ಸಂಬಳ ₹ 7000. ಬ್ಯಾಂಕಿನಲ್ಲಿ ಯಾವ ಸೌಲಭ್ಯ ದೊರೆಯುತ್ತದೆ, ಯಾವರೀತಿ ಉಳಿತಾಯ ಮಾಡಲಿ.  ಆರ್ಥಿಕವಾಗಿ ಸಬಲಳಾಗಲು ಮಾರ್ಗದರ್ಶನ ನೀಡಿ.
ಉತ್ತರ:
ನಿಮಗೆ ಬ್ಯಾಂಕಿನಿಂದ ಏನು ಸೌಲಭ್ಯ ಬೇಕಾಗಿದೆ ತಿಳಿಯಲಿಲ್ಲ. ನೀವು ಪಡೆಯುವ ಸಂಬಳಕ್ಕೆ, ನಿಮಗೆ ಹೆಚ್ಚಿನ ಸಾಲ ಸೌಲಭ್ಯ ದೊರೆಯಲಾರದು. ಸಾಲ ಹಿಂತಿರುಗಿಸಲು ಪ್ರತಿ ತಿಂಗಳು ಕಂತು ಬಡ್ಡಿ ಕೊಡಬೇಕಾಗುತ್ತದೆ. ಸಂಬಳದಲ್ಲಿ ನಿಮ್ಮ ಖರ್ಚು ಕಳೆದು ಹೆಚ್ಚಿಗೆ ಉಳಿಯಲಾರದು. ಆಪತ್ತಿನಲ್ಲಿ ಸಂಪತ್ತು ಎನ್ನುವ ಗಾದೆ ಮಾತಿನಂತೆ, ನೀವು ಕನಿಷ್ಠ ₹ 2000 ಆರ್‌.ಡಿ. ಮಾಡಲು ಪ್ರಾರಂಭಿಸಿರಿ. ಇದು 5 ವರ್ಷಗಳ ಅವಧಿಗಿರಲಿ. ಇಲ್ಲಿ ಕೂಡಿಟ್ಟ ಹಣ ನಿಮ್ಮ ಮುಂದಿನ ಖರ್ಚಿಗೆ ಸಹಾಯವಾಗುತ್ತದೆ.

ಡಾ. ಸರಸ್ವತಿ, ಸಕಲೇಶಪುರ
* ಇದೇ ಸೆಪ್ಟೆಂಬರ್‌ನಲ್ಲಿ ಸರ್ಕಾರಿ ನೌಕರಿಯಿಂದ ನಿವೃತ್ತನಾಗುತ್ತಿದ್ದೇನೆ. ₹ 35 ಲಕ್ಷ ಬರಬಹುದು. ಈ ಹಣ ಎಲ್ಲಿ ತೊಡಗಿಸಲಿ, ನನಗೆ ಆದಾಯ ತೆರಿಗೆ ಹಾಗೂ ಈ ಹಣದಿಂದ ಮಾಸಿಕ ಆದಾಯ ಎಷ್ಟು ಬರಬಹುದು.?
ಉತ್ತರ:
  ನೀವು ಸರ್ಕಾರಿ ನೌಕರರಾದ್ದರಿಂದ ನಿಮಗೆ ಪಿಂಚಣಿ ಬರುತ್ತದೆ. ನಿವೃತ್ತಿಯಿಂದ ಬರುವ ₹ 35 ಲಕ್ಷದಲ್ಲಿ, ಪೆನ್ಶನ್‌ ಕಾಮ್ಯೂಟೇಶನ್‌, ಪಿ.ಎಫ್‌.,  ಗ್ರ್ಯಾಚುಟಿ, ಇವುಗಳಿಗೆ ಸಂಪೂರ್ಣ ತೆರಿಗೆ ವಿನಾಯತಿ ಇದೆ. ರಜಾ ಸಂಬಳ ಗರಿಷ್ಠ ₹ 3 ಲಕ್ಷಗಳ ತನಕ ಕೂಡಾ ತೆರಿಗೆ ವಿನಾಯತಿ ಇದೆ. ಇಳಿವಯಸ್ಸಿನಲ್ಲಿ ಕಂಟಕ ರಹಿತ ಉಳಿತಾಯಕ್ಕೆ ಬ್ಯಾಂಕ್‌ ಅಥವಾ ಅಂಚೆ ಕಚೇರಿ ಠೇವಣಿಗಳಲ್ಲಿ ಮಾತ್ರ ಹಣ ಹೂಡಿರಿ. ತೆರಿಗೆ ಭಯದಿಂದ ಬೇರೆಯವರ ಹೆಸರಿನಲ್ಲಿ ಎಂದಿಗೂ ಹಣ ಹೂಡಬೇಡಿರಿ. ಇದರಿಂದ ಅಸಲನ್ನೇ ಕಳೆದುಕೊಳ್ಳುವ ಸಾಧ್ಯತೆ ಬಹಳ.

₹ 35 ಲಕ್ಷ ವಿಂಗಡಿಸಿ, ₹ 20 ಲಕ್ಷ ಅಂಚೆ ಕಚೇರಿ ಸೀನಿಯರ್‌ ಸಿಟಿಜನ್‌ ಡಿಪಾಸಿಟ್‌ನಲ್ಲಿ ಇರಿಸಿ ಮೂರು ತಿಂಗಳಿಗೊಮ್ಮೆ ಬಡ್ಡಿ ಪಡೆಯಿರಿ. ಉಳಿದ ₹ 15 ಲಕ್ಷ ನಿಮ್ಮ ಮನೆಗೆ ಸಮೀಪದ ಬ್ಯಾಂಕಿನಲ್ಲಿ ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ 5 ವರ್ಷಗಳ ಅವಧಿಗೆ ಇರಿಸಿರಿ. ಇಲ್ಲಿ ಚಕ್ರಬಡ್ಡಿಯಲ್ಲಿ ನಿಮ್ಮ ಹಣ ಬೆಳೆಯುತ್ತದೆ.

ಪ್ರವೀಣ್‌ ಯಾದವ್‌, ಮೈಸೂರು
* ಒಂದು ವೇಳೆ ನಾನು ಕೆಲಸ ಕಳೆದುಕೊಂಡರೆ, ಅಥವಾ ಕೆಲಸ ಬಿಟ್ಟರೆ, ಈವರೆಗೆ ಕಟ್ಟಿದ ಪಿ.ಪಿ.ಎಫ್‌. ಹಣ ಹಿಂತಿರುಗಿಸುತ್ತಾರಾ?
ಉತ್ತರ:
ಪಿ.ಪಿ.ಎಫ್‌. ಒಂದು 15 ವರ್ಷಗಳ ಠೇವಣಿ ಯೋಜನೆ. ಓರ್ವ ವ್ಯಕ್ತಿ ಒಂದು ಖಾತೆ ಮಾತ್ರ ಪ್ರಾರಂಭಿಸಬಹುದು. ಕನಿಷ್ಠ ₹ 500 ಗರಿಷ್ಠ ₹ 1.50 ಲಕ್ಷ ವಾರ್ಷಿಕವಾಗಿ ತುಂಬಬಹುದು. 3ನೇ ಆರ್ಥಿಕ ವರ್ಷದಿಂದ ಸಾಲ ಪಡೆಯಬಹುದು. 7 ವರ್ಷ ತುಂಬಿದ ನಂತರ ವಾರ್ಷಿಕವಾಗಿ ಕಟ್ಟಿದ ಹಣದ ಒಂದು ಭಾಗ ವಾಪಸು ಪಟೆಯಬಹುದು.

ಆದಾಯ ತೆರಿಗೆ ಸೆಕ್ಷನ್‌ 80ಸಿ ಆಧಾರದ ಮೇಲೆ ಗರಿಷ್ಠ ₹ 1.50 ಲಕ್ಷ ಹಣ ವಾರ್ಷಿಕವಾಗಿ ಇಲ್ಲಿ ಇರಿಸಿ ಒಟ್ಟು ಆದಾಯದಿಂದ ಕಳೆದು ತೆರಿಗೆ ಕೊಡಬಹುದು ಹಾಗೂ ಸೆಕ್ಷನ್‌ 10(11) ಆಧಾರದ ಮೇಲೆ ಇಲ್ಲಿ ಬಂದಿರುವ ಬಡ್ತಿ ಆದಾಯ ತೆರಿಗೆಯಿಂದ ಸಂಪೂರ್ಣ ವಿನಾಯತಿ ಪಡೆದಿದೆ. ಈ ವರೆಗೆ ವಿವರಿಸಿದ ಎಲ್ಲಾ ಸೌಲತ್ತು, ನೀವು ಕೆಲಸ ಕಳೆದುಕೊಂಡರೂ ಅಥವಾ ಕೆಲಸಕ್ಕೆ ರಾಜೀನಾಮೆ ಕೊಟ್ಟರೂ ಪಿ.ಪಿ.ಎಫ್‌. ಖಾತೆಯಿಂದ ಪಡೆಯಬಹುದು.  ಎಲ್ಲಕ್ಕೂ ಮಿಗಿಲಾಗಿ ಪಿ.ಪಿ.ಎಫ್‌. ಖಾತೆಗೆ ಕೋರ್ಟು ಅಟ್ಯಾಚ್‌ಮೆಂಟ್‌ ಕೂಡಾ ತರಲು ಬರುವುದಿಲ್ಲ.

ವೆಂಕಟೇಶ್‌ ಅರ್ಚಕ, ರಾಯಚೂರು
* ಕಾರ್ಪೊರೇಷನ್‌ ಬ್ಯಾಂಕಿನಲ್ಲಿ ಕೆಲಸ ಮಾಡುತ್ತೇನೆ. ₹ 4 ಲಕ್ಷ ಶ್ರೀ ರಾಘವೇಂದ್ರ ಸ್ವಾಮಿ ಮಠ, ಮಂತ್ರಾಲಯಕ್ಕೆ ದಾನವಾಗಿ ಕೊಟ್ಟಿದ್ದೇನೆ. ಸದರಿ ರಶೀದಿ ನಕಲು ಲಗತ್ತಿಸಿದ್ದೇನೆ. ನನ್ನ ವಾರ್ಷಿಕ ಒಟ್ಟು ಆದಾಯ ₹ 9.70 ಲಕ್ಷ. ಪಿ.ಟಿ. ₹ 2400, ಶಿಕ್ಷಣ ಸಾಲದ ಬಡ್ಡಿ ₹ 40,000 ಹಾಗೂ ತೆರಿಗೆ ಉಳಿಸುವ ಉಳಿತಾಯ ₹ 1.50 ಲಕ್ಷ, ದಾನಕೊಟ್ಟ ಹಣದಲ್ಲಿ ತೆರಿಗೆ ರಿಯಾಯಿತಿ ಪಡೆಯಲು ಸಲಹೆ ನೀಡಿ.
ಉತ್ತರ:
ನಿಮ್ಮ ವಾರ್ಷಿಕ ಒಟ್ಟು ಆದಾಯ ₹ 9.70 ಈ ಮೊತ್ತದಲ್ಲಿ ಪಿ.ಟಿ. 2400, ಶಿಕ್ಷಣ ಸಾಲದ ಬಡ್ಡಿ– ಸೆಕ್ಷನ್‌ 80ಇ ರಂತೆ ₹ 40,000, ಸೆಕ್ಷನ್‌ 80ಸಿ ಆಧಾರದ ಮೇಲೆ ನೀವು ಮಾಡಿದ ಉಳಿತಾಯ ₹ 1.50 ಲಕ್ಷ ಹಾಗೂ ಶ್ರೀ ಮಠಕ್ಕೆ ದಾನವಾಗಿ ಕೊಟ್ಟ ಹಣದ ಶೇ 50 (ಸೆಕ್ಷನ್‌ 80ಜಿ) ಹೀಗೆ ₹ 3,92,400 ಕಳೆದು ತೆರಿಗೆ ಸಲ್ಲಿಸಬಹುದು.

₹ 9.70 ಲಕ್ಷ ಒಟ್ಟು ಆದಾಯದಲ್ಲಿ ಸಂಬಳದ ಹಿಂಬಾಕಿ ಇರುವಲ್ಲಿ, ಸೆಕ್ಷನ್‌ 89(1) ಆಧಾರದ ಮೇಲೆ ಅಂತಹ ಆದಾಯ ಹಿಂದಿನ ವರ್ಷಗಳಿಗೂ ಸಂಬಂಧಿಸಿದರೆ, ಹಿಂಬಾಕಿ ಹಣ ಯಾವ ವರ್ಷಗಳಿಗೆ ವಿಂಗಡಿಸಿ ತೆರಿಗೆ ರಿಟರ್ನ್‌ ಸಲ್ಲಿಸಬಹುದು. ಒಟ್ಟು ಸಂಬಳದಲ್ಲಿ ಮನೆ ಬಾಡಿಗೆ ಹಾಗೂ ಇತರೆ ಅಲೋವನ್‌್ಸ ಇರಬಹುದು. ನಿಮ್ಮ ಸಮೀಪಿದ ಚಾರ್ಟರ್‌್ಡ ಅಕೌಂಟೆಂಟ್‌ ವಿಚಾರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.