ADVERTISEMENT

ಪ್ರಶ್ನೋತ್ತರ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 19:30 IST
Last Updated 16 ಅಕ್ಟೋಬರ್ 2012, 19:30 IST

ಎಸ್.ವೈ.ಎಂ.ಜೆ, ಸುರಪುರ
ಪ್ರಶ್ನೆ: ಎನ್‌ಪಿಎಸ್ ಎಂದರೇನು? ಇದರಲ್ಲಿ ಹಣಕಾಸು ವ್ಯವಹಾರ ಮಾಡಿದರೆ ಲಾಭದಾಯಕವೇ ಅಥವಾ ನಷ್ಟ ಆಗಬಹುದೇ? ಈ ವ್ಯವಹಾರಕ್ಕಾಗಿ ಯಾರನ್ನು ಸಂಪರ್ಕಿಸಬೇಕು? ಮುಂದೆ ಜೀವ ವಿಮೆ ಮಾಡಲು ಮೆಟ್ ಲೈಫ್ ಅಥವಾ ಎಲ್‌ಐಸಿಯಲ್ಲಿ ಯಾವುದು ಉತ್ತಮ?

ಉತ್ತರ: ಜೀವನದ ಸಂಜೆಯಲ್ಲಿ ಸುಖವಾಗಿ ಜೀವಿಸಲು ಹೊಸ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರ ಸಾದರಪಡಿಸಿದೆ. ಈ ಯೋಜನೆಯಲ್ಲಿ ಪ್ರತಿ ವರ್ಷ ಕನಿಷ್ಠ ರೂ 6,000 ತುಂಬಬೇಕು ಹಾಗೂ ಇಲ್ಲಿ ಗರಿಷ್ಠ ಮಿತಿ ಇರುವುದಿಲ್ಲ.

ಭಾರತೀಯ ಪ್ರಜೆಯಾಗಿದ್ದು 18-55 ವರ್ಷ ವಯೋಮಿತಿಯ ಯಾವುದೇ ವ್ಯಕ್ತಿ ಈ ಯೋಜನೆಯಲ್ಲಿ ಭಾಗವಹಿಸಬಹುದು. ಇದರಲ್ಲಿ ಹೂಡಿದ ಹಣವನ್ನು ಪಿಂಚಣಿ ರೂಪದಲ್ಲಿ 60 ವರ್ಷ ದಾಟುತ್ತಲೇ ಪ್ರತಿ ತಿಂಗಳೂ ಪಡೆಯಬಹುದು. ಜನರಿಂದ ಕ್ರೋಢೀಕರಿಸಿದ ಮೊತ್ತವನ್ನು ಹೂಡಿಕೆದಾರರ ವಯಸ್ಸಿಗೆ ಅನುಗುಣವಾಗಿ ಕಂಪೆನಿ ಷೇರುಗಳು, ಕಾರ್ಪೊರೇಟ್ ಬಾಂಡ್‌ಗಳು ಹಾಗೂ ಸರ್ಕಾರಿ ಸೆಕ್ಯುರಿಟೀಸ್‌ನಲ್ಲಿ(ಸಾಲಪತ್ರ) ಹೂಡಲಾಗುತ್ತದೆ.

ಈ ಯೋಜನೆ ಲಾಭ ಗಳಿಸುವುದರಲ್ಲಿ ಸಂಶಯವಿಲ್ಲ. ಆದರೆ ನಿಖರವಾಗಿ ಇಷ್ಟೇ ಲಾಭ ಬರಬಹುದು ಎಂಬುದನ್ನು ಮುಂಚಿತವಾಗಿಯೇ ಘೋಷಿಸಲು ಸಾಧ್ಯವಾಗಲಾರದು.

ಎಲ್ಲಾ ಜೀವ ವಿಮಾ ಕಂಪೆನಿಗಳನ್ನೂ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(ಐಆರ್‌ಡಿಎ- ಶುಲ್ಕ ರಹಿತ ಕರೆಗೆ ದೂ: 155255) ನಿಯಂತ್ರಿಸುತ್ತದೆ. ಇದರಿಂದ ಖಾಸಗಿ ವಿಮಾ ಕಂಪೆನಿಗಳಲ್ಲಿ ಜೀವ ವಿಮಾ ಪಾಲಿಸಿ ಮಾಡಿಸಲು ಭಯ ಪಡುವ ಅಗತ್ಯವಿಲ್ಲ.

ಸರ್ಕಾರಿ ಸ್ವಾಮ್ಯದ ಜೀವ ವಿಮಾ ನಿಗಮವೇ ಬೇಕಾದಲ್ಲಿ `ಎಲ್‌ಐಸಿ ಆಫ್ ಇಂಡಿಯ~ದ ಶಾಖೆ ದೇಶದೆಲ್ಲೆಡೆ ಇವೆ. ಜೀವಿತ ಕಾಲಕ್ಕೂ ಹಾಗೂ ಜೀವನದ ನಂತರವೂ ಸ್ಪಂದಿಸುವ `ಜೀವನ್ ಆನಂದ್~ ಪಾಲಿಸಿ ಎಲ್‌ಐಸಿಯಲ್ಲಿದೆ. ನಿಮ್ಮ ಭವಿಷ್ಯದ ಅವಶ್ಯಕತೆ, ಅನುಕೂಲಕ್ಕೆ ತಕ್ಕಂತೆ ವಿಮೆ ಮಾಡಿಸಿರಿ.

ರಾಜು, ಬಳ್ಳಾರಿ
ಪ್ರಶ್ನೆ: ನಾನು ಕೇಂದ್ರ ಸರಕಾರದ ನೌಕರನಾಗಿದ್ದು ಮಾಸಿಕ ರೂ. 26,870 ಸಂಬಳ ಪಡೆಯುತ್ತಿದ್ದೇನೆ. ಜಿ.ಪಿ.ಎಫ್ ರೂ10,000, ಪಿ.ಎಲ್.ಐ ರೂ1052, ಎಲ್.ಐ.ಸಿ ರೂ382, ಆರ್.ಡಿ. ರೂ2,000 ಮಾಡಿದ್ದೇನೆ. ಹೊಸ ಆರ್.ಡಿ.ಗೆ ಮಾಸಿಕ ರೂ100 ಪಾವತಿಸುರುವೆ. ಅಲ್ಲದೆ ಎಂ.ಐ.ಎಸ್.ನಲ್ಲಿ ರೂ1.5 ಲಕ್ಷ ಹೂಡಿದ್ದು, ಮಾಹೆಯಾನ ರೂ1000 ಬಡ್ಡಿ ಬರುತ್ತದೆ. ಪ್ರತಿ ತಿಂಗಳೂ ಪ್ರಾರಂಭಿಸಿದ 54 ಹೊಸ ಆರ್.ಡಿ.ಯಲ್ಲಿ ರೂ5,400 ಇರುತ್ತದೆ. ಈ ರೀತಿ ಉಳಿತಾಯ ನಮಗೆ ಅಧಿಕ ಆದಾಯ ತರಬಲ್ಲುದೇ? ಅಥವಾ ಬೇರೆ ಹೂಡಿಕೆ ಸೂಕ್ತವೇ ತಿಳಿಸಿರಿ.

ಉತ್ತರ: ನಿಮ್ಮ ತಿಂಗಳ ಸಂಬಳದಲ್ಲಿ, ಸಿಂಹಪಾಲು ಜಿ.ಪಿ.ಎಸ್.ನಲ್ಲಿ ಹೂಡುತ್ತಿದ್ದೀರಿ. ಇದರಿಂದ ಆದಾಯ ತೆರಿಗೆ ಸೆಕ್ಷನ್ 80ಸಿ ಆಧಾರದ ಮೇಲೆ ಗರಿಷ್ಠ ರೂ. ಒಂದು ಲಕ್ಷದವರೆಗೂ ವಾರ್ಷಿಕ ಆದಾಯದಿಂದ ಕಳೆದು, ಉಳಿದು ಮೊತ್ತಕ್ಕೆ ಆದಾಯ ತೆರಿಗೆ ತುಂಬಬಹುದಾದರೂ ಪಿ.ಎಲ್.ಐ ಹಾಗೂ ಎಲ್.ಐ.ಸಿ.ಯಲ್ಲಿ ಉಳಿಸುವ ಹಣ ಕೂಡಾ ಇದೇ ಸೆಕ್ಷನ್ ಆಧಾರದ ಮೇಲೆ ವಿನಾಯತಿ ಪಡೆಯಬಹುದಾಗಿದೆ.
 
ಹಾಗಾಗಿ, ಜಿ.ಪಿ.ಎಫ್, ಪಿ.ಎಲ್.ಐ ಹಾಗೂ ಎಲ್.ಐ.ಸಿ ಯೋಜನೆಗಳಲ್ಲಿ ವಾರ್ಷಿಕ ರೂ. ಒಂದು ಲಕ್ಷ ತುಂಬುತ್ತಾ ಬನ್ನಿ. ಜಿ.ಪಿ.ಎಫ್ ಹೂಡಿಕೆ ಸ್ವಲ್ಪ ಕಡಿಮೆ ಮಾಡಿರಿ, ಎಲ್.ಐ.ಸಿ.ಯ `ಜೀವನ್ ಆನಂದ್~ ಪಾಲಿಸಿ ಮಾಡಿಸಿರಿ. ಇದರಿಂದ ಅಪಾಯ ಅಥವಾ ಕಂಟಕಗಳನ್ನು ಎದುರಿಸಲು ಪೂರ್ವಸಿದ್ಧತೆ ಮಾಡಿದಂತಾಗುತ್ತದೆ.

ಎಂ.ಐ.ಎಸ್ ರೂ 1.5 ಲಕ್ಷದಿಂದ ಪ್ರತಿ ತಿಂಗಳೂ ರೂ1000 ಪಡೆಯುವುದರ ಬದಲಾಗಿ, ಎಂ.ಐ.ಎಸ್ ಅವಧಿ ಮುಗಿಯುತ್ತಲೇ ನಿಮ್ಮ ಸಮೀಪದ ಬ್ಯಾಂಕಿನಲ್ಲಿ ಒಮ್ಮೆಲೇ ಬಡ್ಡಿ ಬರುವ ಮರು ಹೂಡಿಕೆಯ ಠೇವಣಿಯಲ್ಲಿ ಹೂಡಿಕೆ ಮಾಡಿರಿ. ಬಡ್ಡಿ ಕೈಗೆ ಬಂದರೆ ವ್ಯಯವಾಗುವ ಸಂದರ್ಭವಿದೆ.

ಬ್ಯಾಂಕಿನ ಮರುಹೂಡಿಕೆಯಲ್ಲಿ ನಿಮ್ಮ ಹಣ ಪ್ರತಿ ಮೂರು ತಿಂಗಳಿಗೆ ಚಕ್ರಬಡ್ಡಿಯಲ್ಲಿ ವೃದ್ಧಿಯಾಗುತ್ತದೆ. ಪ್ರತಿ ತಿಂಗಳೂ ಆರಂಭಿಸಿದ ರೂ100 ಆರ್.ಡಿ. ರೂ5,400 ಆಗಿದೆ ಎಂದು ತಿಳಿಸಿದ್ದೀರಿ. ಆರ್.ಡಿ. ಪ್ರತಿ ತಿಂಗಳೂ ತುಂಬುವ ಠೇವಣಿ.. ಈ ಎಲ್ಲಾ 54 ಠೇವಣಿ ಮೊತ್ತ ರೂ5,400 ಆಗಿದೆ ಎಂದು ತಿಳಿಸಿದ್ದೀರಿ. ಒಮ್ಮೆ ಆರ್.ಡಿ ಪ್ರಾರಂಭಿಸಿ, ಮುಂದೆ ಪ್ರತಿ ತಿಂಗಳೂ ತುಂಬುತ್ತಾ ಬಂದಲ್ಲಿ ಒಂದನೇ ಆರ್.ಡಿ. ಖಾತೆಯಲ್ಲಿ ಈಗ ರೂ 5,400 ಇರುತ್ತಿತ್ತು. ಒಟ್ಟಿನಲ್ಲಿ ನೀವು ಸರಿಯಾದ ಮಾಹಿತಿ ಕೊಟ್ಟಿಲ್ಲ.

ನೀವು ಹೆಚ್ಚಿನ ಉಳಿತಾಯ ಅಂಚೆ ಕಚೇರಿ ಠೇವಣಿಯಲ್ಲಿ ಹಣ ಹೂಡಿರುತ್ತೀರಿ. ಭದ್ರತೆಯ ದೃಷ್ಟಿಯಲ್ಲಿ ಅಂಚೆ ಕಚೇರಿ ಠೇವಣಿ ಬಹಳ ಉತ್ತಮವಾಗಿದೆ. ಆದರೆ ದ್ರವ್ಯತೆ ಹಾಗೂ ಹೆಚ್ಚಿನ ವರಮಾನದ ದೃಷ್ಟಿಯಿಂದ ಬ್ಯಾಂಕ್ ಠೇವಣಿಗಳೇ ಲೇಸು. ಸಾಧ್ಯವಾದರೆ, ಮೂರು ತಿಂಗಳಿಗೊಮ್ಮೆ 2 ರಿಂದ 5 ಗ್ರಾಂ ಬಂಗಾರದ ನಾಣ್ಯ ಖರೀದಿಸಿ ಬ್ಯಾಂಕ್ ಲಾಕರಿನಲ್ಲಿರಿಸಿರಿ.

ಭೀಮಾಶಂಕರ, ಗುಲ್ಬರ್ಗಾ
ಪ್ರಶ್ನೆ: ನಾನು ರಾಜ್ಯ ಸರಕಾರದ `ಸಿ~ ದರ್ಜೆ ನೌಕರ. ಎಲ್.ಐ.ಸಿ, ಕೆ.ಜಿ.ಐ.ಡಿ, ಆರ್.ಡಿ ಮತ್ತು ಎನ್.ಪಿ.ಎಸ್ ಸೇರಿ ಮಾಸಿಕ ರೂ6,000 ಉಳಿಸುತ್ತಿರುವೆ. ನಾನು ಎನ್.ಪಿ.ಎಸ್ ವ್ಯವಸ್ಥೆಗೊಳಪಡುವುದರಿಂದ ಜಿ.ಪಿ.ಎಫ್ ಪಾಲಿಸಿ ಪಡೆಯಬಹುದೇ?

ಉತ್ತರ:
ತಾವು 2004ಕ್ಕೂ ಮೊದಲು ಸರ್ಕಾರಿ ನೌಕರಿಗೆ ಸೇರಿದಂತೆ ಕಾಣುವುದಿಲ್ಲ. 2004 ನಂತರ ಸೇರಿದವರಿಗೆ ಮಾತ್ರ ಪಿಂಚಣಿ ಸವಲತ್ತು ಇರುವುದಿಲ್ಲ. ಪ್ರಾವಿಡೆಂಟ್ ಫಂಡ್(ಜಿ.ಪಿ.ಎಫ್.) ಕಾಯಿದೆ ಎಂಬುದು, ನೌಕರರ ಮೂಲ ವೇತನದಿಂದ ಮುರಿದುಕೊಂಡಷ್ಟೇ ಹಣವನ್ನು ಸರ್ಕಾರವೂ ಸೇರಿಸಿ ನಿವೃತ್ತಿಯ ಸಮಯದಲ್ಲಿ ಒಂದೇ ಗಂಟಿನಿಂದ ಕೊಡುವ ವ್ಯವಸ್ಥೆಯಾಗಿದೆ.

ಇದು ಸಾಮಾನ್ಯವಾಗಿ ಪಿಂಚಣಿ ಬಾರದಿರುವ ನೌಕರರಿಗೆ ದೊರೆಯುವ ಸೌಲಭ್ಯ. ಇದೇ ವೇಳೆ ಎಲ್.ಐ.ಸಿ, ಆರ್.ಡಿ ಹಾಗೂ ಕೆ.ಜಿ.ಐ.ಡಿ ತುಂಬುವುದಕ್ಕೂ ಪಿಂಚಣಿ ಅಥವಾ ಜಿ.ಪಿ.ಎಫ್ ಇವೆರಡಕ್ಕೂ ಏನೂ ಸಂಬಂಧವಿರುವುದಿಲ್ಲ.

ಹೊಸ ಪಿಂಚಣಿ ಯೋಜನೆ(ಎನ್.ಪಿ.ಎಸ್) ಪಿಂಚಣಿ ಬಾರದವರಿಗೆ, ಕೇಂದ್ರ ಸರ್ಕಾರ ಸೃಷ್ಟಿಸಿದ ಒಂದು ಯೋಜನೆ. ಕೆಲವೆಡೆ, ಅಂದರೆ ಪಿಂಚಣಿ ವ್ಯವಸ್ಥೆ ಇಲ್ಲದೇ ಇರುವಲ್ಲಿ ಜಿ.ಪಿ.ಎಫ್ ಬದಲಾಗಿ, ನೌಕರರಿಂದ ಯಾವುದೋ ಪ್ರಮಾಣದಲ್ಲಿ ಹಣವನ್ನು ಪ್ರತಿ ತಿಂಗಳೂ ಪಡೆದು ಅಷ್ಟೇ ಹಣವನ್ನು ಸಂಸ್ಥೆಯವರೂ ಹಾಕಿ, ಎನ್.ಪಿ.ಎಸ್.ನಲ್ಲಿ ನೌಕರರ ಹೆಸರಿನಲ್ಲಿ ಹಣ ಹೂಡುತ್ತಾರೆ. ಇಂತಹ ವ್ಯವಸ್ಥೆ ಇರುವಾಗ ಪಿ.ಎಫ್ ಪ್ರಯೋಜನವನ್ನು ನೌಕರರು ಪಡೆಯುವಂತಿಲ್ಲ.

ಜಿ.ಪಿ.ಎಫ್ ಕಡಿತವಿರುವವರು ಕೂಡಾ ಸ್ವಯಂಕೃತ ಎನ್.ಪಿ.ಎಸ್ ಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು. ಒಟ್ಟಿನಲ್ಲಿ, ಜಿ.ಪಿ.ಎಫ್ ಹಾಗೂ ಎನ್.ಪಿ.ಎಸ್ ಇವೆರಡೂ ಸರ್ಕಾರದಿಂದ ದೊರೆಯಲಾರದು. ನಿಮಗೆ ಎನ್.ಪಿ.ಎಸ್ ಸರ್ಕಾರದಿಂದಲೇ ಲಭ್ಯವಿರುವಲ್ಲಿ ಪುನಃ ಜಿ.ಪಿ.ಎಫ್ ಪಾಲಿಸಿದಾರರಾಗಲು ಸಾಧ್ಯವಿಲ್ಲ.

ಜ್ಯೋತಿ, ಹಿರೇಪಡಸಾಲಗಿ(ಜಮಖಂಡಿ)
ಪ್ರಶ್ನೆ: ನನಗೆ ಎಸ್.ಬಿ.ಎಂ ಮತ್ತು ಕಾರ್ಪೊರೇಷನ್ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಇವೆ. ಇವೆರಡರಲ್ಲಿ ಯಾವ ಬ್ಯಾಂಕಿನಲ್ಲಿ ಆರ್.ಡಿ ಮಾಡಿದರೆ ಒಳ್ಳೆಯದು? ಯಾವ ಬ್ಯಾಂಕಿನಲ್ಲಿ ಆರ್.ಡಿ ಮಾಡಿದರೆ ಬಡ್ಡಿ ಹೆಚ್ಚಿಗೆ ಸೇರಿಸಿಕೊಡುತ್ತಾರೆ. ಆರ್.ಡಿ ಮಾಡಲು ನಿರ್ದಿಷ್ಟ ವರ್ಷ(ಅವಧಿ) ಏನಾದರೂ ಇವೆಯೇ? ದಯವಿಟ್ಟು ಮಾಹಿತಿ ನೀಡಿ.

ಉತ್ತರ: ಎಸ್.ಬಿ.ಎಂ ಹಾಗೂ ಕಾರ್ಪೊರೇಷನ್ ಬ್ಯಾಂಕ್ ಎರಡೂ ಬಹಳ ಸಧೃಡ ಹಾಗೂ ಉತ್ತಮ ಬ್ಯಾಂಕ್‌ಗಳು. ಠೇವಣಿ ಮೇಲಿನ ಬಡ್ಡಿ ದರದಲ್ಲಿ ಸ್ವಲ್ಪ ವ್ಯತ್ಯಾಸ ಇರಬಹುದು. ನೀವು ಎಷ್ಟು ಹಣ ತಿಂಗಳಿಗೆ ಉಳಿಸಬಹುದು ಎನ್ನುವುದನ್ನು ನಿಶ್ಚಯಿಸಿ ಈ ಎರಡೂ ಬ್ಯಾಂಕಿನಲ್ಲಿ ಸರಿಸಮಾನವಾಗಿ ಎರಡು    ಆರ್.ಡಿ ಆರಂಭಿಸಿ.

ಆರ್.ಡಿ ಖಾತೆ ಪ್ರತಿ ತಿಂಗಳೂ ತುಂಬುವ ಠೇವಣಿಯಾಗಿದ್ದು, ಆರಂಭದಲ್ಲಿ ನಿರ್ಧರಿಸಿದ ಮೊತ್ತವನ್ನೇ ತುಂಬುತ್ತಾ ಬರಬೇಕು. ಉಳಿತಾಯ ಖಾತೆಯಲ್ಲಿ ಬೇಕಾಗಿರುವಷ್ಟು ಹಣವಿರಿಸಿ ಬ್ಯಾಂಕಿಗೆ ಸ್ಟಾಂಡಿಂಗ್ ಇನ್‌ಸ್ಟ್ರಕ್ಷನ್ ಕೊಟ್ಟಲ್ಲಿ ಶುಲ್ಕ ರಹಿತವಾಗಿ ಉಳಿತಾಯ ಖಾತೆಯಿಂದ ಆರ್.ಡಿ ಖಾತೆಗೆ ಪ್ರತಿ ತಿಂಗಳೂ ಹಣ ಜಮಾ ಮಾಡುತ್ತಾರೆ.
 
ಇದರಿಂದ ನೀವು ಆರ್.ಡಿ ತುಂಬಲು ಪ್ರತಿ ತಿಂಗಳೂ ಬ್ಯಾಂಕಿಗೆ ಹೋಗುವ ಪ್ರಮೇಯ ಇರುವುದಿಲ್ಲ.ಆರ್.ಡಿ ಖಾತೆ ಒಂದರಿಂದ ಹತ್ತು ವರ್ಷಗಳ ಅವಧಿಗೆ ತೆರೆಯಬಹುದು. ವ್ಯಕ್ತಿಯ ಮುಂದಿರುವ ಆರ್ಥಿಕ ನಿರ್ವಹಣೆಗಳಿಗೆ ಅನುಗುಣವಾಗಿ ಅವಧಿಯನ್ನು ಆರಿಸಿಕೊಳ್ಳಬೇಕು. ಉದಾಹರಣೆಗೆ ನಿಮ್ಮ ಮಗ ಎಸ್‌ಎಸ್‌ಎಲ್‌ಸಿ ಓದುತ್ತಿದ್ದರೆ ಇನ್ನೆರಡು ವರ್ಷದಲ್ಲಿ ಪದವಿ ವಿದ್ಯಾಭ್ಯಾಸಕ್ಕೆ ಅನುವಾಗುತ್ತಾನೆ.
 
ಇಂಥ ಸಂದರ್ಭದಲ್ಲಿ ಎರಡೇ ವರ್ಷಕ್ಕೆ ಆರ್.ಡಿ ಮಾಡಿರಿ. ಇದೇ ರೀತಿ ಮಗಳ ಲಗ್ನ ಇನ್ನು ಐದು ವರ್ಷದ ನಂತರ ಮಾಡುವ ಯಓಚನೆ ಇದ್ದರೆ ಐದು ವರ್ಷದ ಆರ್.ಡಿ ಮಾಡಿರಿ. ಒಟ್ಟಿನಲ್ಲಿ ನಿಮ್ಮ ಆರ್.ಡಿ ಉಳಿತಾಯ ಉತ್ತಮ ಕಾರ್ಯಕ್ಕೆ ನೆರವಾಗುವಂತಿರಲಿ. ನಿಮಗೊಂದು ಕಿವಿಮಾತು, ದಯಮಾಡಿ ತಕ್ಷಣ ಎರಡು ಆರ್.ಡಿ ಖಾತೆ ಆರಂಭಿಸಿರಿ. ಮುಂದೆ ಠೇವಣಿ ದರ ಕಡಿಮೆಯಾಗುವ ನಿರೀಕ್ಷೆ ಇದೆ. ಮುಂದೆ ಬಡ್ಡಿದರ ಕಡಿಮೆಯಾದರೂ ಈಗ ಆರಂಭಿಸಿದ ಆರ್.ಡಿಗೆ ಇಂದಿನ ಬಡ್ಡಿ ದರವೇ ಮುಂದುವರಿಯುತ್ತದೆ.

ವಿ.ಎಂ. ಪಠಾಣಿ, ಸವದತ್ತಿ
ಪ್ರಶ್ನೆ: ನಾನು ಪ್ರಾಥಮಿಕ ಶಾಲಾ ಶಿಕ್ಷಕ. ತಿಂಗಳ ಸಂಬಳ ರೂ15,000. ಇದರಲ್ಲಿ ಎಲ್.ಐ.ಸಿ, ಕೆ.ಜಿ.ಐ.ಡಿ ಎರಡರಿಂದ ರೂ1700, ಆರ್.ಡಿ.ಗೆ ರೂ. 1000, ಮೂರು ತಿಂಗಳಿಗೊಮ್ಮೆ ಪಿ.ಎಲ್.ಐ ರೂ 1764, ಮನೆ ಖರ್ಚು ರೂ 6,000 ಹೀಗೆ ಎಲ್ಲಾ ಹೋಗಿ ರೂ4,000 ಉಳಿಯುತ್ತದೆ. ಈ ಹಣ ಯಾವುದರಲ್ಲಿ ತೊಡಗಿಸಿದರೆ ಉತ್ತಮ ವರಮಾನ ಬರಬಹುದು ತಿಳಿಸಿರಿ.

ಉತ್ತರ: ತಾವು ಈವರೆಗೆ ಮಾಡುತ್ತಿರುವ ಉಳಿತಾಯದ ಸಿಂಹಪಾಲು, ವಿಮೆಗಾಗಿ ಮೀಸಲಿಟ್ಟಂತೆ ಕಾಣುತ್ತದೆ. ವಿಮೆಯಲ್ಲಿ ಉಳಿತಾಯದ ತತ್ವ ಅಡಕವಾಗಿದ್ದರೂ, ವರಮಾನದ ದೃಷ್ಟಿಯಲ್ಲಿ ಬ್ಯಾಂಕ್ ಠೇವಣಿಯೇ ಲೇಸು.

ಆದರೆ ಕಂಟಕ ಎದುರಿಸುವುದಕ್ಕೆ ವಿಮೆಯೂ ಅವಶ್ಯವಿದೆ. ನಿಮ್ಮ ಪ್ರಕಾರ ಪ್ರತಿ ತಿಂಗಳೂ ರೂ 4,000 ಉಳಿಸಬಹುದು. ನೀವು ಈಗಾಗಲೇ ರೂ1000 ಆರ್.ಡಿ ಮಾಡಿರುವುದರಿಂದ, ನೀವು ಉಳಿಸಬಹುದಾದ ರೂ4,000 ಈ ಕೆಳಗಿನಂತೆ ವಿನಿಯೋಗಿಸಿರಿ.

ಸಂಬಳ ಪಡೆಯುವ ಬ್ಯಾಂಕಿನಲ್ಲಿಯೇ ಸಂಬಳ ಬಂದ ತಕ್ಷಣ ರೂ4,000ಕ್ಕೆ ಕಡಿಮೆಯಾಗದಷ್ಟು ಹಾಗೂ ಸಾಧ್ಯವಾದಲ್ಲಿ ಇನ್ನೂ ಹೆಚ್ಚಿನ ಹಣ, 5 ವರ್ಷಗಳ ಅವಧಿಗೆ ಮರುಹೂಡಿಕೆಯ, ಒಮ್ಮಲೇ ಬಡ್ಡಿ ಪಡೆಯುವ ಠೇವಣಿಯಲ್ಲಿ ಪ್ರತಿ ತಿಂಗಳೂ ಹೂಡುತ್ತಾ ಬನ್ನಿರಿ. ಸಾಮಾನ್ಯವಾಗಿ ಆರು ತಿಂಗಳಿಗೊಮ್ಮೆ ನಿಮ್ಮ ತುಟ್ಟಿಭತ್ಯೆ ಏರುತ್ತಿರುವುದರಿಂದ, ಹೀಗೆ ಬಂದಿರುವ ಹೆಚ್ಚಿನ ಹಣ ಸೇರಿಸಿ ಮುಂದೆ ಇದೇ ರೀತಿ ಠೇವಣಿ ಮಾಡುತ್ತಾ ಬನ್ನಿರಿ.

ಆರ್.ಡಿ. ಠೇವಣಿಯಲ್ಲಿ ಒಮ್ಮೆ ನಿರ್ಧರಿಸಿದ ಮೊತ್ತ ಮುಂದೆ ಬದಲಾಯಿಸುವಂತಿಲ್ಲ. ಆದರೆ ಮರು ಹೂಡಿಕೆಯ ಠೇವಣಿಯಲ್ಲಿ ಎಷ್ಟು ಬೇಕಾದರೂ ಯಾವಾಗ ಬೇಕಾದರೂ ಹಣ ಹೂಡಬಹುದು. ಕನಿಷ್ಠ ರೂ4,000 ಗುರಿ ಇರಿಸಿ, ನಿಮ್ಮ ಇತರೆ ಖರ್ಚು ಹಾಗೂ ಆದಾಯ ಪರಿಗಣಿಸಿ ಎಷ್ಟಾದರಷ್ಟು ಮೊತ್ತವನ್ನು ಸಂಬಳ ಬಂದ ತಕ್ಷಣ ಮರುಹೂಡಿಕೆಯ ಠೇವಣಿಯಲ್ಲಿ, ಪ್ರತಿತಿಂಗಳೂ ಉಳಿಸುತ್ತಾ ಬಂದು, ಮುಂದೆ ಅವಧಿ ಮುಗಿಯುತ್ತಲೇ ಪುನಃ ಐದು ವರ್ಷಗಳ ಅವಧಿಗೆ ಠೇವಣಿ ಮುಂದುವರಿಸುತ್ತಾ ಬನ್ನಿರಿ.

ರೂ1000 ಮೊತ್ತದ ಠೇವಣಿಯು ಐದು ವರ್ಷಗಳಲ್ಲಿ ಬಡ್ಡಿ ಸೇರಿಸಿ ರೂ 1,560.50 ಆಗುತ್ತದೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.