ADVERTISEMENT

ಫೆಬ್ರುವರಿ `ಎಫ್‌ಡಿಐ' ಶೇ19 ಇಳಿಕೆ

2012-13ನೇ ಹಣಕಾಸು ವರ್ಷ; 11ತಿಂಗಳಿಗೆ 2089 ಕೋಟಿ ಡಾಲರ್

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2013, 19:59 IST
Last Updated 22 ಏಪ್ರಿಲ್ 2013, 19:59 IST

ನವದೆಹಲಿ(ಪಿಟಿಐ): ದೇಶಕ್ಕೆ ಫೆಬ್ರುವರಿಯಲ್ಲಿ ಕೇವಲ 179 ಕೋಟಿ ಡಾಲರ್(ರೂ.9666 ಕೋಟಿ) ನೇರ ವಿದೇಶಿ ಹೂಡಿಕೆ (ಎಫ್‌ಡಿಐ) ಹರಿದುಬಂದಿದೆ. 2012ರಲ್ಲಿ ಹೂಡಿಕೆಯಾಗಿದ್ದ 221 ಕೋಟಿ ಡಾಲರ್(ರೂ.11,934 ಕೋಟಿ)ಗೆ ಹೋಲಿಸಿದರೆ ಈ ಬಾರಿ ಶೇ 19ರಷ್ಟು ಇಳಿಕೆಯಾಗಿದೆ.
ಜನವರಿಯಲ್ಲಿ ಮಾತ್ರ 215 ಕೋಟಿ ಡಾಲರ್(ರೂ.11,610 ಕೋಟಿ) ನೇರ ವಿದೇಶಿ ಹೂಡಿಕೆ ಬಂದಿತ್ತು. 

2012-13ನೇ ಹಣಕಾಸು ವರ್ಷದಲ್ಲಿ ಏಪ್ರಿಲ್‌ನಿಂದ ಫೆಬ್ರುವರಿವರೆಗೆ ಒಟ್ಟು 2089 ಕೋಟಿ (ರೂ.1,12,806 ಕೋಟಿ) `ಎಫ್‌ಡಿಐ' ಬಂದಿದ್ದರೂ, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಭಾರಿ ಪ್ರಮಾಣದಲ್ಲಿ(ಶೇ 38ರಷ್ಟು) ಕುಸಿತವಾಗಿದೆ. ಮುಖ್ಯವಾಗಿ ಯೂರೋಪ್ ವಲಯ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಕಳೆದ ವರ್ಷ ಆರ್ಥಿಕ ಹಿಂಜರಿತದ ಕಾರ್ಮೋಡ ಕವಿದಿದ್ದೇ ಈ ಕುಸಿತಕ್ಕೆ ಕಾರಣ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಮಾರಿಷಸ್ ಮುಂದು
ಭಾರತಕ್ಕೆ ಹೆಚ್ಚಿನ `ಎಫ್‌ಡಿಐ' ಬಂದಿರುವುದು ಮಾರಿಷಸ್‌ನಿಂದ. ಈ ದ್ವೀಪರಾಷ್ಟ್ರದ ಹೂಡಿಕೆ ಸಂಸ್ಥೆಗಳು ಭಾರತದಲ್ಲಿ ಕಳೆದ ಹಣಕಾಸು ವರ್ಷದ 11 ತಿಂಗಳಲ್ಲಿ 897 ಕೋಟಿ ಡಾಲರ್ ಬಂಡವಾಳ ತೊಡಗಿಸಿವೆ. ಜಪಾನ್‌ನಿಂದ 211 ಕೋಟಿ, ಸಿಂಗಪುರದಿಂದ 198 ಕೋಟಿ, ನೆದರಲೆಂಡ್‌ನಿಂದ 167 ಕೋಟಿ ಮತ್ತು ಯುನೈಟೆಡ್ ಕಿಂಗ್ಡಮ್‌ನಿಂದ 106 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಹೂಡಿಕೆ ಆಗಿದೆ.

ಸೇವಾ ವಲಯಕ್ಕೇ ಹೆಚ್ಚು
ಇದಿಷ್ಟೂ `ಎಫ್‌ಡಿಐ'ನಲ್ಲಿ ಹೆಚ್ಚಿನ ಪಾಲು ಪಡೆದಿರುವುದು ಸೇವಾ ವಲಯ. ಮಾಹಿತಿ ತಂತ್ರಜ್ಞಾನ ಸೇರಿದಂತೆ ವಿವಿಧ ವಿಭಾಗಗಳ ಸೇವಾ ವಲಯ 11 ತಿಂಗಳಲ್ಲಿ ಒಟ್ಟು 474 ಕೋಟಿ ಡಾಲರ್ ವಿದೇಶಿ ಸಾಂಸ್ಥಿಕ ಹೂಡಿಕೆ ಸ್ವೀಕರಿಸಿದೆ. ಹೋಟೆಲ್ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ 321 ಕೋಟಿ, ಲೋಹ ಉದ್ಯಮಕ್ಕೆ 139 ಕೋಟಿ, ಕಟ್ಟಡ ನಿರ್ಮಾಣ ವಿಭಾಗಕ್ಕೆ 126 ಕೋಟಿ ಮತ್ತು ಔಷಧ ತಯಾರಿಕೆ ವಲಯಕ್ಕೆ 111 ಕೋಟಿ ನೇರ ವಿದೇಶಿ ಹೂಡಿಕೆ ದೊರಕಿದೆ ಎಂದು ಅಧಿಕಾರಿಗಳು ವಿವರ ನೀಡಿದ್ದಾರೆ.

`ಇನ್ನಷ್ಟು ಸುಧಾರಣೆ ಅಗತ್ಯ'
`ಆದರೂ ದೇಶಕ್ಕೆ ಬರುತ್ತಿರುವ ನೇರ ವಿದೇಶಿ ಹೂಡಿಕೆ ಪ್ರಮಾಣ ಏನೇನೂ ಸಾಲದು. ಇದನ್ನು ಇನ್ನಷ್ಟು ಹೆಚ್ಚಿಸಬೇಕೆಂದರೆ ದೇಶದ ಉದ್ಯಮ ವಲಯದ ಪರಿಸ್ಥಿತಿಯಲ್ಲಿ ಸಾಕಷ್ಟು ಸುಧಾರಣೆ ಆಗಬೇಕಿದೆ' ಎಂದು ತೆರಿಗೆ ಮತ್ತು ಎಫ್‌ಡಿಐ ಕ್ಷೇತ್ರದ ಅನುಭವಿ ಕೃಷ್ಣ ಮಲ್ಹೋತ್ರ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ಕೆಲವು ಸುಧಾರಣಾ ಕ್ರಮಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಇದು ಸ್ವಾಗತಾರ್ಹ. ಆದರೂ ಇನ್ನಷ್ಟು ಪ್ರೋತ್ಸಾಹದಾಯಕ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ ಎಂದು ಸುದ್ದಿಸಂಸ್ಥೆಗೆ ಮಲ್ಹೋತ್ರ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.