ADVERTISEMENT

ಫ್ಲಿಪ್‌ಕಾರ್ಟ್‌ನ ಶೇ 51 ಷೇರು ಖರೀದಿಗೆ ವಾಲ್‌ಮಾರ್ಟ್‌ ಯತ್ನ

ಪಿಟಿಐ
Published 12 ಏಪ್ರಿಲ್ 2018, 19:30 IST
Last Updated 12 ಏಪ್ರಿಲ್ 2018, 19:30 IST

ನವದೆಹಲಿ: ವಿಶ್ವದ ಅತಿದೊಡ್ಡ ರಿಟೇಲ್‌ ಮಾರಾಟ ಸಂಸ್ಥೆಯಾಗಿರುವ ವಾಲ್‌ಮಾರ್ಟ್‌, ಬೆಂಗಳೂರಿನ ಇ–ಕಾಮರ್ಸ್‌ ದೈತ್ಯ ಸಂಸ್ಥೆ ಫ್ಲಿಪ್‌ಕಾರ್ಟ್‌ನಲ್ಲಿ ಷೇರು ಖರೀದಿಸುವ ಪ್ರಯತ್ನವನ್ನು ಮುಂದುವರಿಸಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಶೇ 51 ರಷ್ಟು ಷೇರುಗಳನ್ನು ಖರೀದಿಸಲು ಮುಂದಾಗಿದ್ದು, ಜೂನ್‌ ವೇಳೆಗೆ ಈ ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆ ಇದೆ.

ಫ್ಲಿಪ್‌ಕಾರ್ಟ್‌ ಮತ್ತು ಅದರ ಹೂಡಿಕೆದಾರರಿಂದ ಷೇರುಗಳನ್ನು ಖರೀದಿಸುವ ಬಗ್ಗೆ ವಾಲ್‌ಮಾರ್ಟ್ ಮಾತುಕತೆ ನಡೆಸುತ್ತಿದೆ. ಇದು ಇನ್ನೂ ಅಂತಿಮ ಹಂತ ತಲುಪಬೇಕಾಗಿದೆ. ಎರಡು ಕಂತುಗಳಲ್ಲಿ ಷೇರು ಖರೀದಿ ವಹಿವಾಟು ನಡೆಯುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಎರಡೂ ಸಂಸ್ಥೆಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ADVERTISEMENT

ಪೈಪೋಟಿ: ಭಾರತದ ರಿಟೇಲ್‌ ಮಾರುಕಟ್ಟೆಯಲ್ಲಿ ವಹಿವಾಟು ವಿಸ್ತರಿಸುವ ಉದ್ದೇಶದಿಂದ ವಾಲ್‌ಮಾರ್ಟ್‌ ಈ ಹೂಡಿಕೆಗೆ ಮುಂದಾಗಿದೆ.

ಹೂಡಿಕೆ ಒಪ್ಪಂದ ಅಂತಿಮವಾದರೆ ಭಾರತದಲ್ಲಿ ಉತ್ತಮ ವಹಿವಾಟು ನಡೆಸುತ್ತಿರುವ ಅಮೆಜಾನ್‌ಗೆ ಪ್ರಬಲ ಸ್ಪರ್ಧೆ ನೀಡಬಹುದು ಎನ್ನುವುದು ವಾಲ್‌ಮಾರ್ಟ್‌ನ ಉದ್ದೇಶವಾಗಿದೆ. ಇದರಿಂದ ಫ್ಲಿಪ್‌ಕಾರ್ಟ್‌ಗೆ ಸಹ ದೇಶಿ ಮಾರುಕಟ್ಟೆಯಲ್ಲಿ ಅಮೆಜಾನ್‌ಗೆ ತೀವ್ರ ಪೈಪೋಟಿ ನೀಡಲು ಅವಕಾಶ ಲಭ್ಯವಾಗಲಿದೆ. ಆದರೆ, ಅಮೆಜಾನ್‌ ಕೂಡಾ ಫ್ಲಿಪ್‌ಕಾರ್ಟ್‌ನಲ್ಲಿ ಹೂಡಿಕೆ ಮಾಡಲು ಉತ್ಸಾಹ ತೋರಿದೆ.

ಕಳೆದ ವರ್ಷ ಸಾಫ್ಟ್‌ಬ್ಯಾಂಕ್‌ ಸಂಸ್ಥೆಯು ಫ್ಲಿಪ್‌ಕಾರ್ಟ್‌ನಲ್ಲಿ ₹ 16,250 ಕೋಟಿ ಹೂಡಿಕೆ ಮಾಡಿತ್ತು. ಇಬೇ, ಟೆನ್ಸೆಂಟ್ ಹೋಲ್ಡಿಂಗ್ಸ್‌ ಮತ್ತು ಮೈಕ್ರೊಸಾಪ್ಟ್‌ ಕಾರ್ಪ್‌ ಸಂಸ್ಥೆಗಳಿಂದಲೂ ಫ್ಲಿಪ್‌ಕಾರ್ಟ್‌ ಬಂಡವಾಳ ಸಂಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.