ನವದೆಹಲಿ (ಪಿಟಿಐ): ಬಜೆಟ್ ನಂತರ ವಾಹನಗಳ ಬೆಲೆ ಹೆಚ್ಚಲಿದೆ ಎನ್ನುವ ಕಾರಣಕ್ಕೆ ಮಾರ್ಚ್ ತಿಂಗಳಲ್ಲಿ ಒಟ್ಟು ವಾಹನಗಳ ಮಾರಾಟ ದಾಖಲೆ ಏರಿಕೆ ಕಂಡಿದೆ. ಟಾಟಾ ಮೋಟಾರ್ಸ್, ಮಹೀಂದ್ರಾ ಅಂಡ್ ಮಹೀಂದ್ರಾ, ಟೋಯೊಟಾ ಸೇರಿದಂತೆ ದೇಶದ ಪ್ರಮುಖ 7 ವಾಹನ ತಯಾರಿಕೆ ಕಂಪನಿಗಳು ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿವೆ.
1ಲಕ್ಷದ ಗಡಿ ದಾಟಿದ ಟಾಟಾ: ಟಾಟಾ ಮೋಟಾರ್ಸ್ ಮಾರ್ಚ್ ತಿಂಗಳಲ್ಲಿ ಒಟ್ಟು 1,00,414 ವಾಹನ ಮಾರಾಟ ಮಾಡಿದ್ದು, ತಿಂಗಳ ಮಾರಾಟದಲ್ಲಿ ಒಂದು ಲಕ್ಷದ ಗಡಿ ದಾಟಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಒಟ್ಟು ಮಾರಾಟ ಶೇ 20ರಷ್ಟು ಪ್ರಗತಿ ದಾಖಲಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಶೇ 34ರಷ್ಟು ಪ್ರಗತಿ ಕಂಡಿದೆ. ಒಟ್ಟು 58,063 ವಾಣಿಜ್ಯ ಬಳಕೆಯ ವಾಹನಗಳು ಮಾರಾಟವಾಗಿದ್ದು, ಶೇ 17ರಷ್ಟು ಏರಿಕೆಯಾಗಿದೆ.
ಬಜೆಟ್‌ನಲ್ಲಿ ಅಬಕಾರಿ ತೆರಿಗೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಕಾರುಗಳ ಬೆಲೆ ಗರಿಷ್ಠ ್ಙ3 ಲಕ್ಷದವರೆಗೆ ಹೆಚ್ಚಾಗಿದೆ. ಈ ಭಯದಿಂದ ಅನೇಕರು ಬಜೆಟ್ ಪೂರ್ವದಲ್ಲೇ ಬುಕ್ಕಿಂಗ್ ಮಾಡಿದ್ದಾರೆ ಎಂದು ಟೋಯೊಟಾ ಕಿರ್ಲೋಸ್ಕರ್ ಮೋಟಾರ್‌ನ (ಟಿಕೆಎಂ) ಸಹಾಯಕ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಸಿಂಗ್ ಹೇಳಿದ್ದಾರೆ.
ಅಬಕಾರಿ ತೆರಿಗೆ, ನೋಂದಣಿ ಶುಲ್ಕ, ಮತ್ತು ಮೌಲ್ಯವರ್ಧಿತ ತೆರಿಗೆ ಹೆಚ್ಚಳದ ಪರಿಣಾಮವು ಮುಂಬರುವ ತಿಂಗಳಲ್ಲಿ ಕಾಣಿಸಿಕೊಳ್ಳಲಿದೆ ಎಂದೂ ಅವರು ಹೇಳಿದ್ದಾರೆ.
ಟೋಯೊಟಾ ಮಾರಾಟವು ಮಾರ್ಚ್ ತಿಂಗಳಲ್ಲಿ 87ರಷ್ಟು ಪ್ರಗತಿ ಕಂಡಿದೆ. ಈ ಅವಧಿಯಲ್ಲಿ ಕಂಪೆನಿ ಒಟ್ಟು 18,220 ವಾಹನಗಳನ್ನು ಮಾರಾಟ ಮಾಡಿದ್ದು, ಇಟಿಯೋಸ್ ಮತ್ತು ಲಿವಾ ಮಾದರಿಗಳ ಮಾರಾಟವು ಸಾರ್ವಕಾಲಿಕ ದಾಖಲೆ ಕಂಡಿದೆ ಎಂದು ಹೇಳಿದೆ.
ಮಹೀಂದ್ರಾ ಅಂಡ್ ಮಹೀಂದ್ರಾ ಒಟ್ಟು 47,011 ವಾಹನಗಳನ್ನು ಮಾರಾಟ ಮಾಡಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 25ರಷ್ಟು ಪ್ರಗತಿ ಕಂಡಿದೆ. ಹೋಂಡಾ ಸಿಯಲ್ ಕಾರುಗಳ ಮಾರಾಟ ಮೂರು ಪಟ್ಟು ಹೆಚ್ಚಳವಾಗಿದ್ದು, ಒಟ್ಟು 11,016 ಕಾರುಗಳು ಮಾರಾಟವಾಗಿವೆ. ಜರ್ಮನಿ ಮೂಲದ ವಿಲಾಸಿ ಕಾರು ತಯಾರಿಕಾ ಕಂಪನಿ ಆಡಿ ಈ ಅವಧಿಯಲ್ಲಿ ಶೇ 47ರಷ್ಟು ಪ್ರಗತಿ ದಾಖಲಿಸಿದ್ದು, 1,002 ಕಾರುಗಳನ್ನು ಮಾರಾಟ ಮಾಡಿದೆ.
ಮಾರುತಿ ಪ್ರಗತಿ: ಮಾರುಕಟ್ಟೆ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಈ ಅವಧಿಯಲ್ಲಿ ಒಟ್ಟು 1,25,952 ಕಾರುಗಳನ್ನು ಮಾರಾಟ ಮಾಡಿದ್ದು ಶೇ3ರಷ್ಟು ಪ್ರಗತಿ ದಾಖಲಿಸಿದೆ. ಹುಂಡೈ ಮೋಟಾರ್ ಇಂಡಿಯಾದ ಒಟ್ಟಾರೆ ಮಾರಾಟ ಶೇ 6ರಷ್ಟು ಹೆಚ್ಚಿದು, ಒಟ್ಟು 59,229 ಕಾರುಗಳು ಮಾರಾಟವಾಗಿವೆ.
ದ್ವಿಚಕ್ರ ವಾಹನ: ಯಮಹಾ ಇಂಡಿಯಾ ಶೇ 14ರಷ್ಟು ಮಾರಾಟ ಪ್ರಗತಿ ಕಂಡಿದ್ದು, ಒಟ್ಟು 41,886 ವಾಹನಗಳು ಮಾರಾಟವಾಗಿವೆ.
ಹೀರೊ ಮೋಟೊ ಕಾರ್ಪ್ ಒಟ್ಟು 62,35,205 ವಾಹನಗಳನ್ನು ಮಾರಾಟ ಮಾಡಿದ್ದು, ಶೇ 15ರಷ್ಟು ಪ್ರಗತಿ ಕಂಡಿದೆ. ಇದು ತಿಂಗಳ ದಾಖಲೆ ಮಾರಾಟ ಎಂದು ಕಂಪನಿ ಹೇಳಿದೆ.
ಟಿವಿಎಸ್ ಮಾರಾಟ ಈ ಅವಧಿಯಲ್ಲಿ ಶೇ 4ರಷ್ಟು ಕುಸಿತ ಕಂಡಿದೆ. ಸುಜುಕಿ ಮೋಟಾರ್ ಸೈಕಲ್ಸ್ ಮಾರಾಟ ಶೇ 28ರಷ್ಟು ಏರಿಕೆಯಾಗಿದೆ. ಹೋಂಡಾ ಮೋಟಾರ್ ಸೈಕಲ್ಸ್ ಶೇ 50ರಷ್ಟು ಪ್ರಗತಿ ದಾಖಲಿಸಿದ್ದು, ಈ ಅವಧಿಯಲ್ಲಿ ಒಟ್ಟು 1,47,301 ದ್ವಿಚಕ್ರವಾಹನಗಳನ್ನು ಮಾರಾಟ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.