ADVERTISEMENT

ಬಡ್ಡಿ ದರ ಹೆಚ್ಚಳ: ಆರ್‌ಬಿಐ ಇಂಗಿತ

​ಪ್ರಜಾವಾಣಿ ವಾರ್ತೆ
Published 24 ಜನವರಿ 2011, 19:30 IST
Last Updated 24 ಜನವರಿ 2011, 19:30 IST

ನವದೆಹಲಿ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್, ಮಂಗಳವಾರ ಪ್ರಕಟಿಸಲಿರುವ  ತನ್ನ ತ್ರೈಮಾಸಿಕ ಹಣಕಾಸು ಸಾಧನೆ ಪರಾಮರ್ಶೆಯಲ್ಲಿ ಅಲ್ಪಾವಧಿ ಬಡ್ಡಿ ದರಗಳನ್ನು ಇನ್ನಷ್ಟು ಹೆಚ್ಚಿಸುವ ಬಗ್ಗೆ ಇಂಗಿತ ವ್ಯಕ್ತಪಡಿಸಿದೆ.

ಗರಿಷ್ಠ ಪ್ರಮಾಣದಲ್ಲಿ ಇರುವ ಬೆಲೆ ಏರಿಕೆ ಪರಿಸ್ಥಿತಿಯು ಆರ್ಥಿಕ ವೃದ್ಧಿ ದರದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಹಣದುಬ್ಬರ ನಿಯಂತ್ರಿಸುವುದು ಮೊದಲ ಆದ್ಯತೆ ಆಗಿರಲಿದೆ ಎಂದು ಬ್ಯಾಂಕ್ ಸೋಮವಾರ ಇಲ್ಲಿ ಬಿಡುಗಡೆ ಮಾಡಿರುವ ಅರ್ಥ ವ್ಯವಸ್ಥೆಯ ಪರಾಮರ್ಶೆ  ವರದಿಯಲ್ಲಿ ಅಭಿಪ್ರಾಯಪಟ್ಟಿದೆ.

ಹಣದುಬ್ಬರವು ಇನ್ನಷ್ಟು ಹೆಚ್ಚುವ ಸಾಧ್ಯತೆಗಳು ಕಂಡು ಬಂದಿದ್ದು, ಇದು ಆರ್ಥಿಕ ಬೆಳವಣಿಗೆಯ ಉದ್ದೇಶಕ್ಕೆ ಅಪಾಯಕಾರಿಯಾಗಲಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರೀಯ ಬ್ಯಾಂಕ್‌ನ   ಅಲ್ಪಾವಧಿ ನೀತಿ ನಿರೂಪಣಾ ದರಗಳಾದ ರೆಪೊ ಮತ್ತು ರಿವರ್ಸ್ ರೆಪೊ ದರಗಳು ಶೇ 0.25ರಿಂದ ಶೇ 0.50ರಷ್ಟು ಹೆಚ್ಚುವ ಸಾಧ್ಯತೆಗಳು ಇವೆ ಎಂದು ವಾಣಿಜ್ಯ ಬ್ಯಾಂಕ್‌ಗಳ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ.

ತಯಾರಿಕಾ ವೆಚ್ಚ ಹೆಚ್ಚಿರುವ ಜತೆಗೆ ಈಗ ‘ಆರ್‌ಬಿಐ’ ನೀತಿಯಿಂದ ಸಾಲದ ಮೇಲಿನ ಬಡ್ಡಿ ದರಹೆಚ್ಚಾಗಲಿದ್ದು, ಉದ್ಯಮ ವಲಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಫಿಕ್ಕಿ) ಹೇಳಿದೆ.

ಪ್ರತಿಕೂಲ ಪರಿಣಾಮ: ಹಣದುಬ್ಬರ ಏರಿಕೆ ನಿಯಂತ್ರಿಸಲು ‘ಆರ್‌ಬಿಐ’  ಪ್ರಕಟಿಸಲಿರುವ ಹಣಕಾಸು ನೀತಿಯ ಪರಾಮರ್ಶೆಯು, ದೇಶದ ಒಟ್ಟಾರೆ  ಕೈಗಾರಿಕಾ ಬೆಳವಣಿಗೆ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಆನಂದ ಶರ್ಮಾ ಹೇಳಿದ್ದಾರೆ.

‘ಹಣದುಬ್ಬರ ನಿಯಂತ್ರಿಸಲು ‘ಆರ್‌ಬಿಐ’ ಅಲ್ಪಾವಧಿ ಬಡ್ಡಿ ದರಗಳನ್ನು ಮತ್ತೆ ಹೆಚ್ಚಿಸುವುದು ಸೂಕ್ತವಾದ ಕ್ರಮ ಅಲ್ಲ. ಕೈಗಾರಿಕಾ ರಂಗಕ್ಕೆ ಸರಳವಾಗಿ ಸಾಲ ಲಭಿಸುವಂತಾಗಬೇಕು. ಉದ್ಯಮ ರಂಗದ ಚೇತರಿಕೆಗೆ ‘ಸುಸ್ಥಿರ’ ನೀತಿಯ ಅಗತ್ಯವಿದೆ’ ಎಂದು  ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರಿಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ.

ನವೆಂಬರ್ ತಿಂಗಳಲ್ಲಿ ಕೈಗಾರಿಕಾ  ವೃದ್ಧಿ  ದರ ಕಳೆದ 18 ತಿಂಗಳಲ್ಲೇ ಕನಿಷ್ಠ ಎನ್ನಬಹುದಾದ ಶೇ 2.7ಕ್ಕೆ ಕುಸಿದಿದೆ. ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಮೇಲ್ಮಟ್ಟದಲ್ಲೇ ಮುಂದುವರೆದಿದ್ದು, ಈಗ  ‘ಆರ್‌ಬಿಐ’ ಅಲ್ಪಾವಧಿ ಬಡ್ಡಿ ದರವನ್ನು ಹೆಚ್ಚಿಸುವುದು ಸೂಕ್ತ ಕ್ರಮವಾಗಿ ನನಗೆ ಕಾಣುತ್ತಿಲ್ಲ’ ಎಂದು ಅವರು ಹೇಳಿದ್ದಾರೆ.

ಸದ್ಯ ಆಹಾರ ಹಣದುಬ್ಬರ ದರ ಶೇಕಡ 16.91ರಷ್ಟಿದೆ. ಹಣದುಬ್ಬರ ತಡೆಯಲು ಬಡ್ಡಿ ದರ ಹೆಚ್ಚಿಸುವುದು ಅನಿವಾರ್ಯವಾದರೂ, ಇದು ಕೈಗಾರಿಕಾ ರಂಗದ ಮೇಲೆ, ವಿಶೇಷವಾಗಿ ತಯಾರಿಕೆ, ಮೂಲಸೌಕರ್ಯದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು ಎಂದು ಆನಂದ್ ಶರ್ಮಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.