ADVERTISEMENT

ಬಡ್ಡಿ ರಿಯಾಯ್ತಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 19:30 IST
Last Updated 28 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ಗೃಹ ನಿರ್ಮಾಣ ಚಟುವಟಿಕೆ ಉತ್ತೇಜಿಸಲು ಕೇಂದ್ರ ಸರ್ಕಾರ ಒದಗಿಸುತ್ತಿರುವ ಶೇ 1ರಷ್ಟು ಬಡ್ಡಿ ರಿಯಾಯ್ತಿ ಸೌಲಭ್ಯವನ್ನು ಈಗ   ರೂ 15 ಲಕ್ಷದವರೆಗಿನ ಗೃಹ ಸಾಲಕ್ಕೂ ವಿಸ್ತರಿಸಲಾಗಿದೆ.

ಭಾರತೀಯ ರಿಸರ್ವ್‌ಬ್ಯಾಂಕ್‌ನ ಕಠಿಣ ಹಣಕಾಸು ನೀತಿಯ ಕಾರಣಕ್ಕೆ ಗೃಹ ಸಾಲ ಬಡ್ಡಿ ದರಗಳು ಏರುಗತಿಯಲ್ಲಿಯೇ ಇರುವ ಹಿನ್ನೆಲೆಯಲ್ಲಿ, ಸಣ್ಣ ಮತ್ತು ಮಧ್ಯಮ ವರ್ಗದವರಿಗೆ ಕೆಲಮಟ್ಟಿಗೆ ಪರಿಹಾರ ಒದಗಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಗೃಹ ನಿರ್ಮಾಣ ವೆಚ್ಚವು  ರೂ 25 ಲಕ್ಷದವರೆಗೆ ಇದ್ದರೆ ಮಾತ್ರ ಈ ರಿಯಾಯ್ತಿ ದೊರೆಯಲಿದೆ. ಈ ಯೋಜನೆ ಕಾರ್ಯಗತಗೊಳಿಸಲು 2011-12ನೇ ಹಣಕಾಸು ವರ್ಷದ ಬಜೆಟ್‌ನಲ್ಲಿ   ರೂ 500 ಕೋಟಿಗಳನ್ನು ಮೀಸಲು ಇರಿಸಲಾಗಿದೆ.

2009ರ ಸೆಪ್ಟೆಂಬರ್ ತಿಂಗಳಿನಿಂದಲೇ ಜಾರಿಯಲ್ಲಿ ಇರುವ  ಯೋಜನೆಯಲ್ಲಿ ಈಗ ಇನ್ನಷ್ಟು ಸುಧಾರಣೆ ತರಲಾಗಿದೆ. ಹಳೆಯ ಯೋಜನೆಯಡಿ  ರೂ10 ಲಕ್ಷದವರೆಗಿನ ಗೃಹ ಸಾಲಕ್ಕೆ ಶೇ 1ರಷ್ಟು ಬಡ್ಡಿ ರಿಯಾಯ್ತಿ ನೀಡಲಾಗುತ್ತಿದೆ. ಈ ರಿಯಾಯ್ತಿ ಪಡೆಯಲು ಗೃಹ ನಿರ್ಮಾಣ ವೆಚ್ಚ ರೂ 20 ಲಕ್ಷ ಮೀರಿರಬಾರದು ಎನ್ನುವ ನಿಬಂಧನೆ ಇದೆ. ಈಗ ಈ ಮಿತಿಯನ್ನು ಕ್ರಮವಾಗಿ  ರೂ 15 ಲಕ್ಷವರೆಗಿನ ಸಾಲಕ್ಕೆ ಮತ್ತು  ರೂ25 ಲಕ್ಷವರೆಗಿನ ನಿರ್ಮಾಣ ವೆಚ್ಚಕ್ಕೆ ವಿಸ್ತರಿಸಲಾಗಿದೆ.

ಪೂರ್ವ ಪಾವತಿ ದಂಡ: ಗೃಹ ನಿರ್ಮಾಣ  ಸಾಲವನ್ನು  ಅವಧಿಗೆ ಮುಂಚೆ ಮರುಪಾವತಿಸಿದರೆ ಅದಕ್ಕೆ ವಾಣಿಜ್ಯ ಬ್ಯಾಂಕ್‌ಗಳೂ `ಪೂರ್ವ ಪಾವತಿ ದಂಡ~ ವಿಧಿಸಬಾರದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಭಿಪ್ರಾಯಪಟ್ಟಿದೆ. ಇದರಿಂದ ಗೃಹ ಸಾಲವನ್ನು ಅವಧಿಗೆ ಮುಂಚೆಯೇ ಪಾವತಿಸುವವರಿಗೆ ಪರಿಹಾರ ದೊರೆಯಲಿದೆ.ದಾಮೋದರನ್ ಸಮಿತಿಯ ಶಿಫಾರಸುಗಳನ್ನು ಕಾರ್ಯಗತಗೊಳಿಸಲು ಆರ್‌ಬಿಐ ಮುಂದಾಗಿದೆ. ಬ್ಯಾಂಕ್ ಸೇವೆಗಳಲ್ಲಿ ಸುಧಾರಣೆ ತರಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಲು ಈ ಸಮಿತಿ ರಚಿಸಲಾಗಿತ್ತು.

 ಇಂತಹ ಸೌಲಭ್ಯವನ್ನು  ಗೃಹ ನಿರ್ಮಾಣ ಹಣಕಾಸು ಸಂಸ್ಥೆಗಳು (ಎಚ್‌ಎಫ್‌ಸಿ) ಜಾರಿಗೆ ತರಬೇಕೆಂದು ನ್ಯಾಷನಲ್ ಹೌಸಿಂಗ್ ಬ್ಯಾಂಕ್ ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.