ADVERTISEMENT

ಬರಲಿವೆ ಬಣ್ಣ ಬದಲಿಸುವ ಊಸರವಳ್ಳಿ ಕಾರುಗಳು!

ಗವಿ ಬ್ಯಾಳಿ
Published 18 ಜುಲೈ 2017, 19:30 IST
Last Updated 18 ಜುಲೈ 2017, 19:30 IST
ಬರಲಿವೆ ಬಣ್ಣ ಬದಲಿಸುವ ಊಸರವಳ್ಳಿ ಕಾರುಗಳು!
ಬರಲಿವೆ ಬಣ್ಣ ಬದಲಿಸುವ ಊಸರವಳ್ಳಿ ಕಾರುಗಳು!   

ಒಂದೇ ಬಣ್ಣದ ಕಾರುಗಳಿಂದ ಬೇಸತ್ತ ಕಾರುಪ್ರಿಯರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಊಸರವಳ್ಳಿಯಂತೆ ಕಾರುಗಳು ಕೂಡ ಬಣ್ಣ ಬದಲಿಸಬಹುದಾದ ಹೊಸ ತಂತ್ರಜ್ಞಾನವನ್ನು ಬೆಂಗಳೂರಿನ ಎಂಜಿನಿಯರ್‌ ಶ್ರೀನಿವಾಸ್ ಡಿ.ಎಸ್‌ ಅಭಿವೃದ್ಧಿಪಡಿಸಿದ್ದಾರೆ.

ನವನವೀನ ತಂತ್ರಜ್ಞಾನ, ಹೊಸ ವಿನ್ಯಾಸದ ವೈವಿಧ್ಯಮಯ ತರಹೆವಾರಿ ಕಾರುಗಳು ಮಾರುಕಟ್ಟೆ ಪ್ರವೇಶಿಸುತ್ತಿವೆ. ಆದರೆ, ವರ್ಷಾನುಗಟ್ಟಲೇ ಒಂದೇ ಬಣ್ಣದ ಕಾರು ಉಪಯೋಗಿಸುವುದು ಯಾರಿಗಾದರೂ ಬೇಜಾರು ತರಿಸುತ್ತದೆ.

ಅಮೆರಿಕದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ ಆಗಿದ್ದ ಶ್ರೀನಿವಾಸನ್‌ ಅವರಿಗಾದ ಇಂಥದೊಂದು ಅನುಭವವೇ ಆಟೊಮೊಬೈಲ್‌ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನದ ಆವಿಷ್ಕಾರಕ್ಕೆ ಕಾರಣವಾಗಿದೆ.

ADVERTISEMENT

ಶ್ರೀನಿವಾಸ್‌ ಮೂರು ಬಾರಿ ಸೆಕೆಂಡ್ ಹ್ಯಾಂಡ್‌ ಕಾರು ಖರೀದಿಸಿದಾಗಲೂ ಸಿಕ್ಕಿದ್ದು ಒಂದೇ ಬಣ್ಣದ ಕಾರು. ಇದರಿಂದ ಬೇಸತ್ತ ಅವರಿಗೆ ಆಗಲೇ ಕಾರುಗಳ ಬಣ್ಣ ಬದಲಿಸುವ ಹುಚ್ಚು ಶುರುವಾಯಿತು. ಕಾರುಗಳ ಬಣ್ಣವನ್ನು ಸುಲಭವಾಗಿ ಬದಲಾಯಿಸುವ ಕಲ್ಪನೆ ಹೊಳೆದದ್ದೇ  ತಡ ಅಮೆರಿಕದಲ್ಲಿದ್ದಾಗಲೇ ಶ್ರೀನಿವಾಸ್ 2014ರಲ್ಲಿ ಅದರ ಪೇಟೆಂಟ್‌ ಪಡೆದರು.

ಮುಂದಿನ 20 ವರ್ಷ ಈ ಆವಿಷ್ಕಾರದ ಮೇಲೆ ಅವರಿಗೆ ಹಕ್ಕು ಇರುತ್ತದೆ. ಅವರ ಈ ಹುಚ್ಚು ಕಾರುಗಳ ಬಣ್ಣ ಮಾತ್ರ ಬದಲಿಸಲಿಲ್ಲ, ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದ ಶ್ರೀನಿವಾಸ್‌ ಅವರ ವೃತ್ತಿಯನ್ನೂ ಬದಲಿಸಿತು. ಬೆಂಗಳೂರಿಗೆ ಬಂದವರೇ ಜೆಡ್‌ 3 (ಜಿಪ್‌, ಜ್ಯಾಪ್‌ ಝೂಪ್‌) ಎಂಬ ಆಟೊಮೊಬೈಲ್‌ ನವೋದ್ಯಮ (ಸ್ಟಾರ್ಟ್‌ ಅಪ್‌) ಆರಂಭಿಸಿದರು.

1800 ಬಣ್ಣ ಬದಲಿಸಬಹುದು!

ಒಟ್ಟು 1,800 ಬಣ್ಣಗಳಿದ್ದು ಕಾರುಗಳ ಮಾಲೀಕರು ತಮಗೆ ಇಷ್ಟದಂತೆ ಕಾರುಗಳ ಬಣ್ಣ ಬದಲಿಸಬಹುದು. ಕಾರಿನ ಮಾಲೀಕರ ಅಭಿರುಚಿಗೆ ತಕ್ಕಂತೆ ಗಾಜಿನಂತೆ ಫಳ, ಫಳ ಹೊಳೆಯುವ ನುಣುಪಾದ, ಮರಳಿನ ಹರಳಿನಂತೆ ಉರುಟಾದ ಹೊರಮೈ ಹೊಂದಿದ ವೆಸ್ಟ್‌ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಅಪಘಾತ ಸಂಭವಿಸಿದಾಗ ಸಣ್ಣ ಪುಟ್ಟ ತೆರಚಿದ ಗೀಚುಗಳನ್ನು ತಡೆದುಕೊಳ್ಳುವ ಸಾಮರ್ಥ್ಯವು ಗಡುಸಾದ ಪಾಲಿಮರ್‌ ಮತ್ತು ಪ್ಲಾಸ್ಟಿಕ್‌ ವೆಸ್ಟ್‌ಗಳಿಗಿದೆ.

ಬಣ್ಣ ಬದಲಿಸುವ ಕಾರುಗಳಿಗೆ ಕೂಲ್‌ ಕಾರ್‌ ಎಂದು ಹೆಸರಿಟ್ಟಿರುವ ಶ್ರೀನಿವಾಸನ್‌ , ದಶಕಗಳ  ಶ್ರಮದ ಫಲವಾದ ಈ ಕಲ್ಪನೆಯನ್ನು ಸಾಕಾರಗೊಳಿಸಲು ಯತ್ನಿಸುತ್ತಿದ್ದಾರೆ. ಹೂಡಿಕೆದಾರರಿಗಾಗಿ ಹುಡುಕುತ್ತಿದ್ದಾರೆ. ಬಣ್ಣ ತುಂಬುವ, ವೆಸ್ಟ್ ಹೊಲಿಯುವ ಘಟಕ ಸ್ಥಾಪನೆಗೆ ಉದ್ಯಮಿಗಳ ಜತೆ ಮಾತುಕತೆ ನಡೆಸಿದ್ದಾರೆ. ಸಾಮಾನ್ಯವಾಗಿ ಒಮ್ಮೆ ಕಾರುಗಳ ಬಣ್ಣ ಬದಲಿಸಬೇಕೆಂದರೆ ಕನಿಷ್ಠ ₹30ರಿಂದ ₹50 ಸಾವಿರ ವೆಚ್ಚವಾಗುತ್ತದೆ. ಆದರೆ, ಈ ತಂತ್ರಜ್ಞಾನದಿಂದ ಅದಕ್ಕಿಂತ ಕಡಿಮೆ ವೆಚ್ಚದಲ್ಲಿ ಪದೇ ಪದೇ ಬಣ್ಣ ಬದಲಿಸಬಹುದಾಗಿದೆ.

‘ಕಾರುಗಳ ರೀತಿಯಲ್ಲಿಯೇ ಬೈಕ್‌, ಜೀಪ್‌ ಇತರ ವಾಹನಗಳು, ಕಂಪ್ಯೂಟರ್‌ ಹಾಗೂ ಟಿ.ವಿ. ಪ್ಯಾನೆಲ್‌, ಮನೆಯ ಒಳಾಂಗಣ ಗೋಡೆ, ಬಾಗಿಲು, ಕಿಟಕಿಗಳ ಅಂದ ಹೆಚ್ಚಿಸಬಹುದು’ ಎಂದು ಶ್ರೀನಿವಾಸ್‌ ಹೇಳುತ್ತಾರೆ.

‘ಸಾಮಾನ್ಯವಾಗಿ ಕಾರುಗಳ ಬಣ್ಣ ಬದಲಿಸುವ ಉಮೇದು ಯುವ ಜನತೆಗೆ ಹೆಚ್ಚು. ಅವರೇ ಮುಖ್ಯ ಗ್ರಾಹಕರು. ಕೆಲವು ವರ್ಷಗಳಲ್ಲಿ ಎಲೆಕ್ಟ್ರಿಕ್‌ ಕಾರುಗಳಂತೆ ಬಣ್ಣ ಬದಲಿಸುವ ಕೂಲ್‌ ಕಾರುಗಳು ಸಾಮಾನ್ಯವಾಗಬಹುದು. ಪೆಟ್ರೋಲ್‌ ಬಂಕ್‌ ರೀತಿಯಲ್ಲಿ ಎಲ್ಲೆಂದರಲ್ಲಿ ಅವುಗಳಿಗೆ ಬಣ್ಣ ತುಂಬುವ ಇಲ್ಲವೇ ಬದಲಾಯಿಸುವ ಕೇಂದ್ರಗಳು ತಲೆ ಎತ್ತಬಹುದು’ ಎನ್ನುತ್ತಾರೆ.

ಸದ್ಯ ಅವರ ಈ ಯೋಜನೆ ಇನ್ನೂ ಪ್ರಾತ್ಯಕ್ಷಿಕೆ (ಡೆಮೊ) ಹಂತದಲ್ಲಿ ಇದೆ. ಎಲ್ಲವೂ ಅವರ ಎಣಿಕೆಯಂತೆ ನಡೆದಲ್ಲಿ 2018ರ ಒಳಗಾಗಿ ಊಸರವಳ್ಳಿಯಂತೆ ಬಣ್ಣ ಬದಲಿಸುವ ಕಾರುಗಳು ರಸ್ತೆಗಳಲ್ಲಿ ಕಾಣಿಸಿಕೊಳ್ಳಬಹುದು. 

***

ಏನಿದು ತಂತ್ರಜ್ಞಾನ?

3ಡಿ ತಂತ್ರಜ್ಞಾನದ ನೆರವಿನಿಂದ ಕಾರುಗಳ ಅಳತೆಗೆ ಅನುಸಾರ ತೆಳ್ಳನೆಯ ಮತ್ತು ದೀರ್ಘಬಾಳಿಕೆ ಬರುವ ಗಟ್ಟಿಮುಟ್ಟಾದ ಪಾಲಿಮರ್‌ ಮತ್ತು ಪ್ಲಾಸ್ಟಿಕ್‌ ಚೀಲ (ವೆಸ್ಟ್‌) ತಯಾರಿಸಲಾಗುತ್ತದೆ. ಕಾರಿನ ಬಾನೆಟ್‌, ಬಾಗಿಲು, ಛತ್ತು, ಡಿಕ್ಕಿ ಸೇರಿ ಹೊರಮೈ ಮುಚ್ಚುವಂತೆ ಹೊದಿಕೆ ಸಿದ್ಧಪಡಿಸಲಾಗುತ್ತದೆ. ಚಿಕ್ಕ ನಳಿಕೆಗಳ ಮೂಲಕ ವೆಸ್ಟ್‌  ಒಳಗೆ ದ್ರಾವಣ ರೂಪದ ಬಣ್ಣ ತುಂಬಲಾಗುತ್ತದೆ. ದ್ರಾವಣ ಕಾರಿನ ಇಡೀ ಹೊರಮೈ ಆವರಿಸಿಕೊಂಡಾಗ ಮೂಲ ಬಣ್ಣ ಕಾಣಿಸುವುದಿಲ್ಲ. ಬಣ್ಣ ಹೊರ ತೆಗೆಯಲು ಕೂಡ ಪ್ರತ್ಯೇಕ ಸಣ್ಣ ನಳಿಕೆಗಳನ್ನು ಅಳವಡಿಸಲಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.