ADVERTISEMENT

ಬೆಂಗಳೂರಿನಲ್ಲಿ ಕ್ಸೈಲಂ ಸಂಶೋಧನಾ ಕೇಂದ್ರ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2018, 19:30 IST
Last Updated 6 ಮಾರ್ಚ್ 2018, 19:30 IST
ಕ್ಸೈಲಂ ಸಂಶೋಧನಾ ಕೇಂದ್ರವನ್ನು ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಪ್ಯಾಟ್ರಿಕ್ ಡೆಕ್ಕರ್ ಇದ್ದರು.
ಕ್ಸೈಲಂ ಸಂಶೋಧನಾ ಕೇಂದ್ರವನ್ನು ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಪ್ಯಾಟ್ರಿಕ್ ಡೆಕ್ಕರ್ ಇದ್ದರು.   

ಬೆಂಗಳೂರು: ಜಲ ನಿರ್ವಹಣೆ ಮತ್ತು ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆ ಕ್ಸೈಲಂ, ಬೆಂಗಳೂರಿನಲ್ಲಿ ಸಂಶೋಧನಾ ಕೇಂದ್ರವನ್ನು ಆರಂಭಿಸಿದೆ.

ಈ ಸಂಶೋಧನಾ ಕೇಂದ್ರದ ಮೂಲಕ ಶುದ್ಧ ಕುಡಿಯುವ ನೀರು ಮತ್ತು ನೀರಿಗೆ ಸಂಬಂಧಿಸಿದ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಿದೆ. ನೀರಿನ ಗುಣಮಟ್ಟ ಪರೀಕ್ಷೆ, ವಿಶ್ಲೇಷಣೆ, ನಿರ್ವಹಣೆ, ಮಾಲಿನ್ಯ ತಡೆಗಟ್ಟಲು 400 ಎಂಜಿನಿಯರ್‌ಗಳನ್ನು ಸಂಸ್ಥೆ ನೇಮಕ ಮಾಡಿಕೊಳ್ಳಲಿದೆ. ವಾಣಿಜ್ಯ, ಸಾರ್ವಜನಿಕ ಕಟ್ಟಡಗಳು, ವಸತಿ ಸಮುಚ್ಛಯಗಳು ಮತ್ತು ಕೃಷಿ ಚಟುವಟಿಕೆಗಳಲ್ಲಿ ಸಮರ್ಪಕ ನೀರು ನಿರ್ವಹಣೆ ಬಗ್ಗೆ ಸಂಸ್ಥೆ ಸೇವೆ ಒದಗಿಸಲಿದೆ.

‘ನಗರೀಕರಣ ಹೆಚ್ಚಾದಂತೆಲ್ಲಾ ಮೂಲ ಸೌಕರ್ಯ ಸಮಸ್ಯೆಗಳು ಹೆಚ್ಚಾಗುತ್ತಿರುತ್ತವೆ. ಅದರಲ್ಲೂ ನೀರಿನ ಸಮಸ್ಯೆ ಅಧಿಕವಾಗಿರುತ್ತದೆ. ಈ ಸಮಸ್ಯೆಗಳಿಗೆ ನಮ್ಮ ಸಂಸ್ಥೆ ಪರಿಹಾರ ಹುಡುಕಲಿದೆ’ ಎಂದು ಸಂಸ್ಥೆಯ ಭಾರತದ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌. ಬಾಲಸುಬ್ರಹ್ಮಣ್ಯಂ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಅಂತರ್ಜಲವನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿಯುತ್ತಿದೆ. ಈ ರೀತಿಯ ನೀರಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈ ಸಂಶೋಧನಾ ಕೇಂದ್ರ ನೆರವಾಗಲಿದೆ’ ಎಂದರು

‘ಪ್ರಸ್ತುತ ಭಾರತದಲ್ಲಿ ಅನುಸರಿಸುತ್ತಿರುವ ನೀರು ನಿರ್ವಹಣಾ ವಿಧಾನಗಳು ಹಲವು ಲೋಪಗಳಿಂದ ಕೂಡಿವೆ. ಹೆಚ್ಚಿನ ಪ್ರಮಾಣದಲ್ಲಿ ನೀರು ವ್ಯರ್ಥವಾಗುತ್ತಿದೆ. ನಮ್ಮ ಸಂಸ್ಥೆ ಅಭಿವೃದ್ಧಿಪಡಿಸುವ ತಂತ್ರಜ್ಞಾನ ಮತ್ತು ಸಂಶೋಧನೆಗಳಿಂದ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ಸಂಸ್ಥೆಯ ನಿರ್ದೇಶಕ  ಪ್ಯಾಟ್ರಿಕ್ ಡೆಕರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.