ADVERTISEMENT

ಬೆಲ್ಲದ ಮಾರುಕಟ್ಟೆ ಗೊಂದಲದ ಗೂಡು

ಆನ್‌ಲೈನ್‌ ವಹಿವಾಟು; ಒಂದು ರೂಪಾಯಿ ಹೆಚ್ಚಿಸಿ ಬೆಲೆ ದಾಖಲು

ಎಂ.ಎನ್.ಯೋಗೇಶ್‌
Published 10 ಜೂನ್ 2017, 20:27 IST
Last Updated 10 ಜೂನ್ 2017, 20:27 IST
ಮಂಡ್ಯದ ಎಪಿಎಂಸಿ ಬೆಲ್ಲದ ಮಾರುಕಟ್ಟೆಗೆ ಶನಿವಾರ ಬಂದಿರುವ ಬಕೆಟ್‌ ಬೆಲ್ಲ.
ಮಂಡ್ಯದ ಎಪಿಎಂಸಿ ಬೆಲ್ಲದ ಮಾರುಕಟ್ಟೆಗೆ ಶನಿವಾರ ಬಂದಿರುವ ಬಕೆಟ್‌ ಬೆಲ್ಲ.   

ಮಂಡ್ಯ: ನಗರದ ಎಪಿಎಂಸಿ ಬೆಲ್ಲದ ಮಾರುಕಟ್ಟೆಯಲ್ಲಿ ಜೂನ್‌ 1ರಿಂದ ಆನ್‌ಲೈನ್‌ ವಹಿವಾಟು ಆರಂಭವಾಗಿದೆ. ಆದರೆ, ವರ್ತಕರು ಉದ್ದೇಶಪೂರ್ವಕವಾಗಿ ಕೇವಲ ಒಂದು ರೂಪಾಯಿ ಹೆಚ್ಚಳ ಮಾಡಿ ಬೆಲೆ ದಾಖಲಿಸುತ್ತಿರುವುದು ಮಾರುಕಟ್ಟೆಯನ್ನು ಗೊಂದಲದ ಗೂಡನ್ನಾಗಿಸಿದೆ.

ಸರ್ಕಾರದ ಆದೇಶದಂತೆ ಆನ್‌ಲೈನ್‌ನಲ್ಲೇ ಬೆಲ್ಲದ ವಹಿವಾಟು ನಡೆಸಬೇಕು ಎಂದು ಎಪಿಎಂಸಿ ಆಡಳಿತ ಮಂಡಳಿ ವರ್ತಕರಿಗೆ ಸೂಚಿಸಿದೆ. ಆದರೆ, ವರ್ತಕರು ಇ–ಹರಾಜು ಪ್ರಕ್ರಿಯೆಗೆ ವಿರೋಧ ಮಾಡುತ್ತಲೇ ಬಂದಿದ್ದಾರೆ.

ಈಗ ದರವನ್ನೂ ಕಡಿಮೆ ಮಾಡುತ್ತಿದ್ದು, ಆನ್‌ಲೈನ್‌ ವ್ಯವಹಾರದಿಂದಲೇ ದರ ಕುಸಿದಿದೆ ಎಂಬ ಸುದ್ದಿ ಹಬ್ಬಿಸುತ್ತಿದ್ದಾರೆ. ಅಲ್ಲದೆ, ಬೆಲೆ ದಾಖಲಿಸುವಾಗ ನಿಗದಿತ ದರಕ್ಕಿಂತ ಕೇವಲ ಒಂದು ರೂಪಾಯಿ ಹೆಚ್ಚು ದಾಖಲು ಮಾಡುತ್ತಿದ್ದಾರೆ. ಇದರಿಂದ ರೈತರು ಆನ್‌ಲೈನ್‌ ವಹಿವಾಟನ್ನು ಅನುಮಾನದ ದೃಷ್ಟಿಯಿಂದ ನೋಡುವಂತಾಗಿದೆ. ಕಳೆದ ವಾರ ಉತ್ತಮ ಗುಣಮಟ್ಟದ ಕ್ವಿಂಟಲ್‌ ಅಚ್ಚು ಬೆಲ್ಲಕ್ಕೆ ₹ 4,400 ದರ ಇತ್ತು. ಆದರೆ ಈಗ ₹ 3,950ಕ್ಕೆ ಕುಸಿದಿದೆ.

ADVERTISEMENT

‘ಬಹಿರಂಗ ಹರಾಜು ನಡೆಯುವಾಗ ವರ್ತಕರು ನಿಗದಿತ ದರಕ್ಕಿಂತ ₹ 50 ಇಲ್ಲವೇ 100 ಹೆಚ್ಚಿಸುತ್ತಿದ್ದರು. ಆದರೆ, ಆನ್‌ಲೈನ್‌ ಹರಾಜು ವ್ಯವಸ್ಥೆ ಇದಕ್ಕೂ ಕಡಿವಾಣ ಹಾಕಿದೆ. ವ್ಯಾಪಾರಿಗಳು  ನಮಗೆ ನಷ್ಟ ಉಂಟಾಗುತ್ತಿದೆ’ ಎಂದು ರೈತ ಅಶೋಕ್‌ ನೋವು ತೋಡಿಕೊಂಡರು.

ಬೆಲ್ಲದ ವರ್ಗೀಕರಣ ಇಲ್ಲ: ವರ್ತಕರು ಆನ್‌ಲೈನ್‌ ವಹಿವಾಟು ವಿರೋಧಿಸಲು ಹಲವು ಕಾರಣ ನೀಡುತ್ತಾರೆ. ಆನ್‌ಲೈನ್‌ನಲ್ಲಿ ಬೆಲ್ಲದ ವರ್ಗೀಕರಣ ಮಾಡಲು ಸಾಧ್ಯವಾಗುತ್ತಿಲ್ಲ. ಉತ್ತಮ, ಮಧ್ಯಮ ಹಾಗೂ ಕಳಪೆ ಗುಣಮಟ್ಟದ ಬೆಲ್ಲವನ್ನು ಒಂದೇ ಬೆಲೆಗೆ ಕೊಳ್ಳಬೇಕು. ಆನ್‌ಲೈನ್‌ ವ್ಯವಹಾರ ನಡೆಯುವ ಸ್ಥಳ ಹಾಗೂ ಬೆಲ್ಲದ ಗೋದಾಮಿಗೂ ಸಂಬಂಧವೇ ಇರುವುದಿಲ್ಲ, ಬೆಲ್ಲವನ್ನು ಪರೀಕ್ಷಿಸಿ ಬೆಲೆ ದಾಖಲು ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಗಳನ್ನು ವರ್ತಕರು ನೀಡುತ್ತಾರೆ.

‘ಬಹಿರಂಗ ಹರಾಜಾಗಿದ್ದರೆ ಉತ್ತಮ, ಮಧ್ಯಮ ಹಾಗೂ ಕಳಪೆ ಎಂದು ವರ್ಗೀಕರಿಸಿ ಕೊಳ್ಳುತ್ತಿದ್ದೆವು. ಆದರೆ, ಆನ್‌ಲೈನ್‌ನಲ್ಲಿ  ಗುಣಮಟ್ಟದ ಬೆಲ್ಲವನ್ನು ಮಾತ್ರ ಕೊಳ್ಳುತ್ತೇವೆ. ಇದರಿಂದ ಮಧ್ಯಮ, ಕಳಪೆ ಗುಣಮಟ್ಟದ ಬೆಲ್ಲ ಮಾರಾಟವಾಗುವುದಿಲ್ಲ’ ಎಂದು ವರ್ತಕರ ಸಂಘದ ಅಧ್ಯಕ್ಷ ಸುನೀಲ್‌ ಕುಮಾರ್‌ ಹೇಳಿದರು.

ಬೆಲೆ ದಾಖಲಿಸಲು ಟ್ಯಾಬ್‌
‘ವರ್ತಕರು ಬೆಲ್ಲ ನೋಡಿ ಬೆಲೆ ದಾಖಲಿಸಲು ಟ್ಯಾಬ್‌ ಕೊಟ್ಟಿದ್ದೇವೆ. ಅಲ್ಲದೆ ಕೆಲ ವರ್ತಕರು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ವಹಿವಾಟು ನಡೆಸುತ್ತಿದ್ದಾರೆ. ರೈತರಿಗೆ ತೊಂದರೆಯಾಗದಂತೆ ಎಲ್ಲಾ ಕ್ರಮ ಕೈಗೊಂಡಿದ್ದೇವೆ’ ಎಂದು ಎಪಿಎಂಸಿ ಕಾರ್ಯದರ್ಶಿ ಡಿ.ಪುಷ್ಪಾ ತಿಳಿಸಿದರು.

‘ಬೆಲೆ ನಿರ್ಧಾರ ಮಾಡುವ ಅಧಿಕಾರ ಎಪಿಎಂಸಿಗೆ ಇಲ್ಲ. ವ್ಯಾಪಾರಿಗಳೇ ಬೆಲೆ ನಿಗದಿ ಮಾಡುವುದರಿಂದ ಬೆಲೆ ಕುಸಿದಿದೆ. ಆನ್‌ಲೈನ್‌ ವಹಿವಾಟನ್ನು ವಿರೋಧ ಮಾಡುವ ಸಲುವಾಗಿ ವರ್ತಕರು ಬೆಲೆ ಕುಸಿಯುವಂತೆ ನೋಡಿಕೊಂಡಿದ್ದಾರೆ. ಸರ್ಕಾರದ ಆದೇಶ ಇರುವುದರಿಂದ ವರ್ತಕರು ಆನ್‌ಲೈನ್‌ ಮಾರುಕಟ್ಟೆ ವ್ಯವಸ್ಥೆಗೆ ಸಹಕಾರ ನೀಡಬೇಕು’ ಎಂದು ಎಪಿಎಂಸಿ ಅಧ್ಯಕ್ಷ ಎಂ.ಕೆ.ಮಧು ಹೇಳಿದರು.

ಆನ್‌ಲೈನ್‌ ವಹಿವಾಟು ಆರಂಭವಾದ ದಿನದಿಂದ ನಿತ್ಯ ವಹಿವಾಟು ನಡೆದಿಲ್ಲ. ಕೆಲವು ರೈತರು ಮಾರುಕಟ್ಟೆಗೆ ಮಾಲು ತಂದಿಲ್ಲ. ಶನಿವಾರ ಆನ್‌ಲೈನ್‌ ವಹಿವಾಟು ನಿಲ್ಲಿಸಿ ಬಹಿರಂಗ ಹರಾಜು ನಡೆಸಿದರು. ಸೋಮವಾರದಿಂದ ಮತ್ತೆ ಆನ್‌ಲೈನ್‌ ವಹಿವಾಟು ಆರಂಭಿಸಲು ವರ್ತಕರು ಒಪ್ಪಿದ್ದಾರೆ. ಹೀಗಾಗಿ ಶನಿವಾರ ಬಹಿರಂಗ ಹರಾಜು ಮಾಡಲು ಅವಕಾಶ ನೀಡಲಾಯಿತು ಎಂದು ಕಾರ್ಯದರ್ಶಿ ಪುಷ್ಪಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.