ADVERTISEMENT

ಬ್ಯಾಂಕಿಂಗ್‌ ಸುಧಾರಣೆಗೆ ಒತ್ತು ಭಾರತಕ್ಕೆ ಐಎಂಎಫ್‌ ಸಲಹೆ

ಪಿಟಿಐ
Published 13 ಅಕ್ಟೋಬರ್ 2017, 19:30 IST
Last Updated 13 ಅಕ್ಟೋಬರ್ 2017, 19:30 IST
ಬ್ಯಾಂಕಿಂಗ್‌ ಸುಧಾರಣೆಗೆ ಒತ್ತು ಭಾರತಕ್ಕೆ ಐಎಂಎಫ್‌ ಸಲಹೆ
ಬ್ಯಾಂಕಿಂಗ್‌ ಸುಧಾರಣೆಗೆ ಒತ್ತು ಭಾರತಕ್ಕೆ ಐಎಂಎಫ್‌ ಸಲಹೆ   

ವಾಷಿಂಗ್ಟನ್‌: ಭಾರತವು ತನ್ನ ಆರ್ಥಿಕ ಬೆಳವಣಿಗೆ ದರಕ್ಕೆ ವೇಗೋತ್ಕರ್ಷ ನೀಡಲು ಬ್ಯಾಂಕಿಂಗ್‌ ವಲಯದ ಸುಧಾರಣಾ ಕ್ರಮಗಳಿಗೆ ಆದ್ಯತೆ ನೀಡಬೇಕು ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಸಲಹೆ ನೀಡಿದೆ.

ಇದರ ಜತೆಗೆ, ಕಾರ್ಮಿಕರ ದಕ್ಷತೆ ಹೆಚ್ಚಳ, ಉತ್ಪನ್ನಗಳ ಮಾರುಕಟ್ಟೆಯ ಗುಣಮಟ್ಟ ಏರಿಕೆ ಮತ್ತು ಕೃಷಿಯ ಆಧುನೀಕರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಏಷ್ಯಾ ಮತ್ತು ಪೆಸಿಫಿಕ್‌ ಪ್ರಾದೇಶಿಕ ಆರ್ಥಿಕ ಮುನ್ನೋಟ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.

ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ಮತ್ತು ಜಾರಿಗೆ ಬಂದಿರುವ ಜಿಎಸ್‌ಟಿಯ ಅಡಚಣೆಗಳಿಂದಾಗಿ ಇತ್ತೀಚಿನ ತ್ರೈಮಾಸಿಕಗಳಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರ ಕುಂಠಿತಗೊಂಡಿದೆ. ಈ ತಾತ್ಕಾಲಿಕ ಸ್ವರೂಪದ ಅಡಚಣೆಗಳು ಸದ್ಯದಲ್ಲೇ ದೂರವಾಗಲಿದ್ದು, ಮಧ್ಯಮಾವಧಿಯಲ್ಲಿ ಆರ್ಥಿಕತೆಯು ಮತ್ತೆ ಚೇತರಿಕೆಯ ಹಾದಿಗೆ ಮರಳಲಿದೆ.

ADVERTISEMENT

ಜಿಎಸ್‌ಟಿ ಜಾರಿಯು ಐತಿಹಾಸಿಕ ತೆರಿಗೆ ಸುಧಾರಣಾ ಕ್ರಮವಾಗಿದೆ. ಇದು ದೇಶಿ ಮಾರುಕಟ್ಟೆಯನ್ನು ಒಂದುಗೂಡಿಸಲು ನೆರವಾಗಿದೆ. ಉದ್ದಿಮೆ ವಹಿವಾಟು ಅಸಂಘಟಿತ ವಲಯದಿಂದ ಸಂಘಟಿತ ವಲಯಕ್ಕೆ ಸ್ಥಳಾಂತರಗೊಳ್ಳಲು ಕಾರಣವಾಗಿದೆ ಎಂದೂ ಐಎಂಎಫ್‌ ಹೇಳಿದೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಸಾಲ ವಸೂಲಾತಿಗೆ ಕಠಿಣ ಕ್ರಮ ಕೈಗೊಂಡು ತಮ್ಮ ಹಣಕಾಸು ಪರಿಸ್ಥಿತಿ ಸುಧಾರಿಸಿಕೊಳ್ಳಬೇಕು. ಸರಕುಗಳ ಪೂರೈಕೆಯಲ್ಲಿನ ಅಡಚಣೆಗಳನ್ನು ದೂರ ಮಾಡಬೇಕು. ಗರಿಷ್ಠ ಗುಣಮಟ್ಟದ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಬೇಕು. ಸರಕುಗಳ ಮಾರುಕಟ್ಟೆಯ ದಕ್ಷತೆ ಹೆಚ್ಚಿಸಬೇಕು. ಕೃಷಿ ಕ್ಷೇತ್ರದಲ್ಲಿ ಇನ್ನಷ್ಟು ಆಧುನೀಕರಣಕ್ಕೆ ಒತ್ತು ನೀಡಬೇಕು ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.