ADVERTISEMENT

ಬ್ಯಾಂಕ್‌ ನಿರ್ವಹಣೆಗೆ ಹೆಚ್ಚು ಅಧಿಕಾರ ಬೇಕು

ಸಂಸದೀಯ ಸ್ಥಾಯಿ ಸಮಿತಿಗೆ ಉರ್ಜಿತ್ ಪಟೇಲ್‌ ಹೇಳಿಕೆ

ಪಿಟಿಐ
Published 12 ಜೂನ್ 2018, 19:30 IST
Last Updated 12 ಜೂನ್ 2018, 19:30 IST
ಬ್ಯಾಂಕ್‌ ನಿರ್ವಹಣೆಗೆ ಹೆಚ್ಚು ಅಧಿಕಾರ ಬೇಕು
ಬ್ಯಾಂಕ್‌ ನಿರ್ವಹಣೆಗೆ ಹೆಚ್ಚು ಅಧಿಕಾರ ಬೇಕು   

ನವದೆಹಲಿ: ‘ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಕಾರ್ಯನಿರ್ವಹಣೆ ಮೇಲೆ ನಿಗಾ ಇರಿಸಲು ಕೇಂದ್ರೀಯ ಬ್ಯಾಂಕ್‌ಗೆ ಹೆಚ್ಚಿನ ಅಧಿಕಾರ ನೀಡಬೇಕು’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಉರ್ಜಿತ್‌ ಪಟೇಲ್‌ ಹೇಳಿದ್ದಾರೆ.

ಹಣಕಾಸಿಗೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿಯ ಮುಂದೆ ಮಂಗಳವಾರ ಹಾಜರಾದ ಪಟೇಲ್‌ ಅವರು, ವಸೂಲಾಗದ ಸಾಲ, ಬ್ಯಾಂಕ್‌ ವಂಚನೆ, ನಗದು ಕೊರತೆ ಮತ್ತಿತರ ವಿದ್ಯಮಾನಗಳ ಬಗ್ಗೆ ಸಂಸದರಿಂದ ಕಠಿಣ ಪ್ರಶ್ನೆಗಳನ್ನು ಎದುರಿಸಿದರು ಎಂದು ಮೂಲಗಳು ತಿಳಿಸಿವೆ.

‘ಬ್ಯಾಂಕ್‌ಗಳ ಕಾರ್ಯನಿರ್ವಹಣೆ ಮೇಲೆ ಆರ್‌ಬಿಐಗೆ ಹೆಚ್ಚಿನ ಅಧಿಕಾರ ಇಲ್ಲ. ಬ್ಯಾಂಕ್‌ಗಳ ಪ್ರತಿಯೊಂದು ಶಾಖೆಯ ಲೆಕ್ಕಪತ್ರದ ಮೇಲೆ ನಿಗಾ ಇರಿಸಲು ಸಾಧ್ಯವಾಗುವುದಿಲ್ಲ’ ಎಂದು ಅವರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ವಂಚನೆ ಪ್ರಕರಣಗಳಿಗೆ ಕಡಿವಾಣ ವಿಧಿಸುವುದು ಬ್ಯಾಂಕ್‌ಗಳ ನಿರ್ದೇಶಕ ಮಂಡಳಿಗಳ ಪ್ರಾಥಮಿಕ ಮತ್ತು ಸಂಘಟಿತ ಹೊಣೆಗಾರಿಕೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ADVERTISEMENT

ನಿರ್ದೇಶಕರು ನಿರ್ವಹಿಸುವ ಪಾತ್ರದ ಬಗ್ಗೆ ಪಟೇಲ್‌ ಅವರು ಹೆಚ್ಚು ಒತ್ತು ನೀಡಿದ್ದಾರೆ. ಬ್ಯಾಂಕಿಂಗ್‌ ಚಟುವಟಿಕೆಗಳನ್ನು ದಕ್ಷ ರೀತಿಯಲ್ಲಿ ಮತ್ತು ವೃತ್ತಿಪರತೆಯಿಂದ ನಿರ್ವಹಿಸುವುದು ಬ್ಯಾಂಕ್‌ ಆಡಳಿತ ಮಂಡಳಿಯಲ್ಲಿನ ನಾಮಕರಣ ಸದಸ್ಯನೂ ಸೇರಿದಂತೆ ಪ್ರತಿಯೊಬ್ಬ ನಿರ್ದೇಶಕನ ಪ್ರಮುಖ ಕರ್ತವ್ಯವಾಗಿದೆ ಎಂದು ಪಟೇಲ್‌ ಅವರು ಸಮಿತಿಗೆ ಸಲ್ಲಿಸಿರುವ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಐಸಿಐಸಿಐ ಬ್ಯಾಂಕ್‌, ಆ್ಯಕ್ಸಿಸ್‌ ಬ್ಯಾಂಕ್‌ಗಳಲ್ಲಿನ ಆಡಳಿತಾತ್ಮಕ ವೈಫಲ್ಯಗಳ ಬಗ್ಗೆ ಸಂಸತ್‌ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಪಟೇಲ್‌ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ರಾಷ್ಟ್ರೀಕೃತ ಬ್ಯಾಂಕ್‌ಗಳ ಆಡಳಿತ ಮಂಡಳಿಗಳ ಕಾರ್ಯವೈಖರಿ ಸುಧಾರಣೆಯಲ್ಲಿ ನಾಯಕ್‌ ಸಮಿತಿಯ ವರದಿಯನ್ನು ಜಾರಿಗೆ ತರುವ ಅಗತ್ಯ ಇದೆ ಎಂದೂ ಪಟೇಲ್‌ ಪ್ರತಿಪಾದಿಸಿದ್ದಾರೆ.

‘ಬ್ಯಾಂಕಿಂಗ್‌ ವ್ಯವಸ್ಥೆ ಬಲಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದೂ ಪಟೇಲ್‌ ಅವರು ಸಮಿತಿಗೆ ಭರವಸೆ ನೀಡಿದ್ದಾರೆ.

ಕಾಂಗ್ರೆಸ್‌ ಮುಖಂಡ ವೀರಪ್ಪ ಮೊಯಿಲಿ ಅವರ ಅಧ್ಯಕ್ಷತೆಯಲ್ಲಿನ ಸಮಿತಿಯು, ಇತ್ತೀಚೆಗೆ ಎಟಿಎಂಗಳಲ್ಲಿ ಹಣದ ತೀವ್ರ ಕೊರತೆ ಎದುರಾಗಿದ್ದಕ್ಕೆ  ಪಟೇಲ್‌ ಅವರಿಂದ ವಿವರಣೆ ಕೇಳಿತು. ಬ್ಯಾಂಕ್‌ ವಂಚನೆ ಪ್ರಕರಣಗಳನ್ನು ತಡೆಗಟ್ಟಲು ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳದಿರಲು ಕಾರಣವೇನು ಎಂದು ಸಮಿತಿಯ ಕೆಲ ಸದಸ್ಯರು ಪ್ರಶ್ನಿಸಿದ್ದಾರೆ.

‘ಹಣಕಾಸು ನಷ್ಟ ಮತ್ತು ದಿವಾಳಿ ಸಂಹಿತೆ (ಐಬಿಸಿ) ಜಾರಿಗೆ ಬಂದ ನಂತರ ವಸೂಲಾಗದ ಸಾಲದ (ಎನ್‌ಪಿಎ) ಪ್ರಮಾಣದಲ್ಲಿ ಸುಧಾರಣೆ ಕಂಡು ಬರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ’ ಎಂದು ಪಟೇಲ್‌ ಅವರು ಸಮಿತಿಯ ಗಮನಕ್ಕೆ ತಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.