ADVERTISEMENT

ಭಾರತ ಪ್ರಮುಖ ಶಸ್ತ್ರಾಸ್ತ್ರ ಮಾರುಕಟ್ಟೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 19:30 IST
Last Updated 13 ಫೆಬ್ರುವರಿ 2012, 19:30 IST

ಬೆಂಗಳೂರು: ಪ್ರಪಂಚದ ಬಹುಪಾಲು ಶಸ್ತ್ರಾಸ್ತ್ರ ತಯಾರಿಕಾ ಕಂಪೆನಿಗಳು ಭಾರತ ಮತ್ತು ಚೀನಾದ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿರುವ  ಹಿನ್ನೆಲೆಯಲ್ಲಿ, ಸ್ವದೇಶಿ ಶಸ್ತ್ರಾಸ್ತ್ರ ಕಂಪೆನಿಗಳು ಹೆಚ್ಚಿನ ಸ್ಪರ್ಧೆ ಎದುರಿಸಬೇಕಾಗಿದೆ ಎಂದು ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಡಾ.ವಿ.ಕೆ. ಸಾರಸ್ವತ್ ಹೇಳಿದರು.

ರಕ್ಷಣಾ ಇಲಾಖೆಯ ಅಧೀನ ಸಂಸ್ಥೆ `ಡಿಫೆನ್ಸ್ ಏವಿಯಾನಿಕ್ಸ್ ರಿಸರ್ಚ್ ಎಸ್ಟಾಬ್ಲಿಷ್‌ಮೆಂಟ್~ನ (ಡಿಎಆರ್‌ಇ) ಬೆಳ್ಳಿ ಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಭಾರತ ಮತ್ತು ಚೀನಾ ಜಗತ್ತಿನಲ್ಲೇ ಅತಿ ಹೆಚ್ಚು ಶಸ್ತ್ರಾಸ್ತ್ರಗಳನ್ನು ಖರೀದಿಸುವ ದೇಶಗಳಾಗಿವೆ. ರಾಡಾರ್ ವ್ಯವಸ್ಥೆಯಿಂದ ಹಿಡಿದು ವಿವಿಧ ರಕ್ಷಣಾ ಸಾಮಗ್ರಿಗಳನ್ನು ಭಾರತದಲ್ಲಿ ಮಾರಾಟ ಮಾಡಲು ಪ್ರಪಂಚದ ಅನೇಕ ಕಂಪೆನಿಗಳು ಪ್ರಯತ್ನಿಸುತ್ತಿವೆ~ ಎಂದರು.ಅಂತರರಾಷ್ಟ್ರೀಯ ಕಂಪೆನಿಗಳ ಸ್ಪರ್ಧೆ ಎದುರಿಸಲು ದೇಸಿ ಶಸ್ತ್ರಾಸ್ತ್ರ ಕಂಪೆನಿಗಳು ಸಿದ್ಧವಾಗಬೇಕು.

ದೇಸಿ ಕಂಪೆನಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿಜ್ಞಾನಿಗಳ ಅವಶ್ಯಕತೆಯೂ ಇದೆ ಎಂದು ಕಿವಿಮಾತು ಹೇಳಿದರು.
ಮುಂದಿನ ದಿನಗಳಲ್ಲಿ ಬಹುಪಾಲು ಯುದ್ಧ ವಿಮಾನಗಳನ್ನು ಸ್ವದೇಶಿ ತಂತ್ರಜ್ಞಾನ ಬಳಸಿಯೇ ಸಿದ್ಧಪಡಿಸುವ ತೀರ್ಮಾನ ಕೈಗೊಳ್ಳಲಾಗಿದೆ. ದೇಶದ ಖಾಸಗಿ ಕ್ಷೇತ್ರದ ಸಹಭಾಗಿತ್ವದಲ್ಲಿ ಸಂಶೋಧನಾ ಕಾರ್ಯಕ್ರಮಗಳನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. ಏವಿಯಾನಿಕ್ಸ್ (ವೈಮಾನಿಕ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಎಲೆಕ್ಟ್ರಾನಿಕ್ಸ್ ತಂತ್ರಜ್ಞಾನದ ಬಳಕೆ) ಕ್ಷೇತ್ರಕ್ಕೆ ಹಣಕಾಸಿನ ಕೊರತೆ ಖಂಡಿತ ಇಲ್ಲ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.