ADVERTISEMENT

ಮಂಗಳೂರು ಮೀನು ಕುವೈತ್‌ಗೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 19:59 IST
Last Updated 4 ಸೆಪ್ಟೆಂಬರ್ 2013, 19:59 IST

ಮಂಗಳೂರು:ಮಂಗಳೂರಿನ ತಾಜಾ ಮೀನು ಬುಧವಾರ ಸಂಜೆ ಏರ್ ಇಂಡಿಯಾ ವಿಮಾನದಲ್ಲಿ ಕುವೈತ್‌ಗೆ ರವಾನೆಯಾಗಿದೆ. ಈ ಮೂಲಕ ರಾಜ್ಯದ ಕರಾವಳಿಯಲ್ಲಿ ಕೆಲವೇ ಗಂಟೆಗಳ ಮೊದಲು ಬಲೆಗೆ ಬಿದ್ದ ಮೀನು ಗಂಟೆಗಳಲ್ಲೇ ಸೀಮೋಲ್ಲಂಘನ ಮಾಡಿ ಗಲ್ಫ್  ಪ್ರದೇಶ ತಲುಪುವಂತಾಗಿದೆ.

ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸರಕು ಸಾಗಣೆ ವ್ಯವಸ್ಥೆ ಆರಂಭವಾಗಿ 5 ತಿಂಗಳು ಕಳೆದಿದ್ದರೂ, ದೊಡ್ಡ ಪ್ರಮಾಣದಲ್ಲಿ ಸರಕು ಸಾಗಣೆ ಇದುವರೆಗೆ ಆಗಿಲ್ಲ. ಕೇವಲ 5 ಬಾರಿ ಮಾತ್ರ ಸರಕುಗಳು ಕಾರ್ಗೊ ಸಂಕೀರ್ಣದಿಂದ ರವಾನೆಯಾಗಿವೆ. ಆದರೆ ಬುಧವಾರ ಅರ್ಧ ಟನ್ ತಾಜಾ ಮೀನು ಕುವೈತ್‌ಗೆ ರವಾನೆಯಾಗುವ ಮೂಲಕ ಹೊಸ ಆಶಾಕಿರಣ ಮೂಡುವಂತಾಗಿದೆ.

ಬುಧವಾರ ಬೆಳಿಗ್ಗೆಯಷ್ಟೇ ಯಾಂತ್ರೀಕೃತ ದೋಣಿಗಳು ಹಳೆ ಬಂದರಿಗೆ ತಂದಿದ್ದ  ಮಾಂಜಿ (ಪಾಂಪ್ರೈಟ್) ಮೀನಿನ ಪೈಕಿ 500 ಕೆ.ಜಿ.ಯಷ್ಟು ಮೀನನ್ನು ಶಿರೀನ್ ಎಕ್ಸ್‌ಪೋರ್ಟ್ ಮೂಲಕ ಕುವೈತ್‌ಗೆ ಕಳುಹಿಸಿಕೊಡಲಾಯಿತು. ಥರ್ಮೊಕೋಲ್ ಸಹಿತ ಇದ್ದ ಪೆಟ್ಟಿಗೆಯಲ್ಲಿ ಒಂದೊಂದರಲ್ಲಿ ತಲಾ 40 ಕೆ.ಜಿಯಂತೆ ಒಟ್ಟು 12 ಪೆಟ್ಟಿಗೆಗಳಲ್ಲಿ ಮೀನು ತುಂಬಿಸಿ, ಅವುಗಳನ್ನು ಕಾರ್ಗೊ ಸಂಕೀರ್ಣದ ಮೂಲಕ ಏರ್ ಇಂಡಿಯಾ ವಿಮಾನದಲ್ಲಿ ಕುವೈತ್‌ನತ್ತ ಸಾಗಿಸಲಾಯಿತು.

`ಮಂಗಳೂರಿನಿಂದ ಕುವೈತ್‌ಗೆ ವಾರಕ್ಕೆ ಮೂರು ನೇರ ವಿಮಾನಯಾನ ಇದೆ. ದುಬೈಗೆ ಪ್ರತಿ ದಿನ ವಿಮಾನ ಹಾರಾಟ ಇದೆ. ಇದು ನಮ್ಮ ಮೊದಲ ಪ್ರಯತ್ನ, ಮುಂದಿನ ದಿನಗಳಲ್ಲಿ ಪ್ರತಿ ದಿನ ಮಂಗಳೂರಿನ ತಾಜಾ ಮೀನು ಕಳುಹಿಸಿಕೊಡಲು ನಾವು ಸಿದ್ಧ. ಮುಖ್ಯವಾಗಿ ಮೀನು ರಫ್ತು ಮಾಡುವುದರಿಂದ ಡಾಲರ್ ವಿವಿಮಯ ನಡೆಯುತ್ತದೆ. ಮೀನು ರಫ್ತಿನಿಂದ ದೊಡ್ಡ ಲಾಭದ ನಿರೀಕ್ಷೆಯೇನೂ ಇಲ್ಲ, ಆದರೆ ದೇಶದ ಆರ್ಥಿಕತೆಗೆ ಸ್ವಲ್ಪವಾದರೂ ನೆರವಾದ ತೃಪ್ತಿ ನಮ್ಮದು' ಎಂದು ಶಿರೀನ್ ಎಕ್ಸ್‌ಪೋರ್ಟ್‌ನ ಮೊಹಮ್ಮದ್ ಹನೀಫ್ `ಪ್ರಜಾವಾಣಿ'ಗೆ ತಿಳಿಸಿದರು.

ಡಾಲರ್ ಎದುರು ರೂಪಾಯಿ ಮೌಲ್ಯ ಭಾರಿ ಪ್ರಮಾಣದಲ್ಲಿ ಕುಸಿಯುತ್ತಿದೆ. ಡಾಲರ್ ರೂಪದಲ್ಲಿ ಹಣ ತರಿಸಿಕೊಳ್ಳುವ ಸಣ್ಣ ಪ್ರಯತ್ನವನ್ನು ಸಹ ಕೈಬಿಡಬಾರದು ಎಂಬ ಉದ್ದೇಶದಿಂದ ಮೀನುಗಾರಿಕಾ ಇಲಾಖೆ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ (ಕೆಎಫ್‌ಡಿಸಿ), ಸಾಗರೋತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಂಪೆಡಾ) ಸಹಿತ ಹಲವಾರು ಇಲಾಖೆಗಳು ಉತ್ತೇಜನಕಾರಿ ಯೋಜನೆಗಳನ್ನು ಪ್ರಕಟಿಸಿದ್ದು, ಅದು ಮಂಗಳೂರಿನಲ್ಲಿ ಇದೇ ಪ್ರಥಮ ಬಾರಿಗೆ ತಾಜಾ ಮೀನು ರಫ್ತು ರೂಪದಲ್ಲಿ ರೂಪ ತಳೆದುಕೊಂಡಿದೆ. ಕೆಎಫ್‌ಡಿಸಿಯ ವಿ.ಕೆ.ಶೆಟ್ಟಿ, ಎನ್.ಡಿ.ಪ್ರಸಾದ್ ಸಹಿತ ಹಲವರು ರಫ್ತುದಾರರಿಗೆ ನೆರವು ನೀಡಿದ್ದಾರೆ.

ಅವಕಾಶ ಬಳಸಿಕೊಳ್ಳಿ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಸರಕು ಸಾಗಣೆ ಸೌಲಭ್ಯ ಆರಂಭವಾದ ಬಳಿಕ ಕೇವಲ ಐದು ಬಾರಿ ಸರಕುಗಳು ವಿದೇಶಗಳಿಗೆ ರವಾನೆಯಾಗಿವೆ. ಮೀನು ಮಾತ್ರವಲ್ಲ, ಹೂ, ತರಕಾರಿ ಸಹಿತ ಬೇಗನೆ ಕೆಡುವಂತಹ ಇನ್ನಷ್ಟು ಸರಕುಗಳನ್ನು ಇಲ್ಲಿಂದ ರಫ್ತು ಮಾಡಬಹುದು. ಜನರು ವಿಮಾನ ನಿಲ್ದಾಣದ ಸೌಲಭ್ಯ ಬಳಸಿಕೊಳ್ಳಬೇಕು ಎಂದು ವಿಮಾನ ನಿಲ್ದಾಣದ ನಿರ್ದೇಶಕ ಜಿ.ಟಿ.ರಾಧಾಕೃಷ್ಣ ಹೇಳಿದರು.

ರಫ್ತಿನಿಂದ ಲಾಭ ಇದೆಯೇ
ಮಂಗಳೂರು ಮಾರುಕಟ್ಟೆಯಲ್ಲಿ ಮಾಂಜಿ ಮೀನಿಗೆ ಕೆ.ಜಿ.ಗೆ ರೂ700 ದರ ಇದೆ. ಕುವೈತ್‌ನಲ್ಲಿ ಇದಕ್ಕೆ ಕನಿಷ್ಠ ರೂ1000 ದೊರೆಯುವುದು ನಿಶ್ಚಿತ. 500 ಕೆ.ಜಿ.ಮೀನು ರವಾನೆಗಾಗಿ ರಫ್ತುದಾರರಿಗೆ ರೂ36 ಸಾವಿರ  ವಿಮಾನ ವೆಚ್ಚ ತಗುಲಿದೆ.

ಕೆಲವೊಂದು ಇಲಾಖೆಗಳ ಸಬ್ಸಿಡಿಯಿಂದ ವಿಮಾನ ವೆಚ್ಚ ಸರಿದೂಗಬಹುದು, ಹೀಗಾಗಿ ಹೆಚ್ಚುವರಿಯಾಗಿ ದೊರೆಯುವ ಹಣ ರಫ್ತುದಾರರಿಗೆ ಲಾಭವಾಗಿ ಸಿಗುವ ಸಾಧ್ಯತೆ ಇದೆ. ಆದರೆ ಸದ್ಯ ಲಾಭಕ್ಕಿಂತಲೂ ಡಾಲರ್ ರೂಪದಲ್ಲಿ ಹಣ ದೊರೆಯುವುದರಿಂದ ದೇಶಕ್ಕೆ ಭಾರಿ ಅನುಕೂಲವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.