ಮುಂಬೈ(ಪಿಟಿಐ): `ಈಗಿನ ಮಂದಗತಿಯ ಆರ್ಥಿಕ ಪ್ರಗತಿ ಅನಿವಾರ್ಯವಾದುದೇನೂ ಆಗಿರಲಿಲ್ಲ. ಹಾಗೆಂದು ಸುಧಾರಣೆ ಕಂಡುಕೊಳ್ಳಲು ಸಾಧ್ಯವಾಗದ್ದೂ ಏನಲ್ಲ~ ಎಂದು ದೇಶದ ಸದ್ಯದ ಸ್ಥಿತಿ ಮತ್ತು ಭವಿಷ್ಯ ಕುರಿತು ವಿಶ್ಲೇಷಣಾತ್ಮಕವಾಗಿ ಮಾತನಾಡಿದ್ದಾರೆ ಪ್ರಧಾನಿ ಮನಮೋಹನ್ ಸಿಂಗ್.
ಇಲ್ಲಿನ ಪ್ರತಿಷ್ಠಿತ `ಐಐಟಿ-ಬಾಂಬೆ~ ತಾಂತ್ರಿಕ ಶಿಕ್ಷಣ ಸಂಸ್ಥೆಯ ಘಟಿಕೋತ್ಸವದಲ್ಲಿ ಶನಿವಾರ ಭಾಷಣ ಮಾಡಿದ ಅವರು, 1900ರಿಂದ 1950ರವರೆಗಿನ ಅವಧಿ ದೇಶದ ಆರ್ಥಿಕ ಪ್ರಗತಿಯ ಲೆಕ್ಕದಲ್ಲಿ ಶೂನ್ಯ ಸಾಧನೆಯದೇ ಆಗಿತ್ತು. ಸ್ವಾತಂತ್ರ್ಯಾ ನಂತರದ ಮೂರು ದಶಕಗಳಲ್ಲಿ (1950-80) ಶೇ 3.5ರಷ್ಟು ಆರ್ಥಿಕ ಪ್ರಗತಿಕಾಣಲಾಯಿತು ಎಂದರು.
`ಆದರೆ ನಂತರದ ಮೂರು ದಶಕ(1980-2010) ಆರ್ಥಿಕ ಪ್ರಗತಿಯ ವಿಚಾರದಲ್ಲಿ ವೇಗದ ಅವಧಿಯದಾಗಿತ್ತು. ಹಿಂದಿನ ಮೂರು ದಶಕಕ್ಕೆ ಹೋಲಿಸಿದರೆ ನಂತರದ ಅವಧಿಯಲ್ಲಿ ಆರ್ಥಿಕ ಪ್ರಗತಿ ದುಪ್ಪಟ್ಟಾಗಿತ್ತು~ ಎಂದರು.
`ದೇಶದ ಪ್ರಗತಿಯನ್ನು ಶೇ 9ರವರೆಗೂ ಕೊಂಡೊಯ್ಯಬಹುದು ಎಂಬುದನ್ನು 2003-08ರ ನಡುವಿನ 5 ವರ್ಷದಲ್ಲಿ ನಾವು ತೋರಿಸಿಕೊಟ್ಟಿದ್ದೆವು~ ಎಂದೂ ಅವರು ತಮ್ಮ ಮೊದಲ ಅವಧಿಯ ಆಡಳಿತದತ್ತ ಗಮನ ಸೆಳೆದರು.
`ಕಳೆದ ವರ್ಷ ಪ್ರಗತಿ ಮಂದಗತಿಗೆ ಬಂದಿದೆ ಎಂಬುದು ಗೊತ್ತಿದೆ. ಅದೇನೂ ಅನಿವಾರ್ಯವಾದ ಸಂಗತಿಯಾಗಿರಲಿಲ್ಲ. ಹಾಗೆಂದು ಈ ಪರಿಸ್ಥಿತಿಯಿಂದ ಬದಲಾವಣೆ ಅಸಾಧ್ಯ, ಸಂಕಷ್ಟದಿಂದ ಹೊರಬರಲಾಗುವುದೂ ಇಲ್ಲ ಎಂಬ ಪರಿಸ್ಥಿತಿಯೂ ಇಲ್ಲ. ಏಕೆಂದರೆ ನಮ್ಮ ದೇಶದ ಆರ್ಥಿಕ ವ್ಯವಸ್ಥೆಯ ಮೂಲ ಅಂಶಗಳು ಬಹಳ ಸದೃಢವಾದದ್ದಾಗಿವೆ.
ನಮ್ಮಲ್ಲಿನ ಅಸಾಧಾರಣ ಮಾನವ ಸಂಪನ್ಮೂಲವನ್ನು ಸಮರ್ಥವಾಗಿ ಬಳಸಿಕೊಂಡಲ್ಲಿ ಹಾಗೂ ದೈಹಿಕ ಶ್ರಮವನ್ನೂ ತೊಡಗಿಸಿದಲ್ಲಿ ಈ ಸಂಕಷ್ಟದ ಪರಿಸ್ಥಿತಿಯಿಂದ ಬೇಗನೇ ಹೊರಬರಬಹುದು. ಅಷ್ಟೇ ಅಲ್ಲ, ಮತ್ತೆ 2003-08ರ ಅವಧಿಯಲ್ಲಿದ್ದಂತೆ ಶೇ 8-9ರ ಜಿಡಿಪಿ ಬೆಳವಣಿಗೆ ಕಾಣಬಹುದು~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.