ADVERTISEMENT

ಮಾರುತಿ: ಗಲಭೆ ನಿಯಂತ್ರಣಕ್ಕೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 19:30 IST
Last Updated 20 ಜುಲೈ 2012, 19:30 IST
ಮಾರುತಿ: ಗಲಭೆ ನಿಯಂತ್ರಣಕ್ಕೆ
ಮಾರುತಿ: ಗಲಭೆ ನಿಯಂತ್ರಣಕ್ಕೆ   

ಗುಡಗಾಂವ್ (ಪಿಟಿಐ): ಕಾರ್ಮಿಕರ ಗಲಭೆ ಹಿನ್ನೆಲೆಯಲ್ಲಿ ಮಾರುತಿ ಸುಜುಕಿಯ ಮಾನೇಸರ ತಯಾರಿಕಾ ಘಟಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಘಟಕದಲ್ಲಿದ್ದ ಕಾರುಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಜೀವ ದಹನ:
ಗಲಭೆಯಲ್ಲಿ ಮೃತಪಟ್ಟ  ಕಂಪೆನಿಯ ಮಾನವ ಸಂಪನ್ಮೂಲ  ವಿಭಾಗದ ಪ್ರಧಾನ ವ್ಯವಸ್ಥಾಪಕ ಅವನೀಶ್ ಕುಮಾರ್ ದೇವ್ ಅವರ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ದುಷ್ಕರ್ಮಿಗಳು ಅವರನ್ನು ಸಜೀವವಾಗಿ ದಹಿಸಿರುವುದು ಧೃಡಪಟ್ಟಿದೆ.

ಮಾರುತಿ ಸುಜುಕಿ ಕಾರ್ಮಿಕರ ಒಕ್ಕೂಟ ಗಲಭೆ ನಂತರದ ಬೆಳವಣಿಗೆಗಳ  ಕುರಿತು ಯಾವುದೇ ಪ್ರತಿಕ್ರಿಯೆ ನೀಡಲ್ಲ. ಬಂಧನದ ಭೀತಿಯಲ್ಲಿರುವ ಅನೇಕರು ಬೇರೆ ಸ್ಥಳಗಳಿಗೆ ತೆರಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
 
ಘಟಕ ಸ್ಥಳಾಂತರ : ಮಾನೇಸರ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸಲು ಕಂಪೆನಿ ಗುಟ್ಟಾಗಿ ನಡೆಸಿದ ಸಂಚು ಈ ಗಲಭೆಗೆ ಕಾರಣ ಎಂದು ಇಲ್ಲಿಗೆ ಸುತ್ತಮುತ್ತಲಿನ 7 ಗ್ರಾಮಗಳ ಸರಪಂಚರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪದೇ ಪದೇ ನೌಕರರ ಮುಷ್ಕರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಘಟಕವನ್ನೇ ಬೇರೆಡೆಗೆ ಸ್ಥಳಾಂತರಿಸುವ ಕುರಿತು ಕಂಪೆನಿ ಅಧಿಕಾರಿಗಳು ಚಿಂತಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಕಠಿಣ ಕ್ರಮ: `ಈ ಘಟನೆಯ ರಾಜ್ಯದ ಉದ್ಯಮ ಮತ್ತು ಹೂಡಿಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಘಟನೆಗೆ ಕಾರಣರಾವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹರಿಯಾಣ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಹೇಳಿದ್ದಾರೆ.

ಪೂರೈಕೆದಾರರಿಗೆ ಬಿಸಿ: ಮಾನೇಸರ ತಯಾರಿಕೆ ಘಟಕ ಸ್ಥಗಿತಗೊಂಡಿರುವುದರಿಂದ ಪಂಜಾಬ್ ಮೂಲದ ಕೆಲವು ವಾಹನಗಳ ಬಿಡಿಭಾಗಗಳ ಪೂರೈಕೆದಾರರು ಆತಂಕಕ್ಕೆ ಸಿಲುಕಿದ್ದಾರೆ. `ಇದು ನಮ್ಮ ವಹಿವಾಟಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಬಿಡಿಭಾಗ ಪೂರೈಕೆ ಸಂಸ್ಥೆ `ಜಿಎನ್‌ಎ~ ಸಮೂಹದ  ನಿರ್ದೇಶಕ ರಣಬೀರ್ ಸಿಂಗ್ ತಿಳಿಸಿದ್ದಾರೆ.

ಕಂಪೆನಿಯು ಪ್ರತಿ ತಿಂಗಳು 4 ಸಾವಿರ ಕೋಟಿಗಳಷ್ಟು ಮೌಲ್ಯದ ಬಿಡಿಭಾಗಗಳನ್ನು ಸ್ಥಳೀಯ ಸಂಸ್ಥೆಗಳಿಂದ ತರಿಸಿಕೊಳ್ಳುತ್ತದೆ. ಗಲಭೆ ನಂತರ ಶೇ 70ರಷ್ಟು ಸರಕುಗಳ ಪೂರೈಕೆ ಸ್ಥಗಿತೊಂಡಿದೆ.

800 ಮುಂದೂಡಿಕೆ: ದೀಪಾವಳಿ ವೇಳೆಗೆ ಕಂಪೆನಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಉದ್ದೇಶಿಸಿದ್ದ `ಮಾರುತಿ 800~  ಹೊಸ ಕಾರಿನ ತಯಾರಿಕೆ ಗಲಭೆ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದು ಕಂಪೆನಿ ಅಧ್ಯಕ್ಷ ಶಿಂಜೊ ನಕಾನಿಶಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.


ವಿಪ್ರೊ ನೌಕರರ ಪ್ರತಿಭಟನೆ
ನವದೆಹಲಿ (ಪಿಟಿಐ): ನೊಯಿಡಾದಲ್ಲಿರುವ ವಿಪ್ರೊ ಸಂಸ್ಥೆಯ ಕೆಲವು ನೌಕರರು ಮತ್ತು ಕಂಪೆನಿಯ ಟ್ಯಾಕ್ಸಿ ಚಾಲಕರ ನಡುವೆ ಶುಕ್ರವಾರ ನಡೆದ ಘರ್ಷಣೆಯಲ್ಲಿ ಐವರು ಉದ್ಯೋಗಿಗಳು ಗಾಯಗೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ 300ಕ್ಕೂ ಹೆಚ್ಚು ಉದ್ಯೋಗಿಗಳು ಸಂಸ್ಥೆಯ ಮುಂದೆ ಪ್ರತಿಭಟನೆ ನಡೆಸಿದರು.

ಮಾರುತಿ ಸುಜುಕಿ ಗಲಭೆ ಬೆನ್ನಲ್ಲೇ ಈ ಘಟನೆ ನಡೆದಿರುವುದು ಕೆಲಕಾಲ ಆತಂಕ ಮೂಡಿಸಿತ್ತು.
 ಘಟನೆಗೆ ಸಂಬಂಧಿಸಿದಂತೆ ಸಮೀಪದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೊಂದು ಸಣ್ಣ ವಿಷಯ. ಕಂಪೆನಿಯ ಕ್ಯಾಂಪಸ್ ಹೊರಗೆ ನಡೆದಿದೆ ಎಂದು ಕಂಪೆನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.