ADVERTISEMENT

ಮಾರುತಿ: ಯುವಕರಿಗಾಗಿ ಎಕ್ಸ್‌ಎ ಆಲ್ಫಾ

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 19:30 IST
Last Updated 5 ಜನವರಿ 2012, 19:30 IST

ನವದೆಹಲಿ: `ಮಧ್ಯಮ ವರ್ಗದವರ ಆರ್ಥಿಕ ಚೇತರಿಕೆ, ಏರುತ್ತಿರುವ ಕಾರು ಗ್ರಾಹಕರ ಸಂಖ್ಯೆ ಹಾಗೂ ಪೂರಕವಾಗಿರುವ ಸರ್ಕಾರದ ನೀತಿಗಳಿಂದ ಇಂದು ಮಾರುತಿ ಸುಜುಕಿ ಹೊಸ ಬಗೆಯ ಕಾರುಗಳನ್ನು ಪರಿಚಯಿಸಲು ಸಾಧ್ಯವಾಗುತ್ತಿದೆ~ ಎಂದು ಭಾರತದ ಅತಿ ದೊಡ್ಡ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿಯ ವ್ಯವಸ್ಥಾಪಕ ನಿರ್ದೇಶಕ ಷಿನ್ಜೊ  ನಕನಾಷಿ ತಿಳಿಸಿದರು.

ದೆಹಲಿಯ ಪ್ರಗತಿ ಮೈದಾನದಲ್ಲಿ ಆಯೋಜಿಸಲಾಗಿರುವ 11ನೇ `ಆಟೊ ಎಕ್ಸ್‌ಪೊ~ದಲ್ಲಿ ಕಂಪೆನಿಯ ಕಲ್ಪನೆಯ ಎಸ್‌ಯುವಿ `ಎಕ್ಸ್‌ಎ ಆಲ್ಫಾ~ ಅನಾವರಣಗೊಳಿಸಿ ಅವರು ಮಾತನಾಡಿದರು. ಶೇ 65ರಷ್ಟಿರುವ ಯುವ ಜನತೆಯನ್ನೇ ಗುರಿಯಾಗಿಟ್ಟುಕೊಂಡು `ಎಕ್ಸ್‌ಎ ಆಲ್ಫಾ~ ಕಾರನ್ನು ವಿನ್ಯಾಸಗೊಳಿಸಲಾಗಿದೆ. ಜಪಾನ್ ಹಾಗೂ ಭಾರತೀಯ ಎಂಜಿನಿಯರ್‌ಗಳ ಪರಿಕಲ್ಪನೆಯಲ್ಲಿ ಕೇವಲ ಒಂಬತ್ತು ತಿಂಗಳಲ್ಲಿ ಸಿದ್ಧಪಡಿಸಲಾದ ಕಲ್ಪನೆಯ `ಎಕ್‌ಎ ಆಲ್ಫಾ~ ಸಿದ್ಧಗೊಂಡಿದ್ದು ಚೀನಾದಲ್ಲಿ.

`ಕಳೆದ ಆಟೊ ಎಕ್ಸ್‌ಪೊ ನಂತರ ಭಾರತದಲ್ಲಿ ಕಾರುಗಳ ಮಾರಾಟದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಸಣ್ಣ ಕಾರು ಖರೀದಿ ಬಹುತೇಕ ಭಾರತೀಯರ ಅಪೇಕ್ಷೆಯಾಗಿದೆ. ಹೀಗಾಗಿ ಹೊಸ ಪೀಳಿಗೆಯ ವ್ಯಾಗನ್ ಆರ್ ಹಾಗೂ `ಕೆ~ ಸರಣಿ ಎಂಜಿನ್ ಅಭಿವೃದ್ಧಿಯತ್ತ ಮಾರುತಿ ಸುಜುಕಿ ತನ್ನ ಗಮನ ಕೇಂದ್ರೀಕರಿಸಿದೆ~ ಎಂದು ನಕನಾಷಿ ಅಭಿಪ್ರಾಯಪಟ್ಟರು.

`ಅತ್ಯುತ್ತಮ ಕಾರು ಪ್ರಶಸ್ತಿಗೆ ಎರಡು ಬಾರಿ ಆಯ್ಕೆಯಾದ ಮಾರುತಿ ಸುಜುಕಿ `ಸ್ವಿಫ್ಟ್~ ಕಾರಿಗಾಗಿ ಗ್ರಾಹಕರು ಆರೆಂಟು ತಿಂಗಳು ಕಾಯಬೇಕಾದ ಪರಿಸ್ಥಿತಿ ಇದೆ. ಗ್ರಾಹಕರ ಬೇಡಿಕೆ ಪೂರ್ಣಗೊಳಿಸಲು ಸ್ವಿಫ್ಟ್ ಉತ್ಪಾದನೆ ಹೆಚ್ಚಿಸಲು, ವಿತರಣೆ, ಮಾರುಕಟ್ಟೆ ಹಾಗೂ ಗುಣಮಟ್ಟದತ್ತ ಗಮನಹರಿಸಲಾಗಿದೆ~ ಎಂದರು.

`ಸಣ್ಣ ಕಾರುಗಳ ತಯಾರಿಕೆಯಲ್ಲಿ ಸಿಕ್ಕ ಯಶಸ್ಸನ್ನು ಕಾಪಾಡಿಕೊಂಡು ಮುಂದಿನ ಕೆಲವು ವರ್ಷಗಳ ಕಾಲ ಬಹುಬಗೆಯ ಹಾಗೂ ವಿವಿಧ ಬಗೆಯ ಇಂಧನ ಬಳಕೆಯ ಕಾರುಗಳ ತಯಾರಿಕೆಗಾಗಿ ಮಾರುತಿ ಸುಜುಕಿ ತನ್ನ ಯೋಜನೆಗಳನ್ನು ಸಿದ್ಧಪಡಿಸಿದೆ~ ಎಂದರು.

ಸುಜುಕಿ ಮೋಟಾರ್ ಸೈಕಲ್ ವಿಭಾಗವು ಸ್ವಿಷ್ ಎಂಬ 125 ಸಿಸಿ ಸ್ಕೂಟರ್ ಹಾಗೂ ಹಯಾತೆ ಎಂಬ 110 ಸಿಸಿ ಬೈಕ್ ಬಿಡುಗಡೆ ಮಾಡಿತು. ಮಾರ್ಚ್ 2012ರ ವೇಳೆಗೆ ಮಾರುಕಟ್ಟೆ ಪ್ರವೇಶಿಸಲಿರುವ ಹಯಾತೆ ಬೈಕ್‌ನ ಬೆಲೆ ದೆಹಲಿಯಲ್ಲಿ ರಸ್ತೆ ಸಾರಿಗೆ ಸುಂಕ ಹೊರತುಪಡಿಸಿ ರೂ. 42,000 ಹಾಗೂ ಸ್ವಿಷ್ ಸ್ಕೂಟರ್ ಬೆಲೆ ರೂ. 45,430  ಇರಲಿದೆ.

ಇತರ ಪ್ರಮುಖ ವಾಹನಗಳು: ಆಟೊ ಎಕ್ಸ್‌ಪೊ ಮೇಳದಲ್ಲಿ ದೇಶದ ಎಲ್ಲಾ ವಾಹನ ತಯಾರಿಕಾ ಕಂಪೆನಿಗಳು ಹೊಸ ಮಾದರಿಯ ವಾಹನಗಳನ್ನು ಬಿಡುಗಡೆಗೊಳಿಸಿದವು. ಜತೆಗೆ ಅಮೆರಿಕ, ಕೊರಿಯಾ, ನೆದರ್‌ಲ್ಯಾಂಡ್ ಹಾಗೂ ಇತರ ಐರೋಪ್ಯ ರಾಷ್ಟ್ರಗಳ ಬಗೆಬಗೆಯ ವಾಹನಗಳೂ ಪರಿಚಯಗೊಂಡವು.

ದೇಶದ ಎರಡನೇ ಅತಿ ದೊಡ್ಡ ಕಾರು ತಯಾರಿಕಾ ಕಂಪೆನಿ ಹುಂಡೈ 2.4 ಲೀಟರ್ ಎಂಜಿನ್ ಸಾಮರ್ಥ್ಯದ ಜಿಡಿಐ ಎಂಜಿನ್‌ನ ಹೊಚ್ಚ ಹೊಸ `ಸೊನಾಟಾ~ ಕಾರನ್ನು ಬಿಡುಗಡೆ ಮಾಡಿತು. ಮಹೀಂದ್ರಾ ಅಂಡ್ ಮಹೀಂದ್ರಾ ಸಂಸ್ಥೆಯು ಕೊರಿಯಾದ ಸ್ಯಾಂಗ್‌ಯಾಂಗ್ ಕಂಪೆನಿಯೊಂದಿಗೆ ಜತೆಗೂಡಿ ನಾಲ್ಕು `ಎಸ್‌ಯುವಿ~   ಪರಿಚಯಿಸಿತು.

ಜಲಜನಕ ಚಾಲಿತ ಕಾರು: ಕಾರು ತಯಾರಿಕೆಯಲ್ಲಿ ಜಾಗತಿಕ ಮಾರುಕಟ್ಟೆಯ ಗಮನ ಸೆಳೆದಿರುವ ಮರ್ಸಿಡೀಸ್ ಬೆಂಜ್ ಮಾಲಿನ್ಯ ಮುಕ್ತ ಜಲಜನಕ ಬಳಸಿ ಚಲಿಸಬಲ್ಲ ಕಾರನ್ನು ಪ್ರದರ್ಶಿಸಿತು. ಇನ್ನೂ ಪ್ರಾಯೋಗಿಕ ಹಂತದಲ್ಲಿರುವ ಈ ಕಾರಿನ ಎಂಜಿನ್ ಕಾರ್ಯವಿಧಾನವನ್ನು ಮೇಳದಲ್ಲಿ ವಿವರಿಸಲಾಯಿತು. ದೇಶದಲ್ಲಿ ಸಣ್ಣ ಕಾರುಗಳ ಬೇಡಿಕೆ ಹೆಚ್ಚುತ್ತಿರುವ ಬೆನ್ನಲ್ಲೇ ಬಿಎಂಡಬ್ಲೂ ಕಂಪೆನಿಯು `ಮಿನಿ~ ಬಿಎಂಡಬ್ಲೂ ಕಾರನ್ನು ಬಿಡುಗಡೆಗೊಳಿಸಿತು.

ಟಾಟಾ ಮೋಟಾರ್ಸ್‌ ಪ್ರಯಾಣಿಕ ಹಾಗೂ ಸರಕು ಸಾಗಣೆ ಸೇರಿದಂತೆ ಮೂರು ನೂತನ ವಾಹನಗಳನ್ನು ಇಂದು ಪ್ರದರ್ಶಿಸಿತು. ಹೊಸ ಪೀಳಿಗೆಯ `ಸಫಾರಿ ಸ್ಟಾರ್ಮ್~,  ಉಲ್ಟ್ರಾ ಎಂಬ ಮಿನಿ ಹಾಗೂ ದೊಡ್ಡ ಗಾತ್ರದ ಟ್ರಕ್, ಭಾರತದ ಮೊದಲ ಐದು ಆಕ್ಸಲ್ ಟ್ರಕ್ ಎಲ್‌ಪಿಟಿ 3733 ವಾಹನಗಳು ಇಂದು ವಾಹನ ಲೋಕಕ್ಕೆ ಪರಿಚಯಗೊಂಡವು.

ಅಶೋಕ್ ಲೇಲ್ಯಾಂಡ್ ಕಂಪೆನಿಯು ನಿಸ್ಸಾನ್ ಸಂಸ್ಥೆ ಜತೆಗೂಡಿ ಅಭಿವೃದ್ಧಿಪಡಿಸಿರುವ `ಎವಾಲಿಯಾ~ ಎಂಬ ಬಹೂಪಯೋಗಿ ಕಾರು ಹಾಗೂ `ಸ್ಟೈಲ್~ ಎಂಬ ಸಾರಿಗೆ ವಾಹನವನ್ನು ಕೇಂದ್ರ ಸಚಿವ ಕಮಲ್‌ನಾಥ್ ಅನಾವರಣ ಮಾಡಿದರು. ದಕ್ಷ ಕಾರ್ಯಕ್ಷಮತೆಯ ಹೈಬ್ರೀಡ್ ಬಸ್‌ಗಳನ್ನು ವೋಲ್ವೊ ಪರಿಚಯಿಸಿತು.

ಪೀಜೊ ಕಂಪೆನಿ ವಿಶ್ವದ ಮೊದಲ ವಿದ್ಯುತ್ ಹಾಗೂ ಡೀಸೆಲ್ ಚಾಲಿತ ಹೈಬ್ರೀಡ್ ಕಾರ್ `ಪೀಜೊ 3008 ಹೈಬ್ರೀಡ್ 4~ ಕಾರನ್ನು ಪ್ರದರ್ಶಿಸಿತು. ಆಡಿ ಚಿಕ್ಕ ಮಾದರಿಯ ಎಸ್‌ಯುವಿ ಎ3, ಲಿಮೋಸಿನ್ ಎಸ್6, ಹಾಗೂ ಧಕ್ಷ ಡೀಸಲ್ ಎಂಜಿನ್ ಹೊಂದಿರುವ ಕ್ಯೂ7 ವಿ12 ಪ್ರದರ್ಶಿಸಿತು.

 ಸಾರಿಗೆ ಸಚಿವ ಅಶೋಕ್ ಭೇಟಿ: ಅಶೋಕ್ ಲೇಲ್ಯಾಂಡ್ ಹಾಗೂ ವೋಲ್ವೊ ಮಳಿಗೆಗೆ ಭೇಟಿ ನೀಡಿದ ಸಾರಿಗೆ ಸಚಿವ ಆರ್. ಅಶೋಕ್ ಎರಡೂ ಕಂಪೆನಿಗಳು ಪ್ರದರ್ಶಿಸುತ್ತಿರುವ ಬಸ್‌ಗಳನ್ನು ವೀಕ್ಷಿಸಿದರು. ಹೊಸ ಮಾದರಿಯ ಬಸ್‌ಗಳು ಸಚಿವರನ್ನು ಆಕರ್ಷಿಸಿದ್ದು, ಅವುಗಳನ್ನು ಖರೀದಿಸುವ ಬಗ್ಗೆ ಉತ್ಸಾಹ ತೋರಿದ್ದಾರೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.