ADVERTISEMENT

ಮಾಲೆ ವಿಮಾನ ನಿಲ್ದಾಣ ನವೀಕರಣ ಗುತ್ತಿಗೆ ರದ್ದು

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2012, 10:43 IST
Last Updated 10 ಡಿಸೆಂಬರ್ 2012, 10:43 IST

ಶನಿವಾರ ಮಧ್ಯರಾತ್ರಿ ನಡೆದ ಸಮಾರಂಭದಲ್ಲಿ ಮಾಲ್ಡೀವ್ಸ್ ಸರ್ಕಾರವು ಮಾಲೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆ ಹೊಣೆಯನ್ನು ಭಾರತದ `ಜಿಎಂಆರ್' ಸಂಸ್ಥೆಯಿಂದ ತನ್ನ ವಶಕ್ಕೆ ತೆಗೆದುಕೊಂಡಿದೆ.  ಹೀಗಾಗಿ ಬೆಂಗಳೂರು ಮೂಲದ ಮೂಲಸೌಕರ್ಯ ಸಂಸ್ಥೆ `ಜಿಎಂಆರ್', ಮಾಲ್ಡೀವ್ಸ್  ವಿಮಾನ ನಿಲ್ದಾಣ  ನವೀಕರಿಸುವ ರೂ 275  ಕೋಟಿಗಳ ಗುತ್ತಿಗೆ ಯೋಜನೆಗೆ ಎರವಾಗಿದೆ.

ಮಾಲೆ ವಿಮಾನ ನಿಲ್ದಾಣವನ್ನು ಈಗ ಮಾಲ್ಡೀವ್ಸ್  ಸರ್ಕಾರಿ ಸ್ವಾಮ್ಯದ `ಎಂಎಸಿಎಲ್'ಗೆ ಹಸ್ತಾಂತರಿಸಲಾಗಿದೆ. ಇದರಿಂದ ಹಿಂದೂ ಮಹಾಸಾಗರದಲ್ಲಿನ ಪುಟ್ಟ ದೇಶ ಮಾಲ್ಡೀವ್ಸ್‌ನ್ಲ್ಲಲಿನ ಇದುವರೆಗಿನ ಅತಿ ದೊಡ್ಡ ಪ್ರಮಾಣದ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಯೋಜನೆಯೊಂದು ಅರ್ಧದಲ್ಲಿಯೇ ಮೊಟಕುಗೊಂಡಂತೆ ಆಗಿದೆ.

ಮಾಲೆ ವಿಮಾನ ನಿಲ್ದಾಣದ ನವೀಕರಣ ಗುತ್ತಿಗೆ ರದ್ದುಪಡಿಸುವ ಅಧಿಕಾರ ಅಲ್ಲಿನ ಸರ್ಕಾರಕ್ಕೆ ಇದೆ ಎಂದು ಸಿಂಗಪುರ ಮೇಲ್ಮನವಿ ಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಒಪ್ಪಂದ ರದ್ದತಿ ಕಾರಣ
ಮಾಲ್ಡೀವ್ಸ್‌ನ ಹಿಂದಿನ ಅಧ್ಯಕ್ಷ ಮೊಹಮ್ಮದ್ ನಶೀದ್ ಅವರು 2010ರಲ್ಲಿ `ಜಿಎಂಆರ್' ಜತೆ ಒಪ್ಪಂದ ಮಾಡಿಕೊಂಡಿದ್ದರು. ವಿಮಾನ ನಿಲ್ದಾಣ ನವೀಕರಣ ಮತ್ತು ಹೊಸ ಟರ್ಮಿನಲ್ ನಿರ್ಮಾಣಕ್ಕೆ ರೂ 275 ಕೋಟಿಗಳ ಗುತ್ತಿಗೆ ನೀಡುವ ಒಪ್ಪಂದ ಇದಾಗಿತ್ತು.ಈ ವರ್ಷದ ನವೆಂಬರ್ 27ರಂದು ಏಕಾಏಕಿ ಈ ನವೀಕರಣ ಗುತ್ತಿಗೆ ಒಪ್ಪಂದವನ್ನು ಸರ್ಕಾರವೇ ರದ್ದುಪಡಿಸಿತ್ತು. ಸಂಶಯಾಸ್ಪದ ರೀತಿಯಲ್ಲಿ ಒಪ್ಪಂದ ನಡೆದಿದೆ ಎನ್ನುವ ಕಾರಣ ನೀಡಲಾಗಿತ್ತು.

ಮಾಲೆ ವಿಮಾನ ನಿಲ್ದಾಣದಿಂದ ತೆರಳುವ ಪ್ರಯಾಣಿಕರ ಮೇಲೆ 25 ಡಾಲರ್‌ಗಳಷ್ಟು `ವಿಮಾನ ಅಭಿವೃದ್ಧಿ ಶುಲ್ಕ (ಎಡಿಸಿ) ವಿಧಿಸಿ ವಸೂಲಿ ಮಾಡುವ `ಜಿಎಂಆರ್'ನ ಆಲೋಚನೆ ವಿವಾದಕ್ಕೆ ಕಾರಣವಾಗಿತ್ತು. `ಎಡಿಸಿ' ವಿಧಿಸುವ `ಜಿಎಂಆರ್'ನ ಅಧಿಕಾರವನ್ನು  ಮಾಲ್ಡೀವ್ಸ್ ಕೋರ್ಟ್ ಕೂಡ ರದ್ದುಪಡಿಸಿತ್ತು.

ಈ ಗುತ್ತಿಗೆ ರದ್ದಾಗಲು ಮಾಲ್ಡೀವ್ಸ್ ರಾಜಕೀಯ ಪಕ್ಷಗಳು ಅನುಸರಿಸುತ್ತಿರುವ ಕಟ್ಟಾ ಧಾರ್ಮಿಕ ಸಂಪ್ರದಾಯ ನೀತಿ ಮತ್ತು ವಿದೇಶಿಯರನ್ನು ದ್ವೇಷಿಸುವ ಧೋರಣೆ, ಜತೆಗೆ ಕೆಲ ರಾಜಕೀಯ ಪಕ್ಷಗಳು ಭಾರತ ವಿರೋಧಿ ನಿಲುವು ತಳೆದಿರುವುದು ಕೂಡ ಕಾರಣವಾಗಿದೆ.

ಪರಿಣಾಮಗಳು
ಈ ವಿಮಾನ ನವೀಕರಣ ಗುತ್ತಿಗೆ ಒಪ್ಪಂದ ರದ್ದಾಗಿರುವುದು ದೂರಗಾಮಿ ಪರಿಣಾಮ ಬೀರಲಿದೆ. ಇದೊಂದು ವಿಶ್ವ ಬ್ಯಾಂಕ್‌ನ ಟೆಂಡರ್ ಆಗಿದೆ. ವಿಮಾನ ನಿಲ್ದಾಣ ನವೀಕರಣಕ್ಕೆ ಮಾಲ್ಡೀವ್ಸ್ ಸರ್ಕಾರಕ್ಕೆ ಆರಂಭದಲ್ಲಿ ಗುತ್ತಿಗೆದಾರರೇ ಸಿಕ್ಕಿರಲಿಲ್ಲ. ಇದನ್ನು ಅಂತರರಾಷ್ಟ್ರೀಯ ಹಣಕಾಸು ನಿಗಮದ  (ಐಎಫ್‌ಸಿ) ಮಧ್ಯಪ್ರವೇಶದಿಂದ ಆರು ಸಂಸ್ಥೆಗಳಲ್ಲಿ `ಜಿಎಂಆರ್' ಸಂಸ್ಥೆಗೆ ಗುತ್ತಿಗೆ ನೀಡುವುದನ್ನು ಅಂತಿಮಗೊಳಿಸಲಾಗಿತ್ತು.
ಜಾಗತಿಕ ಒಪ್ಪಂದಗಳನ್ನು ಸ್ಥಳೀಯ ಸಂಪ್ರದಾಯವಾದಿ ಸರ್ಕಾರವು ರಾಜಕೀಯ ಕಾರಣಗಳಿಗೆ ರದ್ದುಮಾಡುತ್ತಿರುವುದು ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಕೆಟ್ಟ ಸಂದೇಶ ನೀಡಿದಂತಾಗಿದೆ.

`ಜಿಎಂಆರ್'ದಂತಹ ದೊಡ್ಡ ಸಂಸ್ಥೆಯ ಗುತ್ತಿಗೆ ರದ್ದುಪಡಿಸುವುದರಿಂದ  ಮೂಲಭೂತವಾದಿಗಳು ತಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ, ಮುಂದಿನ ಚುನಾವಣೆಯಲ್ಲಿ ಗೆಲುವಿಗೆ ನೆರವಾಗಲಿದ್ದಾರೆ ಎನ್ನುವುದು ಹಾಲಿ ಅಧ್ಯಕ್ಷ ಮೊಹಮ್ಮದ್ ವಹೀದ್ ಅವರ  ಲೆಕ್ಕಾಚಾರವಾಗಿದೆ.
ಮಾಲ್ಡೀವ್ಸ್‌ನ ಈ ರಾಜಕೀಯ ಲೆಕ್ಕಾಚಾರದಲ್ಲಿ ಭಾರತದ ಹಿತಾಸಕ್ತಿಗೆ ಧಕ್ಕೆ ಒದಗಿದೆ. ವಿಶ್ವ ಬ್ಯಾಂಕ್ ಟೆಂಡರ್‌ನ ಗುತ್ತಿಗೆ ಇದಾಗಿರುವುದರಿಂದ ಈ ಗುತ್ತಿಗೆಯಲ್ಲಿ ಯಾವುದೇ ಅವ್ಯವಹಾರ ನಡೆದಿದೆ ಎಂದೂ ದೂರುವಂತಿಲ್ಲ. ಹೊಸ ಸರ್ಕಾರದಲ್ಲಿನ ಭಾರತ ವಿರೋಧಿ ಶಕ್ತಿಗಳೇ ಈ ವಿದ್ಯಮಾನಕ್ಕೆ ಕಾರಣ.

ಫೆಬ್ರುವರಿ ತಿಂಗಳಲ್ಲಿ ಮೊಹಮ್ಮದ್ ನಶೀದ್ ಅವರಿಂದ ಮೊಹಮ್ಮದ್ ವಹೀದ್ ಅವರಿಗೆ ಅನಿರೀಕ್ಷಿತವಾಗಿ ನಡೆದ ಅಧಿಕಾರ ಹಸ್ತಾಂತರವೇ ಈ ಬಿಕ್ಕಟ್ಟಿನ ಮೂಲ ಕಾರಣ. ವಹೀದ್ ಸರ್ಕಾರಕ್ಕೆ ಭಾರತವು ಅವಸರದಲ್ಲಿಯೇ ಮಾನ್ಯತೆಯನ್ನೂ ಘೋಷಿಸಿತ್ತು.
ಭಾರತದ ರಕ್ಷಣೆ ದೃಷ್ಟಿಯಿಂದ ಮಾಲ್ಡೀವ್ಸ್‌ಗೆ ತುಂಬ ಮಹತ್ವದ ಸ್ಥಾನ ಇದೆ. ಸಾಗರದಡಿ ಇರುವ ಪ್ರಮುಖ ಸಂಪರ್ಕ ಮಾರ್ಗಗಳ ಮೇಲೆ ನಿಯಂತ್ರಣ ಮತ್ತು ನಿಗಾ ಇರಿಸಲು ಮಾಲ್ಡೀವ್ಸ್‌ನಲ್ಲಿ ಭಾರತ ರೇಡಾರ್‌ಗಳನ್ನು ಅಳವಡಿಸಿದೆ.

ಒಪ್ಪಂದದ ವಿವರ
ಮಾಲೆ ವಿಮಾನ ನಿಲ್ದಾಣವನ್ನು ಆಧುನೀಕರಣಗೊಳಿಸುವ ಉದ್ದೇಶದಿಂದ `ಜಿಎಂಆರ್ ಮತ್ತು ಮಲೇಷ್ಯಾ ಏರ್‌ಪೋರ್ಟ್‌ನ ಜಂಟಿ ಒಪ್ಪಂದ ಇದಾಗಿದೆ. 2010ರ ಜೂನ್ 28ರಂದು ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಅಧ್ಯಕ್ಷ ಮೊಹಮ್ಮದ್ ನಶೀದ್ ಅವರನ್ನು ಈ ವರ್ಷದ ಫೆಬ್ರುವರಿಯಲ್ಲಿ ಪದಚ್ಯುತಗೊಳಿಸುತ್ತಿದ್ದಂತೆ ಈ ಒಪ್ಪಂದ ಪ್ರಶ್ನಿಸುವುದಕ್ಕೆ ಚಾಲನೆ ದೊರೆತಿತ್ತು, ಜುಲೈನಲ್ಲಿ ಸಂಧಾನ ಮಾತುಕತೆಗಳು ಆರಂಭಗೊಂಡರೂ ಫಲ ನೀಡದೇ ಕೋರ್ಟ್ ಮೆಟ್ಟಿಲು ಏರಿತ್ತು.ನವೆಂಬರ್ 27ರಂದು ಸರ್ಕಾರವು ಗುತ್ತಿಗೆ ರದ್ದುಪಡಿಸಿ ವಿಮಾನ ನಿಲ್ದಾಣ ಹಸ್ತಾಂತರಕ್ಕೆ ಗಡುವು ನಿಗದಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT