ADVERTISEMENT

ಮುರಳಿಗಾನ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2010, 18:30 IST
Last Updated 20 ಅಕ್ಟೋಬರ್ 2010, 18:30 IST

ಸುತ್ತ ಹಸಿರು ವನ/ನಡುವೆ ನುಲಿವ ಜನ/ಹೆಸರುಘಟ್ಟದ ತಾಣ

ಇಂಥ ಸಿನಿಮಾ ಶೈಲಿಯ ಗೀತೆ ಹುಟ್ಟಲು ಕಾರಣ ‘ಮುರಳಿ ಮೀಟ್ಸ್ ಮೀರಾ’ ಚಿತ್ರೀಕರಣ. ಹರ್ಷಿಕಾ ಪೂಣಚ್ಚ ಬಾಗುತ್ತಿದ್ದರೆ, ಅವರನ್ನು ಬೀಳದಂತೆ ಭೂಮಿಯಿಂದ ಕೆಲವೇ ಅಡಿಗಳಷ್ಟು ಮೇಲೆ ಹಿಡಿಯುತ್ತಿದ್ದವರು ಪ್ರಜ್ವಲ್ ದೇವರಾಜ್. ಒಂದು ಹಾಡಿನ ಚಿತ್ರಕ್ಕೆ ಮೂರು ದಿನ ಸಾಕ್ಷಿಯಾದದ್ದು ಹೆಸರಘಟ್ಟದ ಹಸಿರು ತಾಣ. ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಾಗ ‘ಫಿಲ್ಮ್‌ಸಿಟಿ’ ನಿರ್ಮಾಣವಾಗಲಿ ಎಂದು 350 ಎಕರೆ ಜಾಗವನ್ನು ಮಂಜೂರು ಮಾಡಿದ್ದರಲ್ಲ; ಅದೇ ಜಾಗದಲ್ಲಿ ಚಿತ್ರೀಕರಣ ನಡೆಯುತ್ತಿದ್ದುದು. ಬಿಸಿಲ ಧಗೆ ಕಣ್ಣುಕುಕ್ಕದಿರಲೆಂದು ನಿರ್ದೇಶಕ ಮಚೇಶ್ ರಾವ್ ಉರುಫ್ ಮಗೇಶ್‌ಕುಮಾರ್ ತಂಪು ಕನ್ನಡಕ ಹಾಕಿಕೊಂಡಿದ್ದರು. ಚಿತ್ರೀಕರಣದ ದರ್ಶನವಾದ ಮೇಲೆ ಮತ್ತದೇ ಮಾತು.

‘ಮುರಳಿ ಮೀಟ್ಸ್ ಮೀರಾ’ದ ನಾಯಕಿ ಹರ್ಷಿಕಾ ಪೂಣಚ್ಚ ಅಲ್ಲ; ರೀಮಾ ವೋರಾ. ನಾಯಕನ ಇನ್ನೊಬ್ಬ ಪ್ರೇಮಿಯಾಗಿ ಇರುವ ಈ ಪಾತ್ರಕ್ಕೂ ಒಂದು ಹಾಡಿದೆ. ಅದೇ ಇಲ್ಲಿ ಚಿತ್ರಿತವಾದದ್ದು. ಚಿತ್ರದ ನಾಯಕಿ ತುಂಬಾ ‘ಪಾಷ್’. ಪಬ್‌ಗೆ ಹೋಗಿ ನೇರವಾಗಿ ವೋಡ್ಕಾ ಕೇಳುವಂಥ ಸ್ವಭಾವದವಳು. ಮಹೇಶ್ ಇಂಥ ದೃಶ್ಯಗಳನ್ನು ಸಹಜವಾಗಿಯೇ ಚಿತ್ರೀಕರಿಸಿಕೊಂಡಿದ್ದು, ಸೆನ್ಸಾರ್‌ನವರು ಎಲ್ಲಿ ಕತ್ತರಿ ಹಾಕುತ್ತಾರೋ ಎಂಬ ಆತಂಕದಲ್ಲಿದ್ದಾರೆ. ಸಹಜವಾದ ಮಾತಿರುವ ‘ಮುರಳಿ ಮೀಟ್ಸ್ ಮೀರಾ’ ಬೇರೆ ಚಿತ್ರಗಳಷ್ಟು ಸಿನಿಮೀಯವಾಗಿರುವುದಿಲ್ಲವಂತೆ.

ADVERTISEMENT

ಪ್ರಜ್ವಲ್ ದೇವರಾಜ್‌ಗೆ ಇದು ಹೊಸ ಅನುಭವ. ಎರಡು ಛಾಯೆಯ ತಮ್ಮ ಪಾತ್ರವನ್ನು ನಿರ್ದೇಶಕರು ಕಡೆದಿರುವ ರೀತಿ ನೋಡಿಯೇ ಅವರಿಗೆ ಖುಷಿಯಾಗಿದೆ. ಮಹೇಶ್ ನಿರ್ದೇಶಿಸಲಿರುವ ಮುಂದಿನ ಚಿತ್ರದ ನಾಯಕ ಕೂಡ ತಾವೇ ಎಂಬ ಹೆಮ್ಮೆ ಪ್ರಜ್ವಲ್ ಅವರದ್ದು. ‘ರಣಂ’ ತೆಲುಗು ಚಿತ್ರದ ರೀಮೇಕ್ ಕನ್ನಡಕ್ಕೆ ‘ಭದ್ರ’ ಹೆಸರಿನಲ್ಲಿ ಬರಲಿದ್ದು, ಎನ್.ಕುಮಾರ್ ಇದನ್ನು ನಿರ್ಮಿಸಲಿದ್ದಾರೆ. ರೀಮೇಕ್‌ನಿಂದ ಗಾವುದ ದೂರ ಇದ್ದ ಮಹೇಶ್ ಅನಿವಾರ್ಯವಾಗಿ ಅದನ್ನು ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಿತವಾಗಿರುವುದಕ್ಕೆ ಇದು ಉದಾಹರಣೆ.

ನಿರ್ದೇಶನದ ಪಟ್ಟುಗಳನ್ನು ದಕ್ಕಿಸಿಕೊಂಡಿರುವ ಯೋಗೀಶ್ ಹುಣಸೂರು ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಅವರಿಗೂ ಕಥೆಯ ಮೇಲೆ ನಂಬಿಕೆಯಿದೆ. 28 ದಿನಗಳಲ್ಲೇ ಟಾಕಿ ಭಾಗವನ್ನು ಮಹೇಶ್ ಮುಗಿಸಿಕೊಟ್ಟಿರುವುದು ಅವರಿಗೆ ಖುಷಿ ತಂದಿದೆ. ಕೇವಲ 32 ಸಾವಿರ ಅಡಿಗಳಷ್ಟು ಫಿಲ್ಮ್ ಬಳಸಿರುವುದು ನಿರ್ದೇಶಕರು ಆರ್ಥಿಕ ಪೋಲನ್ನು ತಡೆದಿದ್ದಾರೆಂಬುದಕ್ಕೆ ಸಾಕ್ಷಿ ಎಂದು ಅವರು ಹೇಳಿದರು.

ಇನ್ನೊಂದು ಹಾಡು ಮಾತ್ರ ಬಾಕಿಯಿದ್ದು, ಈಗಾಗಲೇ ಡಬಿಂಗ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದೆ. ಎಲ್ಲವೂ ಅಂದುಕೊಂಡ ಅವಧಿಯಲ್ಲೇ ಮುಗಿಯುವ ಲಕ್ಷಣವಿದ್ದು, ಮುರಳಿ-ಮೀರಾ ನೋಡುವ ಅವಕಾಶ ಶೀಘ್ರದಲ್ಲೇ ಪ್ರೇಕ್ಷಕರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.