ನವದೆಹಲಿ (ಪಿಟಿಐ-ಐಎಎನ್‌ಎಸ್): ಒಂದೆಡೆ ಜನರ ಜೇಬಿನಲ್ಲಿ ಒಂದಷ್ಟು ಹಣ ಉಳಿಸಿ, ಮತ್ತೊಂದೆಡೆ ಸೇವಾ ತೆರಿಗೆ ಹಾಗೂ ಉತ್ಪಾದನಾ (ಎಕ್ಸೈಜ್) ತೆರಿಗೆ ಏರಿಸುವ ಮೂಲಕ ಜೀವನ ನಿರ್ವಹಣಾ ವೆಚ್ಚ ಅಧಿಕಗೊಳಿಸುವ, ಹಣದುಬ್ಬರವನ್ನು ಮತ್ತಷ್ಟು ಹೆಚ್ಚಿಸಬಹುದೆಂಬ ಆತಂಕ ಮೂಡಿಸಿರುವ ಬಜೆಟ್‌ನ್ನು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಿದರು.
ಆದಾಯ ತೆರಿಗೆ ಮಿತಿಯನ್ನು 1.8 ಲಕ್ಷ ರೂಪಾಯಿಯಿಂದ 2 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. 2 ಲಕ್ಷದಿಂದ 5 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಶೇ 10ರಷ್ಟು ತೆರಿಗೆ ನೀಡಬೇಕಾಗುತ್ತದೆ. ಶೇ 20ರಷ್ಟು ಆದಾಯ ತೆರಿಗೆ ವ್ಯಾಪ್ತಿಯ ಗರಿಷ್ಠ ಮಿತಿಯನ್ನು ರೂ 8 ಲಕ್ಷದಿಂದ ರೂ 10 ಲಕ್ಷಕ್ಕೆ ಏರಿಸಲಾಗಿದೆ. 10 ಲಕ್ಷ ರೂಪಾಯಿಗಿಂತ ಹೆಚ್ಚಿನ ಆದಾಯಕ್ಕೆ ಈ ಮುಂಚಿನಂತೆ ಶೇ 30ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.
ತುಟ್ಟಿ |
ಅಗ್ಗ |
ಈ ಕ್ರಮದಿಂದಾಗಿ ರಾಷ್ಟ್ರದ 3.5 ಕೋಟಿ ತೆರಿಗೆದಾರರಿಗೆ ತಲಾ 2,000 ರೂಪಾಯಿ ಉಳಿತಾಯವಾಗಲಿದೆ. ಇದೊಂದನ್ನು ಹೊರತುಪಡಿಸಿದರೆ ತೆರಿಗೆದಾರರಿಗೆ ಸಮಾಧಾನ ನೀಡುವ ಅಂಶ ಬಜೆಟ್‌ನಲ್ಲಿ ಬೇರೇನೂ ಇಲ್ಲವೆಂಬ ಮಾತುಗಳು ಕೇಳಿಬಂದಿವೆ.
ಉಳಿದಂತೆ, ಬಹುತೇಕ ಎಲ್ಲ ಬಗೆಯ ಸೇವೆಗಳನ್ನು ತೆರಿಗೆ ಜಾಲಕ್ಕೆ ಒಳಪಡಿಸಿರುವ ಸಚಿವರು, ಸೇವಾ ತೆರಿಗೆ ದರವನ್ನು ಶೇ 10ರಿಂದ ಶೇ 12ಕ್ಕೆ ಹೆಚ್ಚಿಸಿದ್ದಾರೆ. ಅದೇ ರೀತಿ ಎಕ್ಸೈಜ್ ತೆರಿಗೆ ಪ್ರಮಾಣವನ್ನು ಕೂಡ ಶೇ 10ರಿಂದ ಶೇ 12ಕ್ಕೆ ಏರಿಸಲಾಗಿದೆ. ಇದರಿಂದಾಗಿ ತೈಲೋತ್ಪನ್ನಗಳನ್ನು ಬಿಟ್ಟು ಮಿಕ್ಕೆಲ್ಲಾ ದಿನನಿತ್ಯದ ಬಳಕೆ ಉತ್ಪನ್ನಗಳ ಬೆಲೆ ಏರಿಕೆಯಾಗಲಿದೆ.
ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸಿರುವುದರಿಂದ ಸರ್ಕಾರಕ್ಕೆ 4,500 ಕೋಟಿ ರೂಪಾಯಿ ಆದಾಯ ಕಡಿತವಾಗಲಿದೆ. ಆದರೆ ಸೇವಾ ತೆರಿಗೆ ಹಾಗೂ ಎಕ್ಸೈಜ್ ತೆರಿಗೆ ಹೆಚ್ಚಳವು ಸರ್ಕಾರಕ್ಕೆ 45,940 ಕೋಟಿ ರೂಪಾಯಿ ಸಂಪನ್ಮೂಲ ತಂದುಕೊಂಡುವ ಅಂದಾಜಿದೆ.
14,90,925 ಕೋಟಿ ರೂಪಾಯಿ ವೆಚ್ಚದ ಬಜೆಟ್ ಇದಾಗಿದ್ದು, ಇದರಲ್ಲಿ 5,21,025 ಕೋಟಿ ಯೋಜನಾ ವೆಚ್ಚವಾಗಿದ್ದರೆ 9,69,900 ಕೋಟಿ ಯೋಜನೇತರ ವೆಚ್ಚವಾಗಿದೆ.
ಮುಂಬರುವ ಸಾಲಿನಲ್ಲಿ ವಿತ್ತೀಯ ಕೊರತೆಯನ್ನು 5,13,590 ಕೋಟಿ ರೂಪಾಯಿಗೆ, ಅಂದರೆ ಒಟ್ಟಾರೆ ಆಂತರಿಕ ಉತ್ಪಾದನೆಯ ಶೇ 5.1ರಷ್ಟಕ್ಕೆ ಸೀಮಿತಗೊಳಿಸುವ ಹಾಗೂ ಪ್ರಸ್ತುತ ಶೇ 6.9ರಷ್ಟಿರುವ ಆರ್ಥಿಕ ಬೆಳವಣಿಗೆ ಯನ್ನು ಮುಂದಿನ ವರ್ಷ ಶೇ 7.6ರಷ್ಟಕ್ಕೆ ಹೆಚ್ಚಿಸುವ ವಿಶ್ವಾಸವನ್ನು ಏಳನೇ ಬಾರಿಗೆ ಬಜೆಟ್ ಮಂಡಿಸಿದ ಪ್ರಣವ್ ವ್ಯಕ್ತಪಡಿಸಿದ್ದಾರೆ.
ಇದನ್ನು ಅನುಮೋದಿಸಿದ ಪ್ರಧಾನಿ ಮನಮೋಹನ್ ಸಿಂಗ್ `ವಿಶೇಷವಾಗಿ ಸಬ್ಸಿಡಿಗಳಿಗೆ ಸಂಬಂಧಿಸಿದಂತೆ ನಾವು ಕಷ್ಟವನ್ನು ಅರಗಿಸಿಕೊಳ್ಳಬೇಕಾದ ಸನ್ನಿವೇಶ ಇದಾಗಿದೆ~ ಎಂದರು.
ವಿಶೇಷವಾಗಿ ಸಬ್ಸಿಡಿ ನೀಡಿಕೆಯಲ್ಲಿ ಸಾಕಷ್ಟು ಸುಧಾರಣೆಗಳನ್ನು ತರಲಾಗುವುದು ಎಂದ ಪ್ರಣವ್, ಈ ಮೊತ್ತವನ್ನು ಒಟ್ಟಾರೆ ಆಂತರಿಕ ಉತ್ಪಾದನೆಯ ಶೇ 2ರಷ್ಟಕ್ಕೆ ಸೀಮಿತಗೊಳಿಸಲಾಗುವುದು ಎಂದು ತಿಳಿಸಿದರು.
ರಸಗೊಬ್ಬರ, ಪಡಿತರ ಹಾಗೂ ಇಂಧನಕ್ಕಾಗಿ ನೀಡಲಾಗುತ್ತಿರುವ ಸಬ್ಸಿಡಿಯನ್ನು ನೇರವಾಗಿ ಫಲಾನುಭವಿಗಳಿಗೇ ತಲುಪಿಸಲು ಒತ್ತು ನೀಡಲಾಗುವುದು ಎಂದೂ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.