ADVERTISEMENT

ಮೂಲ ಸೌಕರ್ಯ ರಂಗ: ವೃದ್ಧಿ ದರ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2011, 16:50 IST
Last Updated 4 ಮಾರ್ಚ್ 2011, 16:50 IST

ನವದೆಹಲಿ (ಪಿಟಿಐ): ಆರು ಪ್ರಮುಖ ಮೂಲ ಸೌಕರ್ಯ ರಂಗಗಳ ಉತ್ಪಾದನೆಯು ಜನವರಿ ತಿಂಗಳಲ್ಲಿ ಶೇ 7.1ರಷ್ಟು ಏರಿಕೆಯಾಗಿದ್ದು, ಇದೇ ಅವಧಿಯಲ್ಲಿನ ಒಟ್ಟಾರೆ ಕಾರ್ಖಾನೆ ಉತ್ಪಾದನೆ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ನಿರೀಕ್ಷೆ ಇದೆ.

ಕಚ್ಚಾ ತೈಲ, ಪೆಟ್ರೋಲಿಯಂ ಶುದ್ಧೀಕರಣ ಉತ್ಪನ್ನ ಮತ್ತು ವಿದ್ಯುತ್ ರಂಗಗಳಲ್ಲಿ ಉತ್ತಮ ಪ್ರಗತಿ ಸಾಧ್ಯವಾಗಿರುವುದರಿಂದ ಈ ಬೆಳವಣಿಗೆ ಸಾಧ್ಯವಾಗಿದೆ. ಅರ್ಥಶಾಸ್ತ್ರಜ್ಞರ ಪ್ರಕಾರ, ಈ ಉತ್ಪಾದನೆ ಹೆಚ್ಚಳವು ಜನವರಿ ತಿಂಗಳ ಕೈಗಾರಿಕಾ ಉತ್ಪಾದನೆ ಸೂಚ್ಯಂಕದ ಮೇಲೆ (ಐಐಪಿ) ಸಕಾರಾತ್ಮಕ ಪ್ರಭಾವ ಬೀರಲಿದೆ ಎಂದೂ ನಿರೀಕ್ಷಿಸಲಾಗಿದೆ.

ಪ್ರಮುಖ ಮೂಲ ಸೌಕರ್ಯ ಕೈಗಾರಿಕೆಗಳು ಕೈಗಾರಿಕಾ ಉತ್ಪಾದನೆ ಸೂಚ್ಯಂಕದಲ್ಲಿ  (ಐಐಪಿ) ಶೇ 26.7ರಷ್ಟು ಪಾಲು ಹೊಂದಿವೆ.2010ರ ಡಿಸೆಂಬರ್ ತಿಂಗಳಲ್ಲಿ ಕಾರ್ಖಾನೆಗಳ ಉತ್ಪಾದನೆಯು 20 ತಿಂಗಳ ಹಿಂದಿನ ಮಟ್ಟಕ್ಕೆ ಶೇ 1.6ರಷ್ಟಕ್ಕೆ ಕುಸಿತ ಕಂಡಿತ್ತು. ಏಪ್ರಿಲ್ - ಜನವರಿವರೆಗಿನ ಅವಧಿಯಲ್ಲಿ  ಆರು ಮೂಲ ಸೌಕರ್ಯಗಳ ವೃದ್ಧಿ ದರವು ಶೇ 5.6ರಷ್ಟು ವೃದ್ಧಿ ಕಂಡಿತ್ತು.

ಪ್ರಮುಖ ಆರು ಮೂಲ ಸೌಕರ್ಯ ರಂಗಲ್ಲಿನ ಈ ಬೆಳವಣಿಗೆಯು ಒಟ್ಟಾರೆ ಕೈಗಾರಿಕಾ ಉತ್ಪಾದನೆ ಮೇಲೆ ಗಮನಾರ್ಹ ಸ್ವರೂಪದ ಪ್ರಭಾವ ಬೀರುವ ಸಾಧ್ಯತೆಗಳನ್ನು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಫಿಕ್ಕಿ) ಮಹಾ ನಿರ್ದೇಶಕ ರಾಜೀವ್ ಕುಮಾರ್ ತಳ್ಳಿ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.