ADVERTISEMENT

ಯುವಕರಿಗೆ ಉಚಿತ ಕೌಶಲ ತರಬೇತಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 19:30 IST
Last Updated 9 ಅಕ್ಟೋಬರ್ 2011, 19:30 IST

ಬೆಂಗಳೂರು: ಅಲ್ಪಸಂಖ್ಯಾತ ಸಮುದಾಯದ ನಿರುದ್ಯೋಗಿ ಯುವಕ/ಯುವತಿಯರಿಗೆ ಕೌಶಲ ಹೆಚ್ಚಿಸುವ ಉಚಿತ ತರಬೇತಿಗೆ ರಾಜ್ಯ ಸರ್ಕಾರ ಸಿದ್ಧತೆ ನಡೆಸಿದ್ದು, ಈ ಸಾಲಿನಲ್ಲಿ 20 ಸಾವಿರ ಜನರಿಗೆ ಈ ಸೌಲಭ್ಯ ಒದಗಿಸಲು ತೀರ್ಮಾನಿಸಲಾಗಿದೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸೈಯದ್ ಜಮೀರ್ ಪಾಷ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದರು.ಮುಸ್ಲಿಂ, ಕ್ರೈಸ್ತ, ಜೈನ, ಬುದ್ಧ, ಸಿಖ್ ಮತ್ತು ಪಾರ್ಸಿ ಸಮುದಾಯಗಳ ಜನರು ಇದರ ಉಪಯೋಗ ಪಡೆಯಬಹುದು. ಕನಿಷ್ಠ ವಿದ್ಯಾರ್ಹತೆ ಇಲ್ಲದವರಿಗೂ ಅವರವರ ಸಾಮ-ರ್ಥ್ಯಕ್ಕೆ ಅನುಗುಣವಾಗಿ ತರಬೇತಿ ನೀಡಲಾಗುತ್ತದೆ ಎಂದರು.


ಕನಿಷ್ಠ ಎರಡು ವಾರದಿಂದ ಆರು ತಿಂಗಳವರೆಗೆ ತರಬೇತಿ ನೀಡಬಹುದಾದ 1,200 ವಿವಿಧ ಕೋರ್ಸ್‌ಗಳು ಇವೆ. ಕಾರ್ಪೆಂಟರಿ, ಬಟ್ಟೆ ಹೊಲಿಯುವುದು, ಅಡಿಗೆ ಮಾಡುವುದು ಸೇರಿದಂತೆ ಇತರ ಅನೇಕ ಕೋರ್ಸ್‌ಗಳಿದ್ದು, ರಾಜ್ಯ ಸರ್ಕಾರದ ಕೌಶಲ್ಯ ಅಭಿವೃದ್ಧಿ ನಿಗಮ ಸೇರಿದಂತೆ ಇತರ ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ತರಬೇತಿ ನೀಡಲಾಗುತ್ತದೆ ಎಂದರು.

ತರಬೇತಿಯಲ್ಲಿ ಭಾಗವಹಿಸುವ ಜನರಿಗೆ ಗೌರವಧನ ನೀಡಲಾಗುವುದು. ಆಸಕ್ತರು ಅಕ್ಟೋಬರ್ 31ರೊಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ರಾಜ್ಯ ಅಲ್ಪಸಂಖ್ಯಾತರ ಆಯೋಗದ ವೆಬ್‌ಸೈಟ್ (www.karmin.in)ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದಲ್ಲದೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಕಚೇರಿಗಳಿಂದಲೂ ಪಡೆಯಬಹುದು ಎಂದರು.

ಅಲ್ಪಸಂಖ್ಯಾತರ ಆಯೋಗದಿಂದ ್ಙ 13 ಕೋಟಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯದಿಂದ ್ಙ 10 ಕೋಟಿ ಖರ್ಚು ಮಾಡುತ್ತಿದ್ದು, ತರಬೇತಿ ಪಡೆದ ಎಲ್ಲರಿಗೂ ಉದ್ಯೋಗಾವಕಾಶ ಕಲ್ಪಿಸಲಾಗುವುದು. ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಕಸುಬುಗಳಿಗೆ ಬೇಡಿಕೆ ಇದ್ದು, ಸೂಕ್ತ ತರಬೇತಿ ನೀಡಿದ ನಂತರ ಅವರಿಗೆ ಪ್ರಮಾಣ ಪತ್ರ ಕೂಡ ನೀಡಲಾಗುವುದು. ನವೆಂಬರ್ 15 ಅಥವಾ ಡಿಸೆಂಬರ್ 1ರಿಂದ ತರಬೇತಿ ಆರಂಭಿಸಲಾಗುವುದು. ಇದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ನಡೆಯಲಿದೆ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT