ಹೈದರಾಬಾದ್(ಪಿಟಿಐ): ಬಹು ನಿರೀಕ್ಷೆಯ, ಭಾರತ ಮತ್ತು ಯೂರೋಪ್ ಒಕ್ಕೂಟ ನಡುವಿನ `ಮುಕ್ತ ವ್ಯಾಪಾರ ಒಪ್ಪಂದ~ ಈ ವರ್ಷಾಂತ್ಯದೊಳಗೆ ಅಂತಿಮಗೊಳ್ಳಲಿದೆ ಎಂದು ಕೇಂದ್ರದ ವಾಣಿಜ್ಯ ಇಲಾಖೆ ಹೇಳಿದೆ.
ಉಭಯತ್ರರ ನಡುವಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ಎಲ್ಲ ವಿಚಾರಗಳ ಚರ್ಚೆ ಬಹುತೇಕ ಪೂರ್ಣಗೊಂಡಿದೆ. ಅಂತಿಮ ಸುತ್ತಿನ ಮಾತುಕತೆ ಇದೇ ಸೆಪ್ಟೆಂಬರ್‌ನಲ್ಲಿ ನಡೆಯುವ ನಿರೀಕ್ಷೆ ಇದೆ ಎಂದು ಕೇಂದ್ರ ವಾಣಿಜ್ಯ ಇಲಾಖೆ ಕಾರ್ಯದರ್ಶಿ ಎಸ್.ಆರ್.ರಾವ್ ಇಲ್ಲಿ ಶನಿವಾರ ಹೇಳಿದರು.
ಆಂಧ್ರಪ್ರದೇಶದ ವಿವಿಧ ವಾಣಿಜ್ಯೋದ್ಯಮ ಸಂಸ್ಥೆಗಳು ಆಯೋಜಿಸಿದ್ದ `ವಾಣಿಜ್ಯ ಕಾರ್ಯದರ್ಶಿ ಜತೆ ಮುಕ್ತ ಸಂವಾದ~ ಕಾರ್ಯಕ್ರಮದ ನಂತರ ಸುದ್ದಿಗಾರರ ಜತೆ ಮಾತನಾಡಿದ ರಾವ್, `ಪ್ರಸಕ್ತ ಆರ್ಥಿಕ ಹಿಂಜರಿತದ ಪರಿಣಾಮವಾಗಿ ಯೂರೋಪ್ ಒಕ್ಕೂಟ ಒಂದೆರಡು ವಿಚಾರಗಳನ್ನು ಮರುಪರಿಶೀಲಿಸುವಂತೆ ಭಾರತವನ್ನು ಕೋರಿದೆ. ಆ ನಿಟ್ಟಿನಲ್ಲಿ ಪ್ರಕ್ರಿಯೆ ನಡೆದಿದೆ. ಒಟ್ಟಿನಲ್ಲಿ ಮಹತ್ವಾಕಾಂಕ್ಷೆಯ ಈ ವ್ಯಾಪಾರ ಒಪ್ಪಂದ ಈ ವರ್ಷಾಂತ್ಯದಲ್ಲಿ ಅಂತಿಮ ರೂಪ ಪಡೆಯಲಿದೆ~ ಎಂದರು.
ಯೂರೋಪ್ ಒಕ್ಕೂಟ 2010ರಲ್ಲಿ ಭಾರತದಿಂದ 4000 ಕೋಟಿ ಯೂರೋ (ಅಂದಾಜು ್ಙ 2.76 ಲಕ್ಷ ಕೋಟಿ) ಮೌಲ್ಯದ ಸರಕುಗಳನ್ನು ಖರೀದಿಸಿದ್ದಿತು. ಮುಕ್ತ ವ್ಯಾಪಾರ ಒಪ್ಪಂದ ಕೈಗೂಡಿದಲ್ಲಿ ಭಾರತೀಯ ಉದ್ಯಮಿಗಳಿಗೆ ಯೂರೋಪ್ ದೇಶಗಳಲ್ಲಿ ಹೆಚ್ಚಿನ ರಫ್ತು ಅವಕಾಶಗಳು ಲಭ್ಯವಾಗಲಿವೆ ಎಂಬ ಬಾರಿ ನಿರೀಕ್ಷೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.