ADVERTISEMENT

ರಫ್ತು ಕುಸಿತ: ಉತ್ತೇಜನ ಕೊಡುಗೆ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 19:40 IST
Last Updated 13 ಡಿಸೆಂಬರ್ 2012, 19:40 IST

ನವದೆಹಲಿ (ಪಿಟಿಐ): ಅಮೆರಿಕ ಮತ್ತು ಯೂರೋಪ್ ಮಾರುಕಟ್ಟೆಗಳಿಂದ ಸರಕುಗಳಿಗೆ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ದೇಶದ ರಫ್ತು ವಹಿವಾಟು ನವೆಂಬರ್‌ನಲ್ಲಿ ಶೇ 4.17ರಷ್ಟು ಕುಸಿದಿದ್ದು 22.20 ಕೋಟಿ ಡಾಲರ್‌ಗೆ (ರೂ1.22 ಲಕ್ಷ ಕೋಟಿಗೆ) ಇಳಿದಿದೆ.
2011ರ ನವೆಂಬರ್‌ನಲ್ಲಿ 23.20 ಕೋಟಿ ಡಾಲರ್ (ರೂ1.27 ಲಕ್ಷ ಕೋಟಿ) ರಫ್ತು ವಹಿವಾಟು ನಡೆದಿತ್ತು.

ಜಾಗತಿಕ ಆರ್ಥಿಕ ಅಸ್ಥಿರತೆಯಿಂದಾಗಿ ಕಳೆದ ಏಳು ತಿಂಗಳಿಂದ ರಫ್ತು ನಿರಂತರವಾಗಿ ಕುಸಿದಿದೆ. ಪರಿಣಾಮ ರಫ್ತು-ಆಮದು ವಹಿವಾಟು ಅಂತರದ ಕೊರತೆ 19.20 ಕೋಟಿ ಡಾಲರ್‌ಗೆ (ರೂ1.56 ಲಕ್ಷ ಕೋಟಿಗೆ) ಏರಿದೆ.ನವೆಂಬರ್‌ನಲ್ಲಿ 41.50 ಕೋಟಿ ಡಾಲರ್ (ರೂ2.28 ಲಕ್ಷ ಕೋಟಿ) ಮೌಲ್ಯದ  ಸರಕು ಆಮದು ಮಾಡಿಕೊಳ್ಳಲಾಗಿದ್ದು, ಮಾಸಿಕ ಶೇ 6.35ರಷ್ಟು ಹೆಚ್ಚಳವಾಗಿದೆ. ತೈಲ ಬೆಲೆಯಲ್ಲಿ ಏರಿಕೆ ಆಗಿರುವುದರಿಂದ ಆಮದು ಹೊರೆಯೂ ಹೆಚ್ಚಿದೆ. ನವೆಂಬರ್‌ನಲ್ಲಿ 14.50 ಕೋಟಿ ಡಾಲರ್(ರೂ79 ಲಕ್ಷ) ಮೌಲ್ಯದ ತೈಲ ಆಮದು ಮಾಡಿಕೊಳ್ಳಲಾಗಿದ್ದು, ಬೇಡಿಕೆ ಶೇ 16.70ರಷ್ಟು ಹೆಚ್ಚಿದೆ.

ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಒಟ್ಟಾರೆ ರಫ್ತು ವಹಿವಾಟು ಶೇ 5.95ರಷ್ಟು ಕುಸಿದಿದ್ದು, 189.20 ಕೋಟಿ ಡಾಲರ್‌ಗಳಿಗೆ (ರೂ10.40 ಲಕ್ಷ ಕೋಟಿ)  ತಗ್ಗಿದೆ. ಇದೇ ಅವಧಿಯಲ್ಲಿ 318.70 ಕೋಟಿ ಡಾಲರ್ ಮೌಲ್ಯದ       (ರೂ17.52 ಲಕ್ಷ ಕೋಟಿ) ಆಮದು ವಹಿವಾಟು ನಡೆದಿದೆ. 

`ರಫ್ತು ಉತ್ತೇಜನಕ್ಕಾಗಿ ಸರ್ಕಾರ ಈ ವಾರಾಂತ್ಯದೊಳಗೆ ಕೆಲವೊಂದು ಕ್ರಮಗಳನ್ನು ಪ್ರಕಟಿಸಲಿದೆ' ಎಂದು ವಾಣಿಜ್ಯ ಕಾರ್ಯದರ್ಶಿ ಎಸ್.ಆರ್.ರಾವ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT