ADVERTISEMENT

ರಫ್ತು: ದುಪ್ಪಟ್ಟು ಪ್ರಮಾಣ ಹೆಚ್ಚಳ ಗುರಿ

​ಪ್ರಜಾವಾಣಿ ವಾರ್ತೆ
Published 3 ಮೇ 2011, 19:30 IST
Last Updated 3 ಮೇ 2011, 19:30 IST

ನವದೆಹಲಿ (ಪಿಟಿಐ): ಮುಂದಿನ ಮೂರು ವರ್ಷಗಳಲ್ಲಿ ದೇಶದ ರಫ್ತು ವಹಿವಾಟನ್ನು ಎರಡು ಪಟ್ಟುಗಳಿಗಿಂತ ಹೆಚ್ಚಿಸಲು ಕೇಂದ್ರ ಸರ್ಕಾರವು ಗುರಿ ನಿಗದಿಪಡಿಸಿದೆ.

ಕಳೆದ ಹಣಕಾಸು ವರ್ಷದಲ್ಲಿ ರಫ್ತು ವಹಿವಾಟು ಶೇ 37.5ರಷ್ಟು ಹೆಚ್ಚಳಗೊಂಡಿರುವ ಹಿನ್ನೆಲೆಯಲ್ಲಿ, ಮೂರು ವರ್ಷಗಳಲ್ಲಿ 500 ಶತಕೋಟಿ ಡಾಲರ್‌ಗಳಿಗೆ (ಅಂದಾಜು ` 22,50,000 ಕೋಟಿಗಳಿಗೆ) ಹೆಚ್ಚಿಸುವ ಗುರಿ ನಿಗದಿಪಡಿಸಲಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಆನಂದ್ ಶರ್ಮಾ ತಿಳಿಸಿದ್ದಾರೆ.

ಈ ಗುರಿ ತಲುಪಲು ರಫ್ತು ವಹಿವಾಟು ವರ್ಷಕ್ಕೆ ಶೇ 26.7ರಷ್ಟು ಏರಿಕೆಯಾಗಬೇಕಾಗಿದೆ. ಸಾಗಾಣಿಕಾ ವೆಚ್ಚ ತಗ್ಗಿಸುವ ಮೂಲಕ ದೇಶಿ ರಫ್ತು ಇನ್ನಷ್ಟು ಸ್ಪರ್ಧಾತ್ಮಕಗೊಳ್ಳುವಂತೆ ಮಾಡಿ ಮತ್ತು   ದೇಶಿ ಉತ್ಪನ್ನಗಳ (ಬ್ರಾಂಡ್ ಇಂಡಿಯಾ) ಮಾರುಕಟ್ಟೆಯನ್ನು ಇನ್ನಷ್ಟು ದೃಢವಾಗಿ ವಿಸ್ತರಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ಈ ಗುರಿ ಈಡೇರಿಸಲು ಸಾಧ್ಯ ಎಂದು ಶರ್ಮಾ ಹೇಳಿದ್ದಾರೆ.

ADVERTISEMENT

ಎಂಜಿನಿಯರಿಂಗ್, ಹರಳು, ಚಿನ್ನಾಭರಣ, ರಾಸಾಯನಿಕಗಳು ಮತ್ತು ಜವಳಿ ಉತ್ಪನ್ನಗಳ ನೇತೃತ್ವದಲ್ಲಿ ರಫ್ತು ವಹಿವಾಟು ವಿಸ್ತರಿಸಲು ವಿಪುಲ ಅವಕಾಶಗಳು ಇವೆ.

2010-11ರಲ್ಲಿ 200 ಶತಕೋಟಿ ಡಾಲರ್‌ಗಳಷ್ಟು (` 9,00,000 ಕೋಟಿ) ರಫ್ತು ವಹಿವಾಟಿನ ಗುರಿ ನಿಗದಿಪಡಿಸಲಾಗಿತ್ತು. ಯೂರೋಪ್ ಮಾರುಕಟ್ಟೆಯಲ್ಲಿ ಕೆಲ ಸಮಸ್ಯೆಗಳು ತಲೆದೋರಿದ್ದರೂ 246 ಶತಕೋಟಿ ಡಾಲರ್‌ಗಳಷ್ಟು (`11,07,000 ಕೋಟಿ) ವಹಿವಾಟು ನಡೆದಿತ್ತು. ಅಮೆರಿಕ, ಯೂರೋಪ್, ಲ್ಯಾಟಿನ್ ಅಮೆರಿಕ, ಆಫ್ರಿಕಾ ದೇಶಗಳಲ್ಲಿನ ಮಾರುಕಟ್ಟೆ ವಿಸ್ತರಣೆಯಿಂದ ವಹಿವಾಟು ಹೆಚ್ಚಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.