ನವದೆಹಲಿ : ಎಂಜಿನಿಯರಿಂಗ್, ಔಷಧಿ ಮತ್ತು ರಾಸಾಯನಿಕ ವಲಯಗಳ ಉತ್ತಮ ಕೊಡುಗೆಯ ಕಾರಣಕ್ಕೆ ಏಪ್ರಿಲ್ ತಿಂಗಳಲ್ಲಿ ರಫ್ತು ವಹಿವಾಟು ಶೇ 5.17ರಷ್ಟು ಏರಿಕೆ ಕಂಡಿದೆ.
₹ 1.73 ಲಕ್ಷ ಕೋಟಿಗಳಷ್ಟು ರಫ್ತು ವಹಿವಾಟು ನಡೆದಿದ್ದರೆ, ₹ 2.65 ಲಕ್ಷ ಕೋಟಿಗಳಷ್ಟು ಮೊತ್ತದ ಸರಕುಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಆಮದು ಪ್ರಮಾಣವು 2017ರ ಇದೇ ಅವಧಿಯಲ್ಲಿನ ವಹಿವಾಟಿಗೆ ಹೋಲಿಸಿದರೆ ಶೇ 4.6ರಷ್ಟು ಹೆಚ್ಚಳವಾಗಿದೆ.
ರಫ್ತು ಮತ್ತು ಆಮದು (ವ್ಯಾಪಾರ ಕೊರತೆ) ಅಂತರವು ₹ 91,790 ಕೋಟಿಗಳಷ್ಟಾಗಿದೆ. 2017ರ ಏಪ್ರಿಲ್ನಲ್ಲಿ ಇದು ₹ 88,708 ಕೋಟಿಗಳಷ್ಟಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ತೈಲ ಆಮದು ಪ್ರಮಾಣವು ಶೇ 41ರಷ್ಟು ಹೆಚ್ಚಳವಾಗಿದೆ. ಇದರ ಒಟ್ಟಾರೆ ಮೊತ್ತ ₹ 69,680 ಕೋಟಿಗಳಷ್ಟಿದೆ. ಚಿನ್ನದ ಆಮದು ಶೇ 33 ರಷ್ಟು ಕಡಿಮೆಯಾಗಿದೆ. ಇದರ ಮೊತ್ತ ₹ 17,286 ಕೋಟಿಗಳಷ್ಟಿದೆ.
ಮಾರ್ಚ್ ತಿಂಗಳಲ್ಲಿನ ಸೇವಾ ರಫ್ತು ಪ್ರಮಾಣವು (₹ 1.12 ಲಕ್ಷ ಕೋಟಿ) ಶೇ 7.16 ರಷ್ಟು ಏರಿಕೆ ಕಂಡಿದೆ. ಸೇವೆಗಳ ಆಮದು ( ₹ 68,340 ಕೋಟಿ) ಶೇ 1.35ರಷ್ಟು ಹೆಚ್ಚಳ ದಾಖಲಿಸಿದೆ. ಸೇವಾ ವಲಯದ ವ್ಯಾಪಾರದಲ್ಲಿ ₹ 43,550 ಕೋಟಿಗಳ ಉಳಿತಾಯ ಕಂಡು ಬಂದಿದೆ.
*
ರಫ್ತು ವಹಿವಾಟು ಉತ್ತೇಜನಕಾರಿಯಾಗಿಲ್ಲ. ಎಂಎಸ್ಎಂಇ ವಲಯದ ವಹಿವಾಟು ನಿರಾಶಾದಾಯಕವಾಗಿದೆ.
-ಗಣೇಶ್ ಕುಮಾರ್ ಗುಪ್ತ, ರಫ್ತು ವಹಿವಾಟುದಾರರ ಒಕ್ಕೂಟದ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.