ADVERTISEMENT

ರಾಗಿಗೆ ₹ 2,300 ಬೆಂಬಲ ಬೆಲೆ ನಿಗದಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2017, 19:30 IST
Last Updated 13 ಡಿಸೆಂಬರ್ 2017, 19:30 IST
ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡ   

ಬೆಂಗಳೂರು: ಪ್ರತಿ ಕ್ವಿಂಟಲ್‌ ರಾಗಿಗೆ ₹2,300 ಬೆಂಬಲ ಬೆಲೆ ನಿಗದಿ ಮಾಡಿದ್ದು, 15 ದಿನಗಳಲ್ಲಿ ರೈತರಿಂದ ಖರೀದಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

‘ಬೆಲೆ ಕುಸಿದಿದೆ ಎಂದು ರೈತರು ಗಾಬರಿಯಾಗಿ ಕಡಿಮೆ ಹಣಕ್ಕೆ ಮಾರುವುದು ಬೇಡ. ಸರ್ಕಾರ ಖರೀದಿಸುವವರೆಗೆ ಕಾಯುವುದು ಸೂಕ್ತ’ ಎಂದು ಅವರು ಬುಧವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ರಾಗಿ ಬೆಲೆ ₹1,500 ರಿಂದ ₹ 1,700 ಇದೆ. ಕೇಂದ್ರ ಸರ್ಕಾರ ಕ್ವಿಂಟಾಲ್‍ಗೆ ₹1,900  ಬೆಂಬಲ ಬೆಲೆ ನಿಗದಿಪಡಿಸಿದೆ. ಅದಕ್ಕೆ ರಾಜ್ಯ ಸರ್ಕಾರ ₹ 400 ಬೋನಸ್ ನೀಡಲಿದ್ದು, ಒಟ್ಟು ₹ 2,300 ನೀಡಿ ಖರೀದಿ ಮಾಡಲಾಗುವುದು ಎಂದರು.

ADVERTISEMENT

ಹೆಸರು, ಶೇಂಗಾ, ಉದ್ದಿಗೆ ಖರೀದಿಗೆ ಸದ್ಯವೇ ಖರೀದಿ ಕೇಂದ್ರ ಆರಂಭಿಸಲಾಗುವುದು. ಬೆಂಬಲ ಬೆಲೆಯಡಿ ರಾಗಿ, ಶೇಂಗಾ, ಉದ್ದು ಖರೀದಿಗೆ ಯಾವುದೇ ಸಮಸ್ಯೆ ಇಲ್ಲ. ತೊಗರಿ ಮತ್ತು ಮೆಕ್ಕೆ ಜೋಳ ಖರೀದಿಗೆ ಕೇಂದ್ರ ಸರ್ಕಾರದಿಂದ ಇನ್ನೂ ಅನುಮತಿ ಸಿಕ್ಕಿಲ್ಲ.  ಮೆಕ್ಕೆ ಜೋಳ ಖರೀದಿಗೆ ಸಂಬಂಧಿಸಿದಂತೆ ಕೇಂದ್ರದ ಜೊತೆ ಪತ್ರ ವ್ಯವಹಾರ ನಡೆಸಲಾಗಿದೆ. ಈ ಸಂಬಂಧ ವಿರೋಧ ಪಕ್ಷಗಳು ತಮ್ಮ ಪ್ರಭಾವ ಬಳಸಿ ಕೇಂದ್ರದ ಮೇಲೆ ಒತ್ತಡ ಹೇರುವ ಕೆಲಸ ಮಾಡಬೇಕು ಎಂದು ಅವರು ಮನವಿ ಮಾಡಿದರು.

ಹೆಸರು ಮತ್ತು ಉದ್ದು ಖರೀದಿ ಕೇಂದ್ರಗಳನ್ನು ಶೀಘ್ರವೇ ತೆರೆಯಲಾಗುವುದು. ಶೇಂಗಾ ಖರೀದಿಗೆ 40 ಕೇಂದ್ರಗಳನ್ನು ಆರಂಭಿಸಲಾಗುವುದು. ಕ್ವಿಂಟಲ್‌ಗೆ ₹ 4,450 ರಂತೆ ಈ ವರ್ಷ 47,500 ಟನ್‌ ಶೇಂಗಾ ಖರೀದಿಸಲಾಗುವುದು ಎಂದು ಕೃಷ್ಣ ಬೈರೇಗೌಡ ಹೇಳಿದರು.

110 ಲಕ್ಷ ಟನ್‌ ಆಹಾರ ಉತ್ಪಾದನೆ: ಈ ವರ್ಷ 105 ರಿಂದ 110 ಲಕ್ಷ ಟನ್‌ ಆಹಾರ ಧಾನ್ಯಗಳ ಉತ್ಪಾದನೆ ಆಗುವ ಸಾಧ್ಯತೆ ಇದೆ.  ಮುಂಗಾರಿನಲ್ಲಿ 30.85 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಆಗಿದ್ದು, 27 ಲಕ್ಷ ಟನ್‌ ಇಳುವರಿ ಬರುವ ನಿರೀಕ್ಷೆ ಇದೆ. ಹಿಂಗಾರಿನಲ್ಲಿ 64 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದ್ದು, 75 ಲಕ್ಷ ಟನ್‌ ಇಳುವರಿ ಬರುವ ನಿರೀಕ್ಷೆ ಇದೆ ಎಂದು ಹೇಳಿದರು.

2017-18 ನೇ ಸಾಲಿಗೆ ಕೃಷಿ ಯಾಂತ್ರೀಕರಣಕ್ಕೆ ನಿಗದಿಪಡಿಸಿದ ಅನುದಾನ ₹ 458.53 ಕೋಟಿ ಇದ್ದು, ನವೆಂಬರ್ ಅಂತ್ಯಕ್ಕೆ ₹ 133 ಕೋಟಿ ವೆಚ್ಚ ಮಾಡಲಾಗಿದೆ. ಕಿರು ನೀರಾವರಿಗೆ ₹ 512.29 ಕೋಟಿ ಅನುದಾನ ನಿಗದಿ ಮಾಡಿದ್ದು, ಈವರೆಗೆ  ₹ 223 ಕೋಟಿ ವೆಚ್ಚ ಮಾಡಲಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.