ADVERTISEMENT

ರಾಜಿ ತೆರಿಗೆ: ಸಮಿತಿ ಸಭೆ

ರೆಸ್ಟೊರೆಂಟ್‌ಗಳ ಮೇಲಿನ ತೆರಿಗೆ ದರವೂ ಪರಿಶೀಲನೆ

ಪಿಟಿಐ
Published 15 ಅಕ್ಟೋಬರ್ 2017, 19:30 IST
Last Updated 15 ಅಕ್ಟೋಬರ್ 2017, 19:30 IST
ರಾಜಿ ತೆರಿಗೆ: ಸಮಿತಿ ಸಭೆ
ರಾಜಿ ತೆರಿಗೆ: ಸಮಿತಿ ಸಭೆ   

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯಲ್ಲಿನ (ಜಿಎಸ್‌ಟಿ) ಕಂಪೋಸಿಷನ್‌ ಸ್ಕೀಮ್‌ (ರಾಜಿ ತೆರಿಗೆ) ಇನ್ನಷ್ಟು ಆಕರ್ಷಕಗೊಳಿಸಲು ರಚಿಸಲಾಗಿರುವ ರಾಜ್ಯಗಳ ಹಣಕಾಸು ಸಚಿವರ ಸಮಿತಿಯು ಭಾನುವಾರ ಇಲ್ಲಿ ಮೊದಲ ಸಭೆ ನಡೆಸಿತು.

ಅಸ್ಸಾಂ ಹಣಕಾಸು ಸಚಿವ ಹಿಮಂತ್‌ ಬಿಸ್ವಾಸ್‌ ಶರ್ಮಾ ನೇತೃತ್ವದಲ್ಲಿನ ಐವರು ಸದಸ್ಯರ ಸಮಿತಿಗೆ, ರೆಸ್ಟೊರೆಂಟ್‌ಗಳಿಗೆ ವಿಧಿಸಲಾಗುತ್ತಿರುವ ಜಿಎಸ್‌ಟಿ ದರ ಪರಾಮರ್ಶೆಯ ಹೊಣೆಯನ್ನೂ ಒಪ್ಪಿಸಲಾಗಿದೆ.

ಜಿಎಸ್‌ಟಿಗೆ ನೋಂದಣಿ ಮಾಡಿಕೊಂಡಿರುವ 98 ಲಕ್ಷ ಉದ್ಯಮಿಗಳು, ವ್ಯಾಪಾರಿಗಳ ಪೈಕಿ ಕೇವಲ 15.50 ಲಕ್ಷ ವಹಿವಾಟುದಾರರು ಮಾತ್ರ ಈ ‘ರಾಜಿ ತೆರಿಗೆ’ ಪದ್ಧತಿ ಆಯ್ಕೆ ಮಾಡಿಕೊಂಡಿದ್ದಾರೆ.

ADVERTISEMENT

ಈ ಸೌಲಭ್ಯವನ್ನು ಇನ್ನಷ್ಟು ಜನಪ್ರಿಯಗೊಳಿಸಲು ಕೈಗೊಳ್ಳಬೇಕಾದ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಈ ಸಮಿತಿ ರಚಿಸಲಾಗಿದೆ. ಅಸ್ತಿತ್ವಕ್ಕೆ ಬಂದ ಒಂದು ವಾರದಲ್ಲಿಯೇ ಸಮಿತಿಯು ಮೊದಲ ಸಭೆ ನಡೆಸಿದೆ.

ಈ ತಿಂಗಳ 7ರಂದು ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ಸಮಿತಿ ರಚಿಸಲು ನಿರ್ಧರಿಸಲಾಗಿತ್ತು. ನವೆಂಬರ್‌ ತಿಂಗಳಾಂತ್ಯಕ್ಕೆ ಸಮಿತಿಯು ವರದಿ ಸಲ್ಲಿಸಲಿದೆ.

ರೆಸ್ಟೊರೆಂಟ್‌ಗಳಿಗೆ ವಿಧಿಸಲಾಗುತ್ತಿರುವ ವಿವಿಧ ಹಂತದ ಜಿಎಸ್‌ಟಿ ದರಗಳನ್ನು ಕಡಿಮೆ ಮಾಡುವ ಕುರಿತೂ ಈ ಸಮಿತಿ ಪರಿಶೀಲಿಸಲಿದೆ.

ಸದ್ಯಕ್ಕೆ ಏರ್‌ಕಂಡಿಷನ್‌ ಸೌಲಭ್ಯ ಇಲ್ಲದ (ನಾನ್ ಏ.ಸಿ) ರೆಸ್ಟೊರೆಂಟ್‌ಗಳಿಗೆ ಶೇ 12 ಮತ್ತು ಏರ್‌ಕಂಡಿಷನ್‌ ಸೌಲಭ್ಯ ಹೊಂದಿದ ರೆಸ್ಟೊರೆಂಟ್‌ಗಳಿಗೆ ಶೇ 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ.

‘ಜಿಎಸ್‌ಟಿ’ಗೆ ಅನುಗುಣವಾಗಿ ವೆಚ್ಚ ಕಡಿತದ ಲಾಭವನ್ನು ಬಳಕೆದಾರರಿಗೆ ವರ್ಗಾಯಿಸದ ಏ.ಸಿ ರೆಸ್ಟೊರೆಂಟ್‌ಗಳಿಗೆ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಸೌಲಭ್ಯ ಕಡಿತ ಮಾಡಬಹುದೇ ಎನ್ನುವುದನ್ನು ಸಮಿತಿ ಪರಿಶೀಲಿಸಲಿದೆ.

‘ರಾಜಿ ತೆರಿಗೆ’ ವ್ಯವಸ್ಥೆಯನ್ನು ಇನ್ನಷ್ಟು ಆಕರ್ಷಕಗೊಳಿಸಲು, ವಿನಾಯ್ತಿ ಪಡೆದ ಸರಕುಗಳ ವಹಿವಾಟನ್ನು, ಒಟ್ಟು ವಹಿವಾಟಿನ ಗರಿಷ್ಠ ಮಿತಿಯಿಂದ ಹೊರಗಿಟ್ಟು ತೆರಿಗೆ ವಿಧಿಸಬಹುದೇ ಎನ್ನುವುದನ್ನು ಸಮಿತಿ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಲಿದೆ.

ಅಂತರರಾಜ್ಯ ಸರಕು ಪೂರೈಕೆದಾರರಿಗೂ ‘ರಾಜಿ ತೆರಿಗೆ’ ವಿಸ್ತರಿಸುವುದನ್ನೂ ಸಮಿತಿ ಪರಿಗಣನೆಗೆ ತೆಗೆದುಕೊಳ್ಳಲಿದೆ. ಈ ಯೋಜನೆ ಒಪ್ಪಿಕೊಳ್ಳುವ ಸರಕುಗಳ ತಯಾರಕರಿಗೆ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ನ ಲಾಭ ನೀಡಬಹುದೇ ಎನ್ನುವುದರ ಕುರಿತೂ ಸಮಿತಿ ನಿರ್ಧಾರ ಕೈಗೊಳ್ಳಲಿದೆ.

ರಾಜಿ ತೆರಿಗೆ
ವಾರ್ಷಿಕ ₹ 1 ಕೋಟಿ ವಹಿವಾಟು ನಡೆಸುವ ವರ್ತಕರು, ವಹಿವಾಟುದಾರರು ಈ ಸ್ಕೀಮ್‌ ಆಯ್ಕೆ ಮಾಡಿಕೊಳ್ಳಬಹುದು. ಅವರು ಶೇ 1 ರಿಂದ 5ರವರೆಗೆ ತೆರಿಗೆ ಪಾವತಿಸಬಹುದು. ಮೂರು ತಿಂಗಳಿಗೊಮ್ಮೆ ರಿಟರ್ನ್ಸ್‌ ಸಲ್ಲಿಸಬಹುದು. ರಾಜಿ ತೆರಿಗೆ ಆಯ್ಕೆ ಮಾಡಿಕೊಳ್ಳಲು ಈ ಮೊದಲಿನ ವಾರ್ಷಿಕ ₹ 75 ಲಕ್ಷ ವಹಿವಾಟು ನಡೆಸುವ ಮಿತಿಯನ್ನು ಈಗ ₹ 1 ಕೋಟಿಗೆ ಹೆಚ್ಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.