ADVERTISEMENT

ರೂ.4,809 ಕೋಟಿ ಸಂಗ್ರಹ ಗುರಿ

‘ಹುಡ್ಕೊ’ ತೆರಿಗೆ ಮುಕ್ತ ಬಾಂಡ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 19:59 IST
Last Updated 19 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಕೇಂದ್ರ ಸರ್ಕಾರ ಸ್ವಾಮ್ಯದ ವಸತಿ ಮತ್ತು ನಗರಾಭಿವೃದ್ಧಿ ನಿಗಮ (ಎಚ್‌ಯುಡಿಸಿಒ–ಹುಡ್ಕೊ) ದೇಶದ ವಿವಿಧ ರಾಜ್ಯಗಳಲ್ಲಿ ವಸತಿ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಹಣ ಕಾಸಿನ ನೆರವು ನೀಡುವ ಸಲುವಾಗಿ ಮುಕ್ತ ಮಾರುಕಟ್ಟೆಯಿಂದ ಬಂಡವಾಳ ಸಂಗ್ರಹಿಸಲು ಮುಂದಾಗಿದೆ.

ತೆರಿಗೆ ಮುಕ್ತ ಬಾಂಡ್‌ಗಳನ್ನು ಎರಡು ದಿನದ ಹಿಂದೆ ಬಿಡುಗಡೆ ಮಾಡಲಾ ಗಿದ್ದು, ಮೂಲದಲ್ಲಿ ರೂ.750 ಕೋಟಿ ಹಣ ಸಂಗ್ರಹ ಗುರಿ ಹೊಂದಲಾಗಿದೆ. ಈಗಾ ಗಲೇ ರೂ.700 ಕೋಟಿವರೆಗೂ ಹೂಡಿಕೆ ಬಂದಿದೆ. ಗರಿಷ್ಠ ರೂ.4809.20 ಕೋಟಿವ ರೆಗೂ ನಿಧಿ ಸಂಗ್ರಹಿಸಬಹುದಾಗಿದೆ. ಹಣ ತೊಡಗಿಸಲು ಅ. 14 ಕಡೆ ದಿನವಾಗಿದ್ದರೂ, ರೂ.4809.20 ಕೋಟಿ ಸಂಗ್ರಹವಾಗುತ್ತಿದ್ದಂತೆ ಮುಂಚಿತವಾ ಗಿಯೇ ಪ್ರಕ್ರಿಯೆ ಮುಕ್ತಾಯಗೊಳಿಸುವ ಸಾಧ್ಯತೆ ಇದೆ ಎಂದು ‘ಹುಡ್ಕೊ’ ಅಧ್ಯಕ್ಷ ವಿ.ಪಿ.ಬಳಿಗಾರ್‌ ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕರ್ನಾಟಕದಲ್ಲಿ ಪೊಲೀಸ್‌ ಮತ್ತು ಸಾರಿಗೆ ಇಲಾಖೆಯ ಕೆಳಹಂತದ ಸಿಬ್ಬಂದಿಗೆ ಮನೆ ಕಟ್ಟಿಕೊಡುವ ವಸತಿ ಯೋಜನೆಗಳಿಗೆ ‘ಹುಡ್ಕೊ’ ಹಣಕಾಸು ನೆರವು ನೀಡಲಿದೆ. ತುಮಕೂರು ಮತ್ತು ಕೊಪ್ಪಳದಲ್ಲಿ ನಗರಾಭಿವೃದ್ಧಿ ಸಂಸ್ಥೆಗಳ ವಸತಿ ಯೋಜನೆಗಳಿಗೆ ಕ್ರಮವಾಗಿ ರೂ.60 ಮತ್ತು 25 ಕೋಟಿ ಸಾಲ ನೀಡಲಾಗಿದೆ ಎಂದು ವಿವರಿಸಿದರು.

ಚಿಲ್ಲರೆ ಹೂಡಿಕೆದಾರರು ಕನಿಷ್ಠ ರೂ.5000 ತೊಡಗಿಸಬೇಕು. 10 ವರ್ಷಕ್ಕೆ ಶೇ 8.14 ಮತ್ತು 15 ವರ್ಷಕ್ಕಾದರೆ ಶೇ 8.51 ಹಾಗೂ 20 ವರ್ಷಗಳಿಗೆ ಶೇ 8.49ರಷ್ಟು ಲಾಭ ಗಳಿಕೆಯಾಗಲಿದೆ ‘ಹುಡ್ಕೊ’ ಹಣಕಾಸು ವಿಭಾಗದ ಸಹಾಯಕ ಮುಖ್ಯ ವ್ಯವಸ್ಥಾಪಕ ಅಚಲ್‌ ಗುಪ್ತಾ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.