ADVERTISEMENT

ವಂಚನೆ ಮಾಹಿತಿ ವಿಳಂಬ ಪಿಎನ್‌ಬಿಗೆ ‘ಸೆಬಿ’ ಎಚ್ಚರಿಕೆ

ಪಿಟಿಐ
Published 17 ಮೇ 2018, 19:30 IST
Last Updated 17 ಮೇ 2018, 19:30 IST
ವಂಚನೆ ಮಾಹಿತಿ ವಿಳಂಬ ಪಿಎನ್‌ಬಿಗೆ ‘ಸೆಬಿ’ ಎಚ್ಚರಿಕೆ
ವಂಚನೆ ಮಾಹಿತಿ ವಿಳಂಬ ಪಿಎನ್‌ಬಿಗೆ ‘ಸೆಬಿ’ ಎಚ್ಚರಿಕೆ   

ಮುಂಬೈ : ವಜ್ರದ ವ್ಯಾಪಾರಿ ನೀರವ್‌ ಮೋದಿ ಮತ್ತು ಗೀತಾಂಜಲಿ ಗ್ರೂಪ್‌ ಆಫ್‌ ಕಂಪನೀಸ್‌ಗಳಿಂದ ನಡೆದ ವಂಚನೆ ಪ್ರಕರಣದ ಬಗ್ಗೆ ತಡವಾಗಿ ಮಾಹಿತಿ ನೀಡಿದ್ದಕ್ಕೆ ಭಾರತದ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ), ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) ಎಚ್ಚರಿಕೆ ನೀಡಿದೆ.

ನೀರವ್‌ ಮೋದಿ ಮತ್ತು ಅವರ ಸಹಚರರು ಬ್ಯಾಂಕ್‌ಗೆ ₹ 13 ಸಾವಿರ ಕೋಟಿಗೂ ಹೆಚ್ಚು ವಂಚನೆ ಎಸಗಿರುವುದನ್ನು ಗುರುತಿಸಿ ತನ್ನ ಗಮನಕ್ಕೆ ತರಲು ವಿಳಂಬ ಮಾಡಿರುವುದಕ್ಕೆ ‘ಸೆಬಿ’, ತನಗೆ ಎಚ್ಚರಿಕೆ ನೋಟಿಸ್‌ ನೀಡಿದೆ ಎಂದು ದೇಶದ ಎರಡನೆ ಅತಿದೊಡ್ಡ ಬ್ಯಾಂಕ್‌ ಆಗಿರುವ ಸರ್ಕಾರಿ ಸ್ವಾಮ್ಯದ ‘ಪಿಎನ್‌ಬಿ’ ತಿಳಿಸಿದೆ.

ನೀರವ್‌ ಮೋದಿ, ಮೆಹುಲ್‌ ಚೋಕ್ಸಿ ಅವರು ಸಾಲ ಮರುಪಾವತಿ ಖಾತರಿ ಪತ್ರ (ಎಲ್‌ಒಯು) ಮತ್ತು ವಿದೇಶಿ ಸಾಲ ಪತ್ರಗಳನ್ನು (ಎಲ್ಒಸಿ)  ಬ್ಯಾಂಕ್‌ ಅಧಿಕಾರಿಗಳ ನೆರವಿನಿಂದ ದುರ್ಬಳಕೆ ಮಾಡಿಕೊಂಡು ವಂಚನೆ ಎಸಗಿದ್ದಾರೆ.

ADVERTISEMENT

ವಂಚನೆ ಪ್ರಕರಣದ ಬಗ್ಗೆ ಬ್ಯಾಂಕ್‌ನ ಆಡಳಿತ ಮಂಡಳಿಯು ಸಕಾಲದಲ್ಲಿ ಎಚ್ಚೆತ್ತುಕೊಳ್ಳದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇನ್ನು ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರದಿಂದ ಇರಲು ತಾಕೀತು ಮಾಡಲಾಗಿದೆ ಎಂದು ‘ಸೆಬಿ’ ತಿಳಿಸಿದೆ. ಈ ಎಚ್ಚರಿಕೆಯನ್ನು ಬ್ಯಾಂಕ್‌, ನಿಯಂತ್ರಣ ಕ್ರಮಗಳ ಅನ್ವಯ ಷೇರುಪೇಟೆಗಳ ಗಮನಕ್ಕೆ ತಂದಿದೆ.

ವಂಚನೆ ಪ್ರಕರಣವನ್ನು ತನಗೆ ಮತ್ತು ಆರ್‌ಬಿಐನ ಗಮನಕ್ಕೆ ತರುವಲ್ಲಿ 6 ದಿನಗಳವರೆಗೆ ವಿಳಂಬ ಆಗಿದೆ. ಈ ವಿಷಯದಲ್ಲಿಯೂ ಬ್ಯಾಂಕ್‌ ಅನೇಕ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿರುವುದು ಗಮನಕ್ಕೆ ಬಂದಿದೆ ಎಂದು ‘ಸೆಬಿ’ ತಿಳಿಸಿದೆ.

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಈಗಾಗಲೇ ಮುಂಬೈ ಕೋರ್ಟ್‌ನಲ್ಲಿ ಎರಡು ಪ್ರತ್ಯೇಕ ಆರೋಪ ಪಟ್ಟಿಗಳನ್ನು ದಾಖಲಿಸಿದೆ. ಆರೋಪಪಟ್ಟಿಗಳಲ್ಲಿ ಬ್ಯಾಂಕ್‌ನ ಮಾಜಿ ಸಿಇಒ ಉಷಾ ಅನಂತಸುಬ್ರಮಣಿಯನ್‌ ಮತ್ತು ಬ್ಯಾಂಕ್‌ನ ಇಬ್ಬರು ಕಾರ್ಯನಿರ್ವಾಹಕ ನಿರ್ದೇಶಕರನ್ನೂ ಹೆಸರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.