ADVERTISEMENT

ವಂಚನೆ :`ಸೆಬಿ' ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2013, 19:59 IST
Last Updated 22 ಜೂನ್ 2013, 19:59 IST

ಮುಂಬೈ (ಪಿಟಿಐ): ಎಲ್ಲ ಸಂಚಿತ ಹೂಡಿಕೆ ಯೋಜನೆಗಳನ್ನು (ಸಿಐಎಸ್) ತಕ್ಷಣವೇ ರದ್ದುಗೊಳಿಸುವಂತೆ ಮತ್ತು ಹೂಡಿಕೆದಾರರಿಂದ ಸಂಗ್ರಹಿಸಿದ ರೂ 1 ಸಾವಿರ ಕೋಟಿಗಿಂತ ಹೆಚ್ಚಿನ ಮೊತ್ತವನ್ನು 3 ತಿಂಗಳ ಒಳಗೆ ಮರು ಪಾವತಿಸುವಂತೆ   ರಿಯಲ್ ಎಸ್ಟೇಟ್ ಕಂಪೆನಿ ಅಲ್ಕೆಮಿಸ್ಟ್ ಇನ್‌ಫ್ರಾಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಶನಿವಾರ ಸೂಚನೆ ನೀಡಿದೆ.

ಹೂಡಿಕೆದಾರರ ಹಣವನ್ನು ಮರು ಪಾವತಿಸುವವರೆಗೆ ಕಂಪೆನಿ ಮತ್ತು ಅದರ ಐವರು ನಿರ್ದೇಶಕರನ್ನು ಷೇರುಪೇಟೆ ವಹಿವಾಟಿನಿಂದ ಅಮಾನತು ಮಾಡಲಾಗಿದೆ.

ಅಲ್ಕೆಮಿಸ್ಟ್ ಇನ್‌ಫ್ರಾ ಹೂಡಿಕೆದಾರರ ಹಣ ದುರ್ಬಳಕೆ ಮಾಡಿಕೊಂಡ ಆರೋಪ ಎದುರಿಸುತ್ತಿದೆ.  ಹಣ ಮರು ಪಾವತಿಸದಿದ್ದರೆ ಕಂಪೆನಿಯ ವಿರುದ್ಧ ಮೋಸ, ವಂಚನೆ, ಮತ್ತು ವಿಶ್ವಾಸದ್ರೋಹ ಪ್ರಕರಣ ದಾಖಲಿಸಿಕೊಳ್ಳುವುದಾಗಿ `ಸೆಬಿ' ಎಚ್ಚರಿಕೆ ನೀಡಿದೆ.

ಸಂಸದ ಕೆ.ಡಿ. ಸಿಂಗ್ ಒಡೆತನದ  ಅಲ್ಕೆಮಿಸ್ಟ್ ಸಮೂಹ, ಆಹಾರ, ಪಾನೀಯ, ಐಟಿ, ಮಾಧ್ಯಮ, ವಿಮಾನಯಾನ, ಆತಿಥ್ಯ, ಶಿಕ್ಷಣ, ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಂಡವಾಳ ತೊಡಗಿಸಿದೆ.  ಕಂಪೆನಿ `ಸಿಐಎಸ್' ಯೋಜನೆಯಡಿ  ಭೂಮಿ ಖರೀದಿಗಾಗಿ ಹೂಡಿಕೆದಾರರಿಂದ ಹಣ ಸಂಗ್ರಹಿಸುತ್ತಿತ್ತು. ಮತ್ತು ಇದಕ್ಕೆ ಶೇ 75ರಷ್ಟು ಅಭಿವೃದ್ಧಿ ಶುಲ್ಕ ವಿಧಿಸುತ್ತಿತ್ತು ಎಂದು `ಸೆಬಿ'      ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.