ADVERTISEMENT

ವಾಹನ ಉದ್ಯಮಕ್ಕೆ 2013 ನಿರಾಶಾದಾಯಕ

ತೈಲ, ಬಡ್ಡಿ ದರ ಏರಿಕೆ, ಕಾರ್ಮಿಕರ ಮುಷ್ಕರ, ಮಾರಾಟ ಕುಸಿತ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 19:30 IST
Last Updated 24 ಡಿಸೆಂಬರ್ 2013, 19:30 IST

ನವದೆಹಲಿ(ಪಿಟಿಐ): ಹಣಕಾಸು ಮಾರು­ಕಟ್ಟೆಯಲ್ಲಿನ ಅಸ್ಥಿರತೆ, ಬಡ್ಡಿ ದರ ಏರಿಕೆ, ಮುಷ್ಕರ, ಮಾರಾಟ ಕುಸಿತ ಹೀಗೆ ಹಲವು ನಕಾರಾತ್ಮಕ ಪರಿಣಾ­ಮ­ಗಳನ್ನು ಸೃಷ್ಟಿಸಿದ 2013 ವಾಹನ ಉದ್ಯಮದ ಪಾಲಿಗೆ ಒಂದು ದುಸ್ವಪ್ನ ಇದ್ದಂತೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ. ‘ಕಳೆದೊಂದು ದಶಕದಲ್ಲೇ ಇದು (2013) ಸವಾಲಿನ ವರ್ಷ­ವಾಗಿತ್ತು.

ಡಾಲರ್‌ ವಿರುದ್ಧ ರೂಪಾಯಿ ಅಪಮೌಲ್ಯದಿಂದ ತಯಾರಿಕಾ ವೆಚ್ಚ ಗಣನೀಯವಾಗಿ ಹೆಚ್ಚಿತು. ಇನ್ನೊಂದೆಡೆ  ತೈಲ ಬೆಲೆಯೂ ತುಟ್ಟಿ­ಯಾ­ಯಿತು. ಕೇಂದ್ರ ಸರ್ಕಾರ ‘ಎಸ್‌ಯುವಿ’ ಮೇಲಿನ ಅಬಕಾರಿ ಸುಂಕ ಏರಿಕೆ ಮಾಡಿತು. ಗಾಯದ ಮೇಲೆ ಬರೆ ಎಳೆದಂತೆ ‘ಆರ್‌ಬಿಐ’ ಬಡ್ಡಿ ದರ ಹೆಚ್ಚಿಸಿತು’ ಒಟ್ಟಾರೆ 2013 ನಿರಾಶಾದಾಯಕ ವರ್ಷ ಎಂದು ಭಾರತೀಯ ವಾಹನ ತಯಾರಿಕಾ ಕಂಪೆನಿಗಳ ಒಕ್ಕೂಟ (ಎಸ್‌ಐಎಎಂ) ಅಭಿಪ್ರಾಯಪಟ್ಟಿದೆ.

ಎಂಜಿನ್‌ ಸಮಸ್ಯೆ, ಹೆಚ್ಚಿನ ಇಂಗಾಲ ಉಗುಳುವಿಕೆ, ಬ್ರೇಕ್‌ ವ್ಯವಸ್ಥೆಯಲ್ಲಿ ಲೋಪ ಮತ್ತಿತರ ಕಾರಣಗಳಿಗಾಗಿ 2013ರಲ್ಲಿ ಅತಿ ಹೆಚ್ಚು ವಾಹನ­ಗಳನ್ನು ಮಾರು­ಕಟ್ಟೆ­ಯಿಂದ ವಾಪಸ್‌ ಪಡೆಯ­ಲಾಯಿತು.  ಜನರಲ್‌ ಮೋಟಾರ್ಸ್‌ 1.4 ಲಕ್ಷ ವಾಹನಗಳನ್ನು (ತವೇರಾ) ವಾಪಸ್‌ ಪಡೆದು ಸರಿಪಡಿಸಿ ಕೊಟ್ಟಿತು. ಸ್ಟೀ­ರಿಂಗ್‌ ಸಮಸ್ಯೆಯಿಂದ ಮಾರುತಿ ಸುಜುಕಿ ಏರ್ಟಿಗಾ, ಸ್ವಿಫ್ಟ್‌, ಡಿಸೈರ್‌ ಮತ್ತು ಏ–ಸ್ಟಾರ್‌ ಮಾದರಿಯ 1,492 ವಾಹನಗ­ಳನ್ನು ಮಾರುಕಟ್ಟೆ ಯಿಂದ ವಾಪಸ್‌ ಪಡೆಯಿತು. ಮಹೀಂದ್ರಾ ‘ಸ್ಕಾರ್ಪಿಯೊ’ ಮಾದರಿಯ 900 ವಾಹನಗಳನ್ನು ಪಾಪಸ್‌ ಪಡೆದು ಸರಿಪಡಿಸಿಕೊಟ್ಟಿತು.

ಈ ನಡುವೆ ಮಾರುತಿ ಸುಜುಕಿ, ಮಹೀಂದ್ರಾ ಅಂಡ್‌ ಮಹೀಂದ್ರಾ, ಬಜಾಜ್‌ ಆಟೊ ತಯಾರಿಕಾ ಘಟಕ­ಗಳಲ್ಲಿ ಕಾರ್ಮಿಕರ ಮುಷ್ಕರ ನಡೆದು ಒಟ್ಟಾರೆ ತಯಾರಿಕೆ ಪ್ರಮಾಣವೂ ಕುಸಿಯಿತು. ಹೀರೊ ಮೋಟೊ­ಕಾರ್ಪ್‌ನ ಗುಡಗಾಂವ್‌ ತಯಾರಿಕಾ ಘಟಕದಲ್ಲಿ ಕಾರ್ಮಿಕರು ವೇತನ ಪರಿಷ್ಕರಣೆಗಾಗಿ ಪ್ರತಿಭಟನೆ ನಡೆಸಿದರು.

‘ಭಾರತೀಯ ವಾಹನ ಮಾರು­ಕಟ್ಟೆ ಇತಿಹಾ­ಸದಲ್ಲಿ 2013 ಅತ್ಯಂತ ಸವಾಲಿನ ವರ್ಷ. ಸುಮಾರು 9 ತಿಂಗಳ ಕಾಲ ನಿರಂತರವಾಗಿ ಅಸ್ಥಿರತೆ ಕಾಡಿತು’ ಎಂದು ಫೋರ್ಡ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಜೋಗಿಂದರ್‌ ಸಿಂಗ್‌ ಪ್ರತಿಕ್ರಿಯಿಸಿದ್ದಾರೆ. ಪ್ರಸಕ್ತ ಸಾಲಿನ ಜನವರಿ ನವೆಂಬರ್‌ ಅವಧಿ­ಯಲ್ಲಿ ಒಟ್ಟಾರೆ ಕಾರು ಮಾರಾಟ ಶೇ 10.32ರಷ್ಟು ತಗ್ಗಿದೆ.

ADVERTISEMENT

ಒಟ್ಟು 16,74,450 ಕಾರುಗಳು ಮಾರಾಟ­ವಾಗಿವೆ. ಹಬ್ಬಗಳ ಅವಧಿಯಲ್ಲೂ ಮಾರುಕಟ್ಟೆ ಚೇತರಿಕೆ ಕಂಡಿಲ್ಲ. ಮಾರಾಟ ಕುಸಿದಿದ್ದರಿಂದ ಮಾರುತಿ ಸುಜುಕಿ ಒಂದು ದಿನ ಮತ್ತು ಮಹೀಂದ್ರಾ ಐದು ದಿನ ತಯಾರಿಕೆಯನ್ನೇ ಸ್ಥಗಿತ­ಗೊಳಿಸಿತು. ಮಾರುತಿ ₨4,000 ಕೋಟಿ  ಮತ್ತು ಹೋಂಡಾ ₨2,500 ಕೋಟಿ ಹೂಡಿಕೆಯನ್ನೇ ಮುಂದೂಡಿದವು. ಆದರೆ, ಟಾಟಾ ಮಾತ್ರ ₨3,000 ಕೋಟಿ ಹೂಡಿಕೆ ಮಾಡುವ ನಿರ್ಧಾರಕ್ಕೆ ಬದ್ಧವಾಗಿದೆ ಎಂದು ಹೇಳಿದೆ.

ಗಣಿಗಾರಿಕೆ ಮತ್ತು ಮೂಲ­ಸೌಕರ್ಯ ವಲಯ ಕುಸಿತ ಕಂಡಿದ್ದರಿಂದ ವಾಣಿಜ್ಯ ಬಳಕೆ ವಾಹನಗಳ ಮಾರಾಟವೂ ಗಣನೀಯ­ವಾಗಿ ತಗ್ಗಿತು. ಆರ್ಥಿಕ ಅಸ್ಥಿರತೆ ನಡುವೆಯೂ ಮಾರು­ಕಟ್ಟೆಗೆ ಬಿಡುಗಡೆಗೊಂಡ ಹೋಂಡಾ ಅಮೇಜ್‌ ಮತ್ತು ಫೋರ್ಡ್‌ ಇಂಡಿಯಾದ ‘ಎಕೊಸ್ಫೋರ್ಟ್ಸ್‌’ ಮಾದ­ರಿಗಳು ಗ್ರಾಹಕರ ಮನ ಗೆ­ಲ್ಲುವಲ್ಲಿ ಯಶಸ್ವಿಯಾದವು. 2013ರ ದುಸ್ವಪ್ನವಾಗಿ ಕಾಡಿದರೂ, ಭವಿಷ್ಯದ ದೃಷ್ಟಿಯಿಂದ ಭರವಸೆಯ ವರ್ಷ ಕೂಡ ಆಗಿತ್ತು ಎಂದು ‘ಎಸ್‌ಐಎಎಂ’ ಅಧ್ಯಕ್ಷ ವಿಷ್ಣು ಮಾಥೂರ್‌ ವಿಶ್ಲೇಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.