ADVERTISEMENT

ವಾಹನ ಮಾರಾಟದಲ್ಲಿ ಸಮಾಧಾನಕರ ಪ್ರಗತಿ

ಆರ್‌ಬಿಐ ಬಡ್ಡಿ ದರ ಕಡಿತ; ಮಾರುಕಟ್ಟೆ ಚೇತರಿಕೆ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2013, 19:59 IST
Last Updated 5 ಫೆಬ್ರುವರಿ 2013, 19:59 IST
ವಾಹನ ಮಾರಾಟದಲ್ಲಿ ಸಮಾಧಾನಕರ ಪ್ರಗತಿ
ವಾಹನ ಮಾರಾಟದಲ್ಲಿ ಸಮಾಧಾನಕರ ಪ್ರಗತಿ   

ನವದೆಹಲಿ (ಪಿಟಿಐ): ದೇಶದ ಪ್ರಮುಖ ವಾಹನ ತಯಾರಿಕಾ ಕಂಪೆನಿಗಳಾದ ಮಾರುತಿ ಸುಜುಕಿ, ಹುಂಡೈ ಮೋಟಾರ್ ಮತ್ತು ಮಹೀಂದ್ರಾ ಅಂಡ್ ಮಹೀಂದ್ರಾ ಜನವರಿಯಲ್ಲಿ ಮಾರಾಟದಲ್ಲಿ ಉತ್ತಮ ಪ್ರಗತಿ ದಾಖಲಿಸಿವೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತ್ರೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ರೆಪೊ ದರ ತಗ್ಗಿಸಿರುವುದರಿಂದ, ಬ್ಯಾಂಕುಗಳು ವಾಹನ ಸಾಲದ ಬಡ್ಡಿ ದರ ಇಳಿಸಲಿವೆ. ಇದರಿಂದ ಮುಂಬರುವ ತಿಂಗಳಲ್ಲಿ ಮಾರಾಟ ಇನ್ನಷ್ಟು ಹೆಚ್ಚಬಹುದು ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಇದೇ ಅವಧಿಯಲ್ಲಿ ಟೊಯೊಟಾ ಕಿರ್ಲೊಸ್ಕರ್, ಜನರಲ್ ಮೋಟಾರ್ಸ್ ಮತ್ತು ಫೋರ್ಡ್ ಇಂಡಿಯಾ ವಾಹನಗಳ ಮಾರಾಟ ಕುಸಿದಿದೆ.

ಕಾರು ತಯಾರಿಕೆಯಲ್ಲಿ ದೇಶದ ಅತಿ ದೊಡ್ಡ ಕಂಪೆನಿಯಾದ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಜನವರಿಯಲ್ಲಿ ಒಟ್ಟು 1,03,026 ಕಾರುಗಳನ್ನು ಮಾರಾಟ ಮಾಡಿ ದಾಖಲೆ ನಿರ್ಮಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮಾರಾಟ ಶೇ 1.96ರಷ್ಟು ಚೇತರಿಕೆ ಕಂಡಿದೆ. ಮಾರುತಿ ಸುಜುಕಿಯ ನೇರ ಪ್ರತಿಸ್ಪರ್ಧಿ ಹುಂಡೈ ಮೋಟಾರ್ ಇಂಡಿಯಾ (ಎಚ್‌ಎಂಐಎಲ್) ಒಟ್ಟು 34,302 ಕಾರು ಮಾರಾಟ ಮಾಡಿ ಶೇ 1.19ರಷ್ಟು ಏರಿಕೆ ದಾಖಲಿಸಿದೆ. ಕಳೆದ ವರ್ಷದ ಜನವರಿಯಲ್ಲಿ `ಎಚ್‌ಎಂಐಎಲ್' 33,900 ಕಾರುಗಳನ್ನು ಮಾರಾಟ ಮಾಡಿತ್ತು.

`ಈ ಬಾರಿ ಗ್ರಾಮೀಣ ಮಾರುಕಟ್ಟೆ ಮತ್ತು ರಫ್ತು ಚುರಕಾಗಿದ್ದರಿಂದ ಮಾರಾಟದಲ್ಲಿ ಹೆಚ್ಚಳವಾಗಿದೆ' ಎಂದು ಹುಂಡೈ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ರಾಕೇಶ್ ಶ್ರೀವಾಸ್ತವ ಅಭಿಪ್ರಾಯಪಟ್ಟಿದ್ದಾರೆ.

ಸ್ಕಾರ್ಪಿಯೊ, ಎಕ್ಸ್‌ಯುವಿ 500, ಬೊಲೆರೊ ಸೇರಿದಂತೆ ಒಟ್ಟು 26,555 ವಾಹನಗಳನ್ನು ಮಹೀಂದ್ರಾ ಅಂಡ್ ಮಹೀಂದ್ರಾ ಜನವರಿಯಲ್ಲಿ ಮಾರಿದ್ದು, ಶೇ 33ರಷ್ಟು ಏರಿಕೆ ದಾಖಲಿಸಿದೆ.

`ಆರ್‌ಬಿಐ ರೆಪೊ ದರ ತಗ್ಗಿಸಿರುವುದರಿಂದ ಗ್ರಾಹಕರ ವಿಶ್ವಾಸ ಮರಳಿದ್ದು,  ಮಾರಾಟ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ' ಎಂದು `ಎಂ ಅಂಡ್ ಎಂ'ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ್ ಷಾ ವಿಶ್ಲೇಷಿಸಿದ್ದಾರೆ.

ಹೋಂಡಾ ಕಾರ್ ಮಾರಾಟ ಜನವರಿಯಲ್ಲಿ ಮೂರು ಪಟ್ಟು ಏರಿಕೆಯಾಗಿದೆ. ಒಟ್ಟು 5,541 ವಾಹನಗಳು ಮಾರಾಟವಾಗಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಕಂಪೆನಿ ಕೇವಲ 1,784 ಕಾರುಗಳನ್ನು ಮಾರಾಟ ಮಾಡಿತ್ತು.

ಟಾಟಾ ಮೋಟಾರ್ಸ್ ಪ್ರಯಾಣಿಕ ವಾಹನಗಳ ಮಾರಾಟ ಶೇ 56ರಷ್ಟು ಕುಸಿದಿದೆ. ಜನವರಿಯಲ್ಲಿ ಕಂಪೆನಿ 15,209 ವಾಹನಗಳನ್ನು  ಮಾರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 34,663 ವಾಹನಗಳು ಮಾರಾಟವಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.