ADVERTISEMENT

ವಾಹನ ಮಾರಾಟ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 16:45 IST
Last Updated 2 ಫೆಬ್ರುವರಿ 2011, 16:45 IST

ನವದೆಹಲಿ (ಪಿಟಿಐ): ದೇಶದ ಪ್ರಮುಖ ಕಾರು  ಮತ್ತು ದ್ವಿಚಕ್ರ ವಾಹನ ತಯಾರಿಕಾ ಕಂಪೆನಿಗಳು ಜನವರಿ ತಿಂಗಳಲ್ಲಿ ಉತ್ತಮ ಮಾರಾಟ ಪ್ರಗತಿ ದಾಖಲಿಸಿವೆ.

ಮಾರುತಿ ಸುಜಕಿ ಮಾರಾಟ ಶೇಕಡ 14.73ರಷ್ಟು ಏರಿಕೆಯಾಗಿದ್ದು, ಈ  ಅವಧಿಯಲ್ಲಿ 1,09,743 ವಾಹನಗಳು ಮಾರಾಟವಾಗಿದೆ. ಟಾಟಾ ಮೋಟಾರ್ಸ್ 75,423 ವಾಹನಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 15ರಷ್ಟು ಪ್ರಗತಿ ಕಂಡುಬಂದಿದೆ. ಹುಂಡೈ ಮೋಟಾರ್ ಇಂಡಿಯಾ (ಎಚ್‌ಎಂಐಎಲ್) ಮಾರಾಟ ಜನವರಿಯಲ್ಲಿ ಶೇ 17ರಷ್ಟು ಕುಸಿತ ಕಂಡಿದೆ. ಕಳೆದ ವರ್ಷ ಈ ಅವಧಿಯಲ್ಲಿ 52,628 ವಾಹನಗಳು ಮಾರಾಟವಾಗಿದ್ದರೆ, ಜನವರಿಯಲ್ಲಿ ಅದು 43,316ಕ್ಕೆ ಇಳಿಕೆ ಕಂಡಿದೆ.

‘ಒಟ್ಟಾರೆ ವಾಹನ ಮಾರಾಟ ಜನವರಿಯಲ್ಲಿ ಶೇ 30ರಷ್ಟು ಹೆಚ್ಚಿದೆ. ಆದರೆ, ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿಯಲ್ಲಿ ಇದನ್ನು ಸುಸ್ಥಿರ ಪ್ರಗತಿ ಎಂದು ಹೇಳಲು ಸಾಧ್ಯವಿಲ್ಲ’ ಎಂದು ಭಾರತೀಯ ವಾಹನ ತಯಾರಿಕಾ ಸಂಘದ ಅಧ್ಯಕ್ಷ ಪವನ್ ಗೋಯಂಕಾ ಹೇಳಿದ್ದಾರೆ.  ಟಾಟಾ ಮೋಟಾರ್ಸ್ ಪ್ರಯಾಣಿಕ ಫೋರ್ಡ್ ಇಂಡಿಯಾ ಗರಿಷ್ಠ ಮಾಸಿಕ ಮಾರಾಟವನ್ನು ದಾಖಲಿಸಿದ್ದು, ನಾಲ್ಕು ಪಟ್ಟು ಹೆಚ್ಚಳವಾಗಿದೆ. ಒಟ್ಟು 10,026 ವಾಹನಗಳು ಈ ಅವಧಿಯಲ್ಲಿ ಮಾರಾಟವಾಗಿದೆ. ಅಶೋಕ್ ಲೇಲ್ಯಾಂಡ್   ಮಾರಾಟ ಶೇ 2ರಷ್ಟು ಕುಸಿತ ಕಂಡಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ವಾಣಿಜ್ಯ ವಾಹನಗಳ ಮಾರಾಟ 7,871ರಿಂದ 7,711ಕ್ಕೆ ಇಳಿದಿದೆ. 

ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕಾ ಕಂಪೆನಿ ಹೀರೊ ಹೋಂಡಾ  ಜನವರಿಯಲ್ಲಿ ಒಟ್ಟು 4,66,524 ವಾಹನಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷಕ್ಕ ಹೋಲಿಸಿದರೆ ಶೇ 19ರಷ್ಟು ಏರಿಕೆ ಕಂಡಿದೆ. ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ) ಒಟ್ಟಾರೆ ಮಾರಾಟ ಶೇ 8.89ರಷ್ಟು ಹೆಚ್ಚಳವಾಗಿದೆ. ಚೆನ್ನೈ ಮೂಲದ ಟಿವಿಎಸ್ ಮೋಟಾರ್ ಶೇ 29ರಷ್ಟು ಮಾರಾಟ ಪ್ರಗತಿ ದಾಖಲಿಸಿದ್ದು, ಜನವರಿಯಲ್ಲಿ 161,725 ವಾಹನಗಳು ಮಾರಾಟವಾಗಿದೆ.

ಇಟಿಯೋಸ್: ಟೊಯೊಟ ಕಿರ್ಲೋಸ್ಕರ್ ಮೋಟಾರ್ ಜನವರಿಯಲ್ಲಿ ಶೇ 53ರಷ್ಟು ಮಾರಾಟ ಪ್ರಗತಿ ದಾಖಲಿಸಿದೆ. 9,185ವಾಹನಗಳು ಮಾರಾಟವಾಗಿದೆ. ಈಚೆಗೆ ಮಾರುಕಟ್ಟೆಗೆ ಬಂದ ಸಣ್ಣ ಕಾರು ಇಟಿಯೋಸ್ ಮಾರಾಟ  ಹೆಚ್ಚಿದ್ದು, ಜನವರಿ ತಿಂಗಳಲ್ಲಿ  1651 ಕಾರುಗಳು ಮಾರಾಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.