‘ವಿಂಡೋಸ್-7’ ಸ್ಮಾರ್ಟ್‌ಫೋನ್ ರಂಗದಲ್ಲಿ ಮೈಕ್ರೊಸಾಫ್ಟ್‌ನ ಮರು ಪ್ರವೇಶ ಇದು ಎಂದು ತಂತ್ರಜ್ಞರು ವಿಶ್ಲೇಷಿಸುತ್ತಿದ್ದಾರೆ. ಮೈಕ್ರೊಸಾಫ್ಟ್‌ನ ದಶಕವೊಂದರ ಶ್ರಮ ಇದರ ಹಿಂದೆ ಅಡಗಿದೆ ಎನ್ನುವುದು ಗಮನಾರ್ಹ. ‘ವಿಂಡೋಸ್-7’ ಕಾರ್ಯನಿರ್ವಹಣಾ ತಂತ್ರಾಂಶವಿರುವ ಎಟಿ ಮತ್ತು ಟಿ ಮೊಬೈಲ್‌ಗಳು ನವೆಂಬರ್ ಎಂಟರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.
ಈ ವರ್ಷಾಂತ್ಯಕ್ಕೆ ಟಿ ಮೊಬೈಲ್, ಮುಂದಿನ ವರ್ಷ ವೆರಿಜಾನ್ ಮತ್ತು ಸ್ಟ್ರಿಂಟ್ ಕಂಪನಿಯ ಸ್ಮಾರ್ಟ್‌ಫೋನ್‌ಗಳು ವಿಂಡೋಸ್ -7 ಆವೃತ್ತಿಯಲ್ಲಿ ಹೊರಬರಲಿದೆ. ಸದ್ಯಕ್ಕೆ ಎಲ್‌ಜಿ, ಸ್ಯಾಮ್ಸಂಗ್, ಎಚ್‌ಟಿಸಿ ಮತ್ತು ಡೆಲ್ ಕಂಪನಿಯ 9 ಸ್ಮಾರ್ಟ್‌ಫೋನ್‌ಗಳು ‘ವಿಂಡೋಸ್ -7’ ಆವೃತ್ತಿಯಲ್ಲಿ ಮಾರುಕಟ್ಟೆಗೆ ಬರಲು ಸಿದ್ಧವಾಗಿವೆ. ಇದರಲ್ಲಿ ಕೆಲವು ಕೀಬೋರ್ಡ್ ಹೊಂದಿದ್ದರೆ, ಇನ್ನುಳಿದವು ಸ್ಪರ್ಶ ಸಂವೇದಿ ಪರದೆ ಹೊಂದಿರುವ ಮೊಬೈಲ್‌ಗಳು.
ಸದ್ಯ ಅಮೆರಿಕದಲ್ಲಿ ಮಾರಾಟವಾಗುತ್ತಿರುವ ಮೊಬೈಲ್‌ಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಪಾಲು ಶೇಕಡ 25ರಷ್ಟಿದೆ. ಆ್ಯಪಲ್ ಐಫೋನ್, ರಿಮ್ ಕಂಪನಿಯ ಬ್ಲ್ಯಾಕ್ ಬೆರಿ ಬಿಟ್ಟರೆ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಇರುವುದು ಗೂಗಲ್ ಆಂಡ್ರಾಯ್ಡಾ ಕಾರ್ಯನಿರ್ವಹಣಾ ತಂತ್ರಾಂಶ. ಹೀಗಾಗಿ ಮೈಕ್ರೊಸಾಫ್ಟ್ ವಿಂಡೋಸ್‌ನ ನೇರ ಪ್ರತಿಸ್ಪರ್ಧಿ ಗೂಗಲ್ ಆಂಡ್ರಾಯ್ಡಾ.
ಮೈಕ್ರೊಸಾಫ್ಟ್ ಈ ಮೊದಲು ಮಾರುಕಟ್ಟೆಗೆ ಬಿಟ್ಟಿದ್ದ ಮೊಬೈಲ್ ಕಾರ್ಯನಿರ್ವಹಣಾ ತಂತ್ರಾಂಶ ವಿನ್ಯಾಸ ಮತ್ತು ಇಂಟರ್‌ಪೇಸ್‌ನಲ್ಲಿ ವಿಂಡೋಸ್ ಡೆಸ್ಕ್‌ಟಾಪ್ ಕಾರ್ಯನಿರ್ವಹಣಾ ತಂತ್ರಾಂಶ ಹೋಲುತ್ತಿತ್ತು. 2007ರಲ್ಲಿ ಆ್ಯಪಲ್ ಐಫೋನ್ ಮಾರುಕಟ್ಟೆಗೆ ಬರುವುದರೊಂದಿಗೆ ಈ ತಂತ್ರಾಂಶ ಕೇಳುವರಿಲ್ಲದ ಸ್ಥಿತಿ ಎದುರಾಯಿತು. ನಂತರ ಈ ವರ್ಷದ ಆರಂಭದಲ್ಲಿ ಮೈಕ್ರೊಸಾಫ್ಟ್ ಮೊಬೈಲ್ ಬಳಸುವ ಯುವಸಮೂಹ ಗಮನದಲ್ಲಿಟ್ಟುಕೊಂಡು ಸಾಮಾಜಿಕ ಸಂವಹನ ತಾಣದ ಸಂಪರ್ಕ ಸೇರಿದಂತೆ ಹಲವು ಸೌಲಭ್ಯಗಳುಳ್ಳ ‘ಕಿನ್’ ಬಿಡುಗಡೆಗೊಳಿಸಿತ್ತು. ಆದರೆ ಬಿಡುಗಡೆಗೊಂಡ 48 ದಿನಗಳಲ್ಲಿಯೇ ಈ ಮೊಬೈಲ್ ಅನ್ನು ಮಾರುಕಟ್ಟೆಯಿಂದ ಹಿಂಪಡೆಯಬೇಕಾದ ಸ್ಥಿತಿ ಮೈಕ್ರೊಸಾಫ್ಟ್‌ಗೆ ಬಂತು. ಪುಕ್ಕಟೆಯಾಗಿ ಕೊಟ್ಟರೂ ಬಳಕೆದಾರ ‘ಕಿನ್’ಗೆ ಆಸಕ್ತಿ ತೋರಲಿಲ್ಲ.
ಹೀಗೆ ಸತತ ಸೋಲುಗಳ ನಂತರ, ಈಗ ಮೈಕ್ರೊಸಾಫ್ಟ್ ಹಲವು ಮುಂದಾಲೋಚನೆಗಳನ್ನು ಎದುರಿಗಿಟ್ಟುಕೊಂಡೇ ವಿಂಡೋಸ್-7 ಅನ್ನು ಬಿಡುಗಡೆಗೊಳಿಸಿದೆ. ಇದರಲ್ಲಿನ ದೊಡ್ಡ ಸೌಲಭ್ಯವೆಂದರೆ ಗ್ರಾಹಕ ತಂತ್ರಾಂಶವನ್ನು ತನಗೆ ಬೇಕಾದ ಹಾಗೆ ಬದಲಿಸಿಕೊಳ್ಳಬಹುದು.
ಆ ಮೂಲಕ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆಯ ಹೊಸ ಅನುಭವ ಪಡೆಯಬಹುದು ಎನ್ನುತ್ತಾರೆ ಕಂಪನಿಯ ಸಿಇಒ ಸ್ಟೀವ್ ಬಲ್ಮರ್. ಇಲ್ಲಿರುವ ಮತ್ತೊಂದು ಸೌಲಭ್ಯವೆಂದರೆ ಇದು ಬಳಕೆದಾರನ ಸಮಾಜಿಕ ಸಂವಹನ ತಾಣದ ಕ್ಷಣ ಕ್ಷಣದ ಅಪ್‌ಡೇಟ್‌ಗಳನ್ನು ಪರದೆಯ ಮೇಲೆ ತನ್ನಿಂದ ತಾನೆ ತೋರಿಸುತ್ತದೆ. ‘ಈಗಿನ ಯುವ ಸಮೂಹ ಮೊಬೈಲ್ ಅನ್ನು ಹೇಗೆ ಬಳಸಲು ಇಷ್ಟಪಡುತ್ತಾರೆ ಮತ್ತು ಅದರಲ್ಲಿ ಏನೇನು ಸೌಲಭ್ಯ ಬಯಸುತ್ತಾರೆ ಎನ್ನುವುದನ್ನು ನಾವು ಚೆನ್ನಾಗಿ ಬಲ್ಲೆವು ಎನ್ನುವ ಬಲ್ಮರ್, ‘ವಿಂಡೋಸ್- 7’ ಕುರಿತು ಹಲವು ಭರವಸೆಗಳನ್ನು ಇಟ್ಟುಕೊಂಡಿದ್ದಾರೆ.
ಆ್ಯಪಲ್ ಐಸ್ಟೋರ್ ಮಾದರಿಯಲ್ಲಿ ಹೊಸ ಆಪ್ಲಿಕೇಷನ್ಸ್ ತಂತ್ರಾಂಶಗಳ ಮಾರುಕಟ್ಟೆ ವಿಸ್ತರಿಸುವ ಯೋಜನೆಯೂ ಮೈಕ್ರೊಸಾಫ್ಟ್ ಮುಂದಿದೆ.ಸ್ಮಾರ್ಟ್‌ಫೋನ್‌ಗಳಿಗೆ ತಂತ್ರಾಂಶ ಅಭಿವೃದ್ಧಿಪಡಿಸುವ ಕಂಪನಿಗಳ ಸಹಭಾಗಿತ್ವದಲ್ಲಿ ಈ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ.ಅಷ್ಟೇ ಅಲ್ಲ, ವಿಂಡೋಸ್-7 ಜತೆಗೆ ಗ್ರಾಹಕರಿಗೆ ‘ಝೂನ್’ ಮ್ಯೂಸಿಕ್ ಮತ್ತು ವಿಡಿಯೋ ತಾಣ, ಸರ್ಚ್ ಎಂಜಿನ್ ಬಿಂಗ್, ಉದ್ಯಮಿಗಳಿಗೆ ನೆರವಾಗುವ ‘ಮೈಕ್ರೊಸಾಫ್ಟ್ ಒನ್ ನೋಟ್, ಎಕ್ಸ್‌ಬಾಕ್ಸ್ ಗೇಮಿಂಗ್ ಫ್ಲಾಟ್‌ಫಾಮ್ ಕೂಡ ಇರಲಿದೆ. ಹಲವು ಗೇಮ್ಸ್‌ಗಳನ್ನು ಎಕ್ಸ್‌ಬಾಕ್ಸ್-360 ಮತ್ತು ವಿಂಡೋಸ್-7 ಎರಡರಲ್ಲೂ ಚಾಲನೆಗೊಳ್ಳುವಂತೆ ಅಭಿವೃದ್ಧಿಪಡಿಸಲಾಗಿದೆ. ವಿಂಡೋಸ್-7 ನೊಂದಿಗೆ ಎಟಿ ಮತ್ತು ಟಿ ಮೊಬೈಲ್ ಸೇವೆ ಪಡೆದವರು ಟಿವಿ ಕಾರ್ಯಕ್ರಮಗಳನ್ನು ಕೂಡ ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಮೈಕ್ರೊಸಾಫ್ಟ್ ವಿಂಡೋಸ್-7 ಮಾರುಕಟ್ಟೆಗೆ ಬರುತ್ತಿದ್ದಂತೆ ಗೂಗಲ್ ಕೂಡ ತನ್ನ ಮುಂದಿನ ಹೆಜ್ಜೆ ಮೊಬೈಲ್ ಕಂಪ್ಯೂಟಿಂಗ್ ಎಂದು ಘೋಷಿಸಿದೆ.
ಗಮನಿಸಬೇಕಾದ ಅಂಶವೆಂದರೆ ಗೂಗಲ್‌ನ ಆಂಡ್ರಾಯ್ಡಾ ಬಂದಿದ್ದೇ ಸ್ಮಾರ್ಟ್‌ಫೋನ್ ಕ್ಷೇತ್ರದ ಚಿತ್ರಣವೇ ಬದಲಾಗಿತ್ತು. ಈ ಕಾರ್ಯನಿರ್ವಹಣಾ ತಂತ್ರಾಂಶ ಸಾಕಷ್ಟು ಸಂಪರ್ಕ ಸಾಧ್ಯತೆಗಳನ್ನು ಕಲ್ಪಿಸಿದ್ದರಿಂದ ಜತೆಗೆ ಗೂಗಲ್ ಮ್ಯಾಪ್ ಸೌಲಭ್ಯದಿಂದ ವಿಳಾಸ ಹುಡುಕಬಹುದಾದ ತಂತ್ರಜ್ಞಾನ ಇದ್ದಿದ್ದರಿಂದ ಇದು ಬಳಕೆದಾರನ ಮನಗೆದ್ದಿತ್ತು. ಈಗ ಮಾರುಕಟ್ಟೆಗೆ ಬಿಡುಗಡೆಗೊಳ್ಳುತ್ತಿರುವ ಮೂರು ಸ್ಮಾರ್ಟ್‌ಫೋನ್‌ಗಳಲ್ಲಿ ಒಂದರಲ್ಲಿ ಗೂಗಲ್ ಆಂಡ್ರಾಯ್ಡಾ ಇದೆ ಎಂದರೆ ಅದರ ಜನಪ್ರಿಯತೆ ಗಮನಿಸಬಹುದು. ಆಂಡ್ರಾಯ್ಡಾ ಎದುರುವಿಂಡೋಸ್-7 ಮಾಡುವುದೇ ಜಾದೂ ಎನ್ನುವುದನ್ನು ಕಾದು ನೋಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.