ADVERTISEMENT

ವಿತ್ತೀಯ ಕೊರತೆ ರಂಗರಾಜನ್ ಕಳವಳ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2012, 19:30 IST
Last Updated 12 ಆಗಸ್ಟ್ 2012, 19:30 IST

ಹೈದರಾಬಾದ್ (ಪಿಟಿಐ): ಪೆಟ್ರೋಲಿಯಂ ಉತ್ಪನ್ನಗಳ ಸಬ್ಸಿಡಿ ಹೊರೆ ತಗ್ಗಿಸುವುದರ ಜತೆಗೇ ಪರಿಣಾಮಕಾರಿ `ಕ್ರಿಯಾ ಯೋಜನೆ~ ಜಾರಿಗೆ ತಂದರೆ ವಿತ್ತೀಯ ಕೊರತೆ ಅಂತರ ಗಣನೀಯವಾಗಿ ತಗ್ಗಿಸಬಹುದು ಎಂದು ಪ್ರಧಾನಿ ಆರ್ಥಿಕ ಸಲಹಾ ಸಮಿತಿ ಅಧ್ಯಕ್ಷ ಸಿ. ರಂಗರಾಜನ್ ಹೇಳಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ವಿತ್ತೀಯ ಕೊರತೆ ಅಂತರವು ಒಟ್ಟು ಆರ್ಥಿಕ ವೃದ್ಧಿ ದರದ(ಜಿಡಿಪಿ) ಶೇ 5.1ರಷ್ಟಾಗಬಹುದು ಎಂದು ಬಜೆಟ್‌ನಲ್ಲಿ ಅಂದಾಜಿಸಲಾಗಿದೆ. ಆದರೆ, ತೈಲ ಸಬ್ಸಿಡಿ ಹೊರೆ ಹೆಚ್ಚುತ್ತಿರುವುದರಿಂದ ಇದು ಉದ್ದೇಶಿತ ಗಡಿ ದಾಟುವ ನಿರೀಕ್ಷೆ ಇದೆ ಎಂದು ರಂಗರಾಜನ್ ಭಾನುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.ವಿತ್ತೀಯ ಕೊರತೆ ಅಂತರ ಹೆಚ್ಚುತ್ತಿರುವುದು ಬಡ್ಡಿ ದರದ ಮೇಲೂ ಪರಿಣಾಮ ಬೀರಲಿದ್ದು, ಸರ್ಕಾರದ ಸಾಲದ ಪ್ರಮಾಣವೂ ಹೆಚ್ಚಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ವಿತ್ತೀಯ ಕ್ರೊಢೀಕರಣಕ್ಕೆ ಸಂಬಂಧಿಸಿದಂತೆ ಹಣಕಾಸು ಸಚಿವ ಪಿ.ಚಿದಂಬರಂ, ಆರ್ಥಿಕ ತಜ್ಞರಾದ ವಿಜಯ್ ಕೇಳ್ಕರ್, ಇಂದಿರಾ ರಾಜಾರಾಮನ್, ಮತ್ತು ಸಂಜಯ್ ಮಿಶ್ರಾ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿದ್ದು, ಪರಿಣಾಮಕಾರಿ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಸೂಚಿಸಿದ್ದಾರೆ. ಈ ತಂಡ ಇನ್ನೆರಡು ವಾರಗಳಲ್ಲಿ ವರದಿ ಸಲ್ಲಿಸುವ ನಿರೀಕ್ಷೆ ಇದೆ.

ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ವಿತ್ತೀಯ ಕೊರತೆ ಅಂತರವು ಶೇ 37ರಷ್ಟು ಹೆಚ್ಚಿದ್ದು, ್ಙ1.9 ಲಕ್ಷ ಕೋಟಿಗಳಿಗೆ ಏರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.