ADVERTISEMENT

ವಿದೇಶಿ ಹೂಡಿಕೆದಾರರಿಗೆ ವಿಶೇಷ ಆಕರ್ಷಣೆ

ನೋಂದಣಿ ನಿಯಮ ಸರಳಗೊಳಿಸಿದ `ಸೆಬಿ'

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 19:59 IST
Last Updated 25 ಜೂನ್ 2013, 19:59 IST

ಮುಂಬೈ(ಪಿಟಿಐ): ಭಾರತದ ಷೇರುಪೇಟೆಗೆ ದೊಡ್ಡ ಸಂಖ್ಯೆಯಲ್ಲಿ ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುವ ಸಲುವಾಗಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ(ಸೆಬಿ), ಕೆಲವು ನಿಯಮ ಮತ್ತು ನಿಬಂಧನೆಗಳಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದೆ.

ವಿದೇಶಿ ಹೂಡಿಕೆದಾರರ ನೋಂದಣಿ ಪ್ರಕ್ರಿಯೆ ಸರಳಗೊಳಿಸಲಾಗಿದೆ. ಕೆಲವು ಕಡ್ಡಾಯ ನಿಯಮಗಳನ್ನು ಸಡಿಲಿಸಲಾಗಿದೆ. ಹೂಡಿಕೆದಾರ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಜಾರಿಯಲ್ಲಿದ್ದ ನಿಯಮಗಳಲ್ಲಿ ಕೆಲವನ್ನು ಪರಸ್ಪರ ವಿಲೀನಗೊಳಿಸಿದೆ. ಅಲ್ಲದೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು(ಎಫ್‌ಐಐ) ಮತ್ತು ಅವರ ಉಪ ಖಾತೆಗಳು, ಅರ್ಹ ವಿದೇಶಿ ಹೂಡಿಕೆದಾರರಿಗೇ ಹೊಸದಾಗಿ ಪ್ರತ್ಯೇಕ ಶ್ರೇಣಿಯೊಂದನ್ನು ರೂಪಿಸಲಾಗಿದೆ ಎಂದು `ಸೆಬಿ' ಮಂಗಳವಾರ ಹೇಳಿದೆ.

ಸಂಪುಟ ಕಾರ್ಯದರ್ಶಿ ಕೆ.ಎಂ.ಚಂದ್ರಶೇಖರ್ ಅವರ ನೇತೃತ್ವದ `ಹೂಡಿಕೆ ಮಾರ್ಗಗಳು ಮತ್ತು ವಿದೇಶಿ ಹೂಡಿಕೆ ಖಾತೆಗಳ ನಿಯಂತ್ರಣದಲ್ಲಿ ಸುಧಾರಣಾ ಕ್ರಮಗಳಿಗಾಗಿ ರಚಿಸಿದ ಸಮಿತಿ' ಜತೆ ಚರ್ಚಿಸಿದ ನಂತರವೇ ಈ ಬದಲಾವಣೆಯ ನಿರ್ಧಾರ ಕೈಗೊಳ್ಳಲಾಗಿದೆ ಎಂದು `ಸೆಬಿ' ಸ್ಪಷ್ಟಪಡಿಸಿದೆ.

ಮರು ಖರೀದಿ ಕಡ್ಡಾಯ
ಸಾರ್ವಜನಿಕ ಹೂಡಿಕೆದಾರರ ಹಿತರಕ್ಷಣೆ ದೃಷ್ಟಿಯಿಂದಲೂ `ಸೆಬಿ' ಕೆಲವು ನಿಯಮಗಳನ್ನು ಕಡ್ಡಾಯಗೊಳಿಸಿದೆ.
`ಮರು ಖರೀದಿ ಕೊಡುಗೆ' ಷೇರುಗಳಲ್ಲಿ ಶೇ 50ರಷ್ಟನ್ನು ಸ್ವತಃ ಕಂಪೆನಿಗಳೇ ಖರೀದಿಸಬೇಕು ಎಂಬುದನ್ನು ಕಡ್ಡಾಯಗೊಳಿಸಿದೆ. ಅಲ್ಲದೆ, ಈ ಪ್ರಕ್ರಿಯೆಯನ್ನು ಆರು ತಿಂಗಳೊಳಗೇ ಪೂರ್ಣಗೊಳಿಸಬೇಕು ಎಂದೂ ಗಡುವು ವಿಧಿಸಿದೆ.

ಒಂದೊಮ್ಮೆ ಗಡುವಿನೊಳಗೆ ಪ್ರಕ್ರಿಯೆ ಪೂರ್ಣಗೊಳಿಸದೇ ಇದ್ದರೆ ಅಂತಹ ಕಂಪೆನಿಗೆ ಮುಂದಿನ ಒಂದು ವರ್ಷ ಕಾಲ `ಮರು ಖರೀದಿ ಪ್ರಕ್ರಿಯೆ' ನಡೆಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.

ಕಳೆದ ಮೂರು ವರ್ಷಗಳಲ್ಲಿ ಕಂಪೆನಿಗಳು ಮುಕ್ತ ಮಾರುಕಟ್ಟೆಯಿಂದ ಶೇ 75ರಷ್ಟು ಷೇರುಗಳನ್ನು ಮರು ಖರೀದಿ ಮಾಡಬೇಕು ಎಂಬ ಗುರಿ ನಿಗದಿಪಡಿಸಲಾಗಿತ್ತು. ಆದರೆ, ಕೆಲವು ಕಂಪೆನಿಗಳು ಮಾತ್ರವೇ ಶೇ 49.91ರಷ್ಟು ಷೇರು ವಾಪಸ್ ಖರೀದಿ ಮಾಡಿದ್ದವು.

ಅಲ್ಲದೆ, ಆದ್ಯತೆ ಮೇರೆಗೆ ಕೆಲವು ನಿರ್ದಿಷ್ಟ ಹೂಡಿಕೆದಾರರಿಗೆ ಷೇರು ವಿತರಿಸುವ ಪ್ರಕ್ರಿಯೆ ಪಾರದರ್ಶಕವಾಗಿರಬೇಕು. ಈ ಹೂಡಿಕೆದಾರರು ಷೇರುಗಳಿಗೆ ಹಣವನ್ನು ಬ್ಯಾಂಕ್ ಖಾತೆ ಮೂಲಕವೇ ಪಾವತಿಸಬೇಕು ಎಂಬ ನಿಯಮವನ್ನೂ `ಸೆಬಿ' ಜಾರಿಗೊಳಿಸಿದೆ. ಷೇರು ಪ್ರಮಾಣ ನಿಗದಿಪಡಿಸುವುದರಲ್ಲಿ ತಾರತಮ್ಯವಾಗಿ ಸಾರ್ವಜನಿಕ ಹೂಡಿಕೆದಾರರಿಗೆ ಅವಕಾಶ ಇಲ್ಲದಂತಾಗುವುದನ್ನು ತಡೆಯಲೆಂದೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು `ಸೆಬಿ' ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.