ADVERTISEMENT

ವಿಪ್ರೊ:ಕೋರ್ಟ್ ಗಡುವು

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2010, 11:40 IST
Last Updated 29 ಡಿಸೆಂಬರ್ 2010, 11:40 IST

ಬೆಂಗಳೂರು:ಕಂಪ್ಯೂಟರ್ ಸಾಫ್ಟ್‌ವೇರ್ ತಯಾರಿಕೆಗೆ ಸಂಬಂಧಿಸಿದಂತೆ ವಾಣಿಜ್ಯ ತೆರಿಗೆ ಇಲಾಖೆಗೆ ಪಾವತಿಸಬೇಕಿರುವ ್ಙ 22.75 ಕೋಟಿ ತೆರಿಗೆ ಹಣವನ್ನು ನ್ಯಾಯಾಲಯದಲ್ಲಿ ಠೇವಣಿ ಇಡಲು ವಿಪ್ರೊ ಸಂಸ್ಥೆಗೆ ಒಂದು ದಿನದ ಗಡುವು ನೀಡಿ, ಹೈಕೋರ್ಟ್ ಮಂಗಳವಾರ ಆದೇಶಿಸಿದೆ. ಬುಧವಾರ ಸಂಪೂರ್ಣ ಹಣವನ್ನು ಇಲಾಖೆಯಲ್ಲಿ ಠೇವಣಿ ಇಟ್ಟಲ್ಲಿ ಮಾತ್ರ, ಈ ತೆರಿಗೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸುವುದಾಗಿ ನ್ಯಾಯಮೂರ್ತಿಗಳಾದ ಎ.ಎನ್. ವೇಣುಗೋಪಾಲಗೌಡ ಹಾಗೂ ಬಿ.ವಿ.ಪಿಂಟೊ ಅವರನ್ನು ಒಳಗೊಂಡ ರಜಾಕಾಲದ ನ್ಯಾಯಪೀಠ ಆದೇಶಿಸಿದೆ. 2009-10ನೇ ಸಾಲಿನಲ್ಲಿ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಸಾಫ್ಟ್‌ವೇರ್ ತಯಾರಿಕೆಗೆ ಸಂಬಂಧಿಸಿದಂತೆ ಈ ತೆರಿಗೆ ಹಣವನ್ನು ಸಂಸ್ಥೆ ನೀಡಿಲ್ಲ ಎಂದು ದೂರಿ ಇಲಾಖೆಯು ನೋಟಿಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಸಂಸ್ಥೆ ಏಕಸದಸ್ಯ ಪೀಠದ ಮುಂದೆ ಅರ್ಜಿ ಸಲ್ಲಿಸಿತ್ತು.‘ಸಾಫ್ಟ್‌ವೇರ್’ ಎನ್ನುವುದು ವಸ್ತುವಲ್ಲ. ಇದರಿಂದಾಗಿ ತೆರಿಗೆ ವಿಧಿಸಿರುವುದು ಸರಿಯಲ್ಲ ಎನ್ನುವುದು ಅದರ ವಾದವಾಗಿತ್ತು. ಇದೇ 10ರಂದು ವಿಚಾರಣೆ ನಡೆಸಿದ್ದ ಕೋರ್ಟ್, ಅರ್ಜಿಯನ್ನು ವಜಾ ಮಾಡಿತ್ತು. ತೆರಿಗೆ ವಿನಾಯಿತಿಗೆ ಕೋರಿ 15 ದಿನಗಳ ಒಳಗೆ ಬೇಕಿದ್ದರೆ ಇಲಾಖೆಗೆ ಮನವಿ ಸಲ್ಲಿಸುವಂತೆ ನ್ಯಾಯಮೂರ್ತಿಗಳು ಆದೇಶಿಸಿದ್ದರು.

ಆದರೆ 15 ದಿನವಾದರೂ ವಿಪ್ರೊ ಸಂಸ್ಥೆ ಮನವಿ ಸಲ್ಲಿಸದ ಹಿನ್ನೆಲೆಯಲ್ಲಿ ಅದರ ಬ್ಯಾಂಕ್ ಖಾತೆಯನ್ನು ಇಲಾಖೆ ಮುಟ್ಟುಗೋಲು ಹಾಕಿಕೊಂಡಿತು. ‘ಏಕಸದಸ್ಯ ಪೀಠದ ಆದೇಶದಂತೆ 15 ದಿನಗಳ ಒಳಗೆ ಮನವಿ ಸಲ್ಲಿಸದ ಹಿನ್ನೆಲೆಯಲ್ಲಿ ಇಲಾಖೆಯ ಕ್ರಮ ಸರಿಯಿದೆ’ ಎಂದು ಪೀಠ ಹೇಳಿತು. ಈ ಅರ್ಜಿಯ ವಿಚಾರಣೆ ಮುಂದುವರಿಸಬೇಕು ಎಂದಾದರೆ, ಬುಧವಾರ ಸಂಪೂರ್ಣ ಹಣ ಠೇವಣಿ ಇಡಬೇಕು’ ಎಂದು ಹೇಳಿದ ಪೀಠ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.