ADVERTISEMENT

ವಿಪ್ರೊ ಲಾಭ ರೂ 1,728 ಕೋಟಿ

4ನೇ ತ್ರೈಮಾಸಿಕದಲ್ಲಿ ಶೇ16.73 ಪ್ರಗತಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2013, 19:59 IST
Last Updated 19 ಏಪ್ರಿಲ್ 2013, 19:59 IST

ಬೆಂಗಳೂರು:  ದೇಶದ ಮೂರನೇ ಅತಿ ದೊಡ್ಡ ಐ.ಟಿ ಸೇವಾ ಸಂಸ್ಥೆ `ವಿಪ್ರೊ' ಮಾರ್ಚ್ 31ಕ್ಕೆ ಕೊನೆಗೊಂಡ 2012-13ನೇ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್)ರೂ1,728 ಕೋಟಿ ನಿವ್ವಳ ಲಾಭ ಗಳಿಸಿದ್ದು, ಶೇ 16.73ರಷ್ಟು ಪ್ರಗತಿ ದಾಖಲಿಸಿದೆ.

2011-12ನೇ ಹಣಕಾಸು ವರ್ಷದ ಜನವರಿ-ಮಾರ್ಚ್ ಅವಧಿಯಲ್ಲಿ ವಿಪ್ರೊರೂ1,480 ಕೋಟಿ ನಿವ್ವಳ ಲಾಭ ಗಳಿಸಿತ್ತು.
2012-13ನೇ ಹಣಕಾಸು ವರ್ಷದ ಕಡೆಯ ತ್ರೈಮಾಸಿಕದಲ್ಲಿ ಕಂಪೆನಿಯ ಒಟ್ಟಾರೆ ವರಮಾನ ಶೇ 13ರಷ್ಟು ಹೆಚ್ಚಿದ್ದು,ರೂ9,613 ಕೋಟಿಗೇರಿದೆ.
ನಾಲ್ಕೂ ತ್ರೈಮಾಸಿಕಗಳು ಸೇರಿ ವಿಪ್ರೊ  ಒಟ್ಟಾರೆರೂ6,635 ಕೋಟಿ ನಿವ್ವಳ ಲಾಭ ದಾಖಲಿಸಿದೆ. 2011-12ನೇ ಸಾಲಿನಲ್ಲಿ ಒಟ್ಟಾರೆರೂ5,573 ಕೋಟಿ ನಿವ್ವಳ ಲಾಭ ದಾಖಲಾಗಿತ್ತು. 2012-13ನೇ ಸಾಲಿನಲ್ಲಿ ಒಟ್ಟಾರೆ ವರಮಾನ ಶೇ 17ರಷ್ಟು ಹೆಚ್ಚಿದ್ದುರೂ37,685 ಕೋಟಿಗೆ ಏರಿಕೆ ಕಂಡಿದೆ.

ಐ.ಟಿ ಸೇವಾ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಲು 2012ರ ಡಿಸೆಂಬರ್‌ನಲ್ಲಿ ವಿಪ್ರೊ ತನ್ನ ಮೂರು ಘಟಕಗಳನ್ನು `ವಿಪ್ರೊ ಎಂಟರ್‌ಪ್ರೈಸಸ್' ಎಂಬ ಹೆಸರಿನಡಿ ಪ್ರತ್ಯೇಕಗೊಳಿಸಿದೆ. 2013ರ ಏಪ್ರಿಲ್ 1ರಿಂದ ಇದು ಜಾರಿಗೆ ಬಂದಿದೆ.

`ಐ.ಟಿ ಸೇವೆಗಳ ವರಮಾನ ನಾಲ್ಕನೇ ತ್ರೈಮಾಸಿಕದಲ್ಲಿ ಶೇ 13ರಷ್ಟು ಹೆಚ್ಚಿದ್ದುರೂ8,554 ಕೋಟಿಗಳಷ್ಟಾಗಿದೆ. ಐ.ಟಿ ಸೇವೆಗಳ ತೆರಿಗೆ ಪೂರ್ವ ಲಾಭವೂ ಶೇ 10ರಷ್ಟು ಹೆಚ್ಚಿದ್ದು,ರೂ1,727 ಕೋಟಿಗೆ ಏರಿಕೆ ಕಂಡಿದೆ. ಆದರೆ, ವಿವಿಧ ದೇಶಗಳ ಕರೆನ್ಸಿ ಮೌಲ್ಯದಲ್ಲಿನ ಏರಿಳಿತ ಕಂಪೆನಿಯ ಒಟ್ಟಾರೆ ಹಣಕಾಸು ಸಾಧನೆ ಮೇಲೆ ಸ್ವಲ್ಪಮಟ್ಟಿಗಿನ ನಕಾರಾತ್ಮಕ ಪರಿಣಾಮ ಬೀರಿದೆ' ಎಂದು `ವಿಪ್ರೊ'ದ ಮುಖ್ಯ ಹಣಕಾಸು ಅಧಿಕಾರಿ ಸುರೇಶ್ ಸೇನಾಪತಿ ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

`ಮೂರು ಘಟಕಗಳನ್ನು ಪ್ರತ್ಯೇಕಗೊಳಿಸಿ ಐ.ಟಿ ಸೇವೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದೇವೆ. ಜತೆಗೆ ಕಳೆದ ತ್ರೈಮಾಸಿಕದಲ್ಲಿ 52 ಹೊಸ ಗ್ರಾಹಕ ಸಂಸ್ಥೆಗಳು ಸೇರ್ಪಡೆಯಾಗಿವೆ. ಈ ಹಿನ್ನೆಲೆಯಲ್ಲಿ 2013-14ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿರೂ8,554 ಕೋಟಿಯಿಂದರೂ9,000 ಕೋಟಿ ನಿವ್ವಳ ಲಾಭ ಅಂದಾಜು ಮಾಡಲಾಗಿದೆ ಎಂದು `ವಿಪ್ರೊ' ಅಧ್ಯಕ್ಷ ಅಜೀಂ ಪ್ರೇಮ್‌ಜಿ ತಿಳಿಸಿದರು.

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಕರೆನ್ಸಿ ಮೌಲ್ಯದಲ್ಲಿನ ಏರಿಳಿತದಿಂದ ನಾಲ್ಕನೇ ತ್ರೈಮಾಸಿಕದಲ್ಲಿ ವಿದೇಶಗಳ ಮೂಲದ ವರಮಾನದಲ್ಲಿ ಶೇ 1ರಷ್ಟು ನಷ್ಟವಾಗಿದೆ ಎಂದು ವಿಪ್ರೊ `ಸಿಇಒ' ಟಿ.ಕೆ.ಕುರಿಯನ್ ಸ್ಪಷ್ಟಪಡಿಸಿದರು.

ವಲಸೆ ಮಸೂದೆ ಪರಿಣಾಮ
ಅಮೆರಿಕ ಸರ್ಕಾರದ ಪ್ರಸ್ತಾವಿತ ವಲಸೆ ಸುಧಾರಣೆ ಮಸೂದೆ ಕುರಿತು ವಿಪ್ರೊ ಕಳವಳ ವ್ಯಕ್ತಪಡಿಸಿದೆ. ಸದ್ಯ ಕಂಪೆನಿಯ ಐ.ಟಿ ಸೇವೆಗಳ ಶೇ 50ರಷ್ಟು ವರಮಾನ ಅಮೆರಿಕ ಮಾರುಕಟ್ಟೆಯಿಂದಲೇ ಬರುತ್ತಿದೆ. ಈ ಮಸೂದೆ ಜಾರಿಯಿಂದ ಉದ್ಯಮ ವಲಯದಲ್ಲಿನ ಸ್ಪರ್ಧಾತ್ಮಕತೆ ಮೇಲೆ ಪರಿಣಾಮವಾಗಲಿದೆ. ಕಂಪೆನಿ ಹೆಚ್ಚುವರಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಬೇಕಾದರೆ  10 ಸಾವಿರ ಡಾಲರ್ ಶುಲ್ಕ ಪಾವತಿಸಬೇಕಿದೆ ಎಂದು ಟಿ.ಕೆ.ಕುರಿಯನ್ ವಿವರಿಸಿದರು.

`ಮಸೂದೆ ಮುಂದಿನ ವರ್ಷದಿಂದ ಜಾರಿಗೆ ಬರಲಿದೆ ಎನ್ನುವುದು ಸದ್ಯದ ಮಟ್ಟಿಗೆ ಸಮಾಧಾನದ ಸಂಗತಿ. ಅಮೆರಿಕದಲ್ಲಿರುವ ವಿಪ್ರೊ ಕಂಪೆನಿಯ ಉದ್ಯೋಗಿಗಳಲ್ಲಿ ಶೇ 36ರಷ್ಟು ಮಂದಿ ಸ್ಥಳೀಯರು. ಈ ಸಂಖ್ಯೆಯನ್ನು ಕ್ರಮೇಣ ಶೇ 50ಕ್ಕೆ ಹೆಚ್ಚಿಸಲಾಗುವುದು' ಎಂದು ಅಜೀಂ ಪ್ರೇಮ್‌ಜಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸ್ಥಳೀಯ ಐ.ಟಿ ಉದ್ಯಮ ಮತ್ತು ಉದ್ಯೋಗಿಗಳ ಹಿತಾಸಕ್ತಿ ಕಾಪಾಡಲು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಆಡಳಿತ, `ವಲಸೆ ಸುಧಾರಣೆ ಮಸೂದೆ' ಜಾರಿಗೆ ತರಲು ಮುಂದಾಗಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ದಾನ: ಪ್ರೇಮ್‌ಜಿ ಅಭಿಮತ
ಬೆಂಗಳೂರು: ವೈಯಕ್ತಿಕ ಸಂಪತ್ತಿನಲ್ಲಿ ಶೇ 25ಕ್ಕಿಂತ ಹೆಚ್ಚಿನ ಪಾಲನ್ನು ಸಮಾಜದ ಒಳಿತಿಗಾಗಿ ಈಗಾಗಲೇ ದಾನ ಮಾಡಿರುವುದಾಗಿ ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಸ್ಪಷ್ಟಪಡಿಸಿದ್ದಾರೆ.

`ದಾನಕ್ಕಾಗಿ ಹಣವಿನಿಯೋಗಿಸುವುದು ಅಷ್ಟೊಂದು ಸುಲಭವೂ ಅಲ್ಲ' ಎಂದೂ ಅಭಿಪ್ರಾಯಪಟ್ಟಿದ್ದಾರೆ.`ದಾನವಾಗಿ ಕೊಡುವ ಹಣದ ಬಗ್ಗೆ ನನಗೆ ಸ್ಪಷ್ಟ ದೃಷ್ಟಿಕೋನವಿದೆ. ಸಾಮಾಜಿಕ ಕಾರಣಗಳಿಗಾಗಿ ದಾನ  ಮುಂದುವರೆಸುವೆ. ಆದರೆ, ಸರ್ಕಾರದ ಜವಾಬ್ದಾರಿಯನ್ನೇನೂ ಹೆಗಲ ಮೇಲೆ  ಹೊತ್ತುಕೊಳ್ಳುವುದಿಲ್ಲ. ಅದು ತುಂಬಾ ಕಷ್ಟ. ಬದಲಿಗೆ ಸರ್ಕಾರ ಮಾಡುವ ಕೆಲಸಕ್ಕೆ ಪೂರಕವಾಗಿ ಕೈಲಾದ ನೆರವು ನೀಡುವೆ' ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಮೈಕ್ರೊಸಾಫ್ಟ್ ಸಹ ಸ್ಥಾಪಕ ಬಿಲ್ ಗೇಟ್ಸ್ ಮತ್ತು ಉದ್ಯಮಿ ವಾರನ್ ಬಫೆಟ್ ತಮ್ಮ ಸಂಪತ್ತಿನ ಅರ್ಧದಷ್ಟನ್ನು ದಾನಕ್ಕೆ ಮೀಸಲಿಟ್ಟಿದ್ದಾರೆ. ಅಲ್ಲದೆ, ಶ್ರೀಮಂತರನ್ನು ದಾನ ಮಾಡುವಂತೆ ಪ್ರೇರೇಪಿಸಲು `ಗಿವಿಂಗ್ ಪ್ಲೆಡ್ಜ್ ಕ್ಲಬ್' ಸ್ಥಾಪಿಸಿದ್ದಾರೆ. ಈ ಸಂಘಕ್ಕೆ ಸದಸ್ಯರಾಗಿರುವ ಮೊದಲ ಭಾರತೀಯ ಪ್ರೇಮ್‌ಜಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.