ADVERTISEMENT

ವಿಮಾನಯಾನ ಕ್ಷೇತ್ರದ ಪುನಶ್ಚೇತನಕ್ಕೆ ಕ್ರಮ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2012, 19:30 IST
Last Updated 16 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ):  ಆರ್ಥಿಕ ಸಂಕಷ್ಟದಲ್ಲಿರುವ ವಿಮಾನಯಾನ ಕ್ಷೇತ್ರದ ಪುನಶ್ಚೇತನಕ್ಕೆ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಹಲವಾರು ಕ್ರಮಗಳನ್ನು ಪ್ರಕಟಿಸಿದ್ದು, ನಾಲ್ಕು ಸಾವಿರ ಕೋಟಿ ಬಜೆಟ್ ಅನುದಾನದ ಜತೆಗೆ ಒಂದು ವರ್ಷದಲ್ಲಿ 10 ಲಕ್ಷ ಡಾಲರ್ ಬಾಹ್ಯ ಸಾಲ ಪಡೆಯಲು ಅವಕಾಶ ನೀಡುವ ಪ್ರಸ್ತಾವ ಮುಂದಿಟ್ಟಿದ್ದಾರೆ.

ವಿಮಾನಗಳ ದುರಸ್ತಿ ಮತ್ತು ನಿರ್ವಹಣೆಯ ಕಾರ್ಯವನ್ನು ಉತ್ತೇಜಿಸುವ ದೃಷ್ಟಿಯಿಂದ ವಿಮಾನಗಳ ಬಿಡಿಭಾಗಗಳು, ಟಯರ್ ಮತ್ತು ಪರೀಕ್ಷಾ ಸಾಮಗ್ರಿಗಳ ಆಮದು ಸುಂಕವನ್ನು ರದ್ದುಪಡಿಸಲಾಗಿದೆ.

ದುಬಾರಿ ಜೆಟ್ ಇಂಧನ ಬೆಲೆ ಮತ್ತು ಕಾರ್ಯಾಚರಣೆ ವೆಚ್ಚದಲ್ಲಿ ಅಗಾಧ ಹೆಚ್ಚಳದಿಂದಾಗಿ ವಿಮಾನ ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದು ನಿಜ ಎಂದು ಒಪ್ಪಿಕೊಂಡಿರುವ ಹಣಕಾಸು ಸಚಿವರು, ಭಾರತದ ವಿಮಾನ ಸಂಸ್ಥೆಗಳಿಗೆ ಜೆಟ್ ಇಂಧನವನ್ನು ನೇರವಾಗಿ ಆಮದು ಮಾಡಿಕೊಳ್ಳಲು ಅನುಮತಿ ನೀಡಲಾಗುವುದು.

ADVERTISEMENT

ದೇಶಿ ವಿಮಾನಯಾನ ಸಂಸ್ಥೆಗಳಲ್ಲಿ ವಿದೇಶಿ ವಿಮಾನಯಾನ ಸಂಸ್ಥೆಗಳು ಶೇಕಡಾ 49ರಷ್ಟು ಬಂಡವಾಳ ಹೂಡಲು ಅವಕಾಶ ನೀಡುವುದರ ಬಗ್ಗೆ ಗಂಭೀರವಾಗಿ ಪರಿಶೀಲನೆ ನಡೆಸಲಾಗುತ್ತಿದೆ.

ಭಾರತೀಯರ ವಿದೇಶಿ ಪ್ರವಾಸವನ್ನು ಪ್ರೋತ್ಸಾಹಿಸುವ  ದೃಷ್ಟಿಯಿಂದ ಸುಂಕಮುಕ್ತ ಯೋಜನೆಯಲ್ಲಿ ಬದಲಾವಣೆ ಮಾಡುವ ಪ್ರಸ್ತಾವ ಮುಂದಿಟ್ಟಿದ್ದು, ಈಗಿರುವ 25 ಸಾವಿರ ರೂಪಾಯಿಗಳ ಮಿತಿಯನ್ನು 35 ಸಾವಿರ ರೂಪಾಯಿಗಳಿಗೆ ವಿಸ್ತರಿಸಲಾಗುತ್ತದೆ. 10 ವರ್ಷಗಳವರೆಗಿನ ಮಕ್ಕಳಿಗೆ 12 ಸಾವಿರದಿಂದ 15 ಸಾವಿರ ರೂ.ಗೆ ಏರಿಸಲಾಗುತ್ತಿದೆ.

ವಿಮಾನಯಾನ ಕ್ಷೇತ್ರದ ಮೂಲ ಸೌಕರ್ಯ ಅಭಿವೃದ್ಧಿಗೆ ದೀರ್ಘಾವಧಿಯಲ್ಲಿ ಕಡಿಮೆ ವೆಚ್ಚದ ಬಂಡವಾಳ ಹೂಡಿಕೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ತೆರಿಗೆ ವಿನಾಯ್ತಿ ನೀಡಲಾಗುತ್ತದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.