ADVERTISEMENT

ವಿಮಾನ ಪ್ರಯಾಣ ತುಟ್ಟಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 19:30 IST
Last Updated 18 ಏಪ್ರಿಲ್ 2012, 19:30 IST

ನವದೆಹಲಿ(ಪಿಟಿಐ):ಬೇಸಿಗೆಯ ರಜಾ ಕಾಲ ಈಗಷ್ಟೇ ಆರಂಭವಾಗಿದೆ. ಆದರೆ, ಆಗಲೇ ದೇಶದ ಬಹಳಷ್ಟು ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರ ದಟ್ಟಣೆ ಇರುವ ಮಾರ್ಗದಲ್ಲಿನ ಪ್ರಯಾಣ ದರವನ್ನು ಶೇ. 10ರಿಂದ ಶೇ. 25ರವರೆಗೂ ಏರಿಸಿವೆ!

ಆರ್ಥಿಕ ಸಂಕಷ್ಟದಲ್ಲಿರುವ ಕಿಂಗ್‌ಫಿಶರ್ ಏರ್‌ಲೈನ್ಸ್‌ನ ವಿಮಾನಗಳು ಸದ್ಯ ಸಂಚರಿಸದೇ ಇರುವ ಮಾರ್ಗಗಳಲ್ಲಿ ಪ್ರಯಾಣಿಕರ ಪ್ರಮಾಣ ಹೆಚ್ಚಾಗಿರುವುದೂ ದರ ಏರಿಕೆಗೆ ಒಂದು ಕಾರಣವಾಗಿದೆ. ಕಿಂಗ್‌ಫಿಶರ್ ಅನುಪಸ್ಥಿತಿಯನ್ನು ಇತರೆ ವಿಮಾನ ಯಾನ ಸಂಸ್ಥೆಗಳು ಲಾಭವಾಗಿ ಪರಿವರ್ತಿಸಿಕೊಂಡಿವೆ.

ಭಾರಿ ಸಂಖ್ಯೆಯ ಪ್ರಯಾಣಿಕರು ಸಂಚರಿಸುವ ನವದೆಹಲಿ-ಮುಂಬೈ ಮಾರ್ಗದಲ್ಲಿನ ಎಕಾನಮಿ ದರ್ಜೆಯ (ಕಡೆ ಕ್ಷಣದ) ಮರುಪ್ರಯಾಣದ ದರ ಫೆಬ್ರುವರಿಯಲ್ಲಿ ರೂ. 9000ದಿಂದ 10,000ದಷ್ಟು ಇದ್ದುದು, ಈಗ ಕನಿಷ್ಠ ರೂ. 11,300ರಿಂದ ಗರಿಷ್ಠ ರೂ. 22,800ರವರೆಗೂ ಏರಿಕೆಯಾಗಿದೆ. ನವದೆಹಲಿ-ಬೆಂಗಳೂರು ಮಾರ್ಗದಲ್ಲಿ ರೂ.

12,000ದಿಂದ ರೂ. 15,500ರಷ್ಟು ಇದ್ದುದು ರೂ. 17,000ದಿಂದ ರೂ. 23,000ವರೆಗೂ ಏರಿಕೆಯಾಗಿದೆ. ಕಡೆ ಕ್ಷಣದಲ್ಲಿ ದಾವಂತದಿಂದ ಧಾವಿಸುವ ಪ್ರಯಾಣಿಕರಿಗೆ ಬಹುತೇಕ ಸಂಸ್ಥೆಗಳು `ಕೆಲವೇ ಟಿಕೆಟ್~ ಇರುವುದು ಎಂದು ಹೇಳಿ ಹೆಚ್ಚಿನ ದರ ಪಾವತಿಸುವಂತೆ ಮಾಡುತ್ತಿವೆ. ಈ ಅಂಶವನ್ನು ವಿವಿಧ ಟ್ರಾವೆಲ್ ಏಜೆಂಟರೂ ಖಚಿತಪಡಿಸಿದ್ದಾರೆ.

ವಿಮಾನ ಪ್ರಯಾಣ ದರ ಪ್ರಮಾಣವನ್ನು ನಿಯಂತ್ರಿಸುವ `ನಾಗರಿಕ ವಿಮಾನಯಾನ ಮಹಾ ನಿರ್ದೇಶಕರ ಕಚೇರಿ~(ಡಿಜಿಸಿಎ) ಅಧಿಕಾರಿಗಳು ಮಾತ್ರ, `ಈಗಿನ ದರ ಏರಿಕೆ ಪ್ರಮಾಣವೇನೂ ವಿಮಾನಯಾನ ಸಂಸ್ಥೆಗಳು ಈ ಮೊದಲೇ ಸಲ್ಲಿಸಿದ ದರಪಟ್ಟಿ ಪ್ರಮಾಣಕ್ಕಿಂತ ಅಧಿಕವಾಗಿಯೇನೂ ಇಲ್ಲ~ ಎಂದು ಬುಧವಾರ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.