ADVERTISEMENT

ವೇತನ ವಿಷಯಕ್ಕೆ ಒಮ್ಮತ

ಟೊಯೊಟಾ ಬೀಗಮುದ್ರೆ; ಸಂಧಾನ ಸಭೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 19:30 IST
Last Updated 19 ಮಾರ್ಚ್ 2014, 19:30 IST

ಬೆಂಗಳೂರು: ಲಾಕ್‌ಔಟ್‌ ಘೋಷಿಸಿರುವ ಟೊಯೊಟಾ ಕಿರ್ಲೋಸ್ಕರ್‌ ಕಾರ್ಖಾ­ನೆಯ ಆಡಳಿತ ಮಂಡಳಿ ಮತ್ತು ಕಾರ್ಮಿಕ ಮುಖಂಡರ ನಡುವೆ ಬುಧವಾರ ನಡೆದ ಮಾತುಕತೆ ಸಂದರ್ಭದಲ್ಲಿ ವೇತನ  ವಿಷಯಕ್ಕೆ ಸಂಬಂಧಿಸಿದಂತೆ ಒಮ್ಮತ ಮೂಡಿದೆ. ಆದರೆ, ಮುಷ್ಕರ ಇತ್ಯಾದಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಕಾರ್ಮಿಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ವಿಚಾರದಲ್ಲಿ ಮಾತುಕತೆ ಮುರಿದುಬಿದ್ದಿದ್ದು, ಮತ್ತೆ ಗುರುವಾರ ಸಭೆ ಸೇರುವ ಸಾಧ್ಯತೆ ಇದೆ.

ಕಾರ್ಮಿಕ ಇಲಾಖೆ ಹೆಚ್ಚುವರಿ ಆಯುಕ್ತ ಜೆ.ಟಿ.ಜಿಂಕಲಪ್ಪ ನೇತೃತ್ವದಲ್ಲಿ ಸಂಧಾನ ಸಭೆ ನಡೆಯಿತು. 2013–14ನೇ ಸಾಲಿಗೆ ಸರಾಸರಿ ₨3,100 ವೇತನ ಹೆಚ್ಚಳಕ್ಕೆ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ. ಇದಕ್ಕೆ ಕಾರ್ಮಿಕ ಮುಖಂಡರು ಕೂಡ ಸಮ್ಮತಿಸಿ­ದ್ದಾರೆ ಎಂದು ಗೊತ್ತಾಗಿದೆ.

ಆದರೆ, ಕಳೆದ 25 ದಿನಗಳಿಂದ ಅಸಹಕಾರ ಚಳವಳಿ ನಡೆಸುತ್ತಿದ್ದ 15 ಮಂದಿ ಕಾರ್ಮಿಕರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲು ಆಡಳಿತ ಮಂಡಳಿ ಪಟ್ಟುಹಿ­ಡಿದಿದ್ದು, ಇದಕ್ಕೆ ಕಾರ್ಮಿಕ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿಷಯ­ದಲ್ಲಿ ಆಡಳಿತ ಮಂಡಳಿ ಮತ್ತು ಕಾರ್ಮಿಕ ಮುಖಂಡರ ನಡುವೆ ಸಂಧಾನ ಏರ್ಪಟ್ಟಿಲ್ಲ ಎನ್ನಲಾಗಿದೆ. ಮತ್ತೊಮ್ಮೆ ಗುರುವಾರ ಸಭೆ ಸೇರಿ ಸಮಸ್ಯೆ ಇತ್ಯರ್ಥಪಡಿಸುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.