ADVERTISEMENT

ಶೀಘ್ರದಲ್ಲೇ ಹೊಸ ತಯಾರಿಕಾ ನೀತಿ ಜಾರಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2011, 19:30 IST
Last Updated 12 ಜೂನ್ 2011, 19:30 IST

ನವದೆಹಲಿ (ಪಿಟಿಐ): ಶೀಘ್ರದಲ್ಲೇ ರಾಷ್ಟ್ರೀಯ ತಯಾರಿಕಾ  ನೀತಿ ಜಾರಿಗೆ ಬರಲಿದೆ. ಈ ನೀತಿಯಿಂದ 2025ರ ವೇಳೆಗೆ ದೇಶದಲ್ಲಿ ಹೆಚ್ಚುವರಿ 100 ದಶಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿದ್ದು, ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಸರ್ಕಾರ ಹೇಳಿದೆ.

`ತಯಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ರಾಷ್ಟ್ರೀಯ ನೀತಿಯೊಂದನ್ನು ರೂಪಿಸುತ್ತಿದ್ದೇವೆ. ಒಟ್ಟು ಕೈಗಾರಿಕಾ ಉತ್ಪಾದನೆಗೆ ಶೇ 80ರಷ್ಟು ಕೊಡುಗೆ ನೀಡುವ ತಯಾರಿಕಾ ಕೇತ್ರ ಇತ್ತೀಚಿನ ದಿನಗಳಲ್ಲಿ ತೀವ್ರ ಕುಸಿತ ಕಾಣುತ್ತಿದೆ.

ಈ ಹಿನ್ನೆಲೆಯಲ್ಲಿ ಈ ನೀತಿ ಮಹತ್ವದ್ದು ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಫಿಕ್ಕಿ) ಅಧ್ಯಕ್ಷ ಹರ್ಷ ಮರಿವಾಲ ಹೇಳಿದ್ದಾರೆ. ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿನ ಉನ್ನತ ಸಮಿತಿ `ತಯಾರಿಕಾ ನೀತಿಯ ಕರಡನ್ನು ಅಂತಿಮಗೊಳಿಸಿದೆ.

ಸದ್ಯ ದೇಶದ ಆರ್ಥಿಕ ವೃದ್ಧಿ ದರಕ್ಕೆ ತಯಾರಿಕಾ ಕ್ಷೇತ್ರದ ಕೊಡುಗೆ ಶೇ 16ರಷ್ಟಿದೆ. 2025ರ ವೇಳೆಗೆ ಇದನ್ನು ಶೇ 25ಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಸಮಿತಿ ಯೋಜನೆ ರೂಪಿಸಿದೆ. ಅಂತಿಮ ವರದಿ ಇನ್ನೊಂದು ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹರ್ಷ ಹೇಳಿದರು.

ಜನವರಿ-ಮಾರ್ಚ್ ಅವಧಿಯಲ್ಲಿ  `ಜಿಡಿಪಿ~  ಶೇ 7.8ಕ್ಕೆ ಇಳಿಕೆ ಕಂಡಿದೆ. ಕಳೆದ ಐದು ತ್ರೈಮಾಸಿಕ ಅವಧಿಗಳಲ್ಲಿ ಇದು ಕನಿಷ್ಠ ಪ್ರಗತಿಯಾಗಿದೆ. ಏಪ್ರಿಲ್‌ನಲ್ಲಿ ದೇಶದ ಕೈಗಾರಿಕೆ ವೃದ್ಧಿ ದರವೂ ತೀವ್ರ ಕುಸಿತ ಕಂಡು ಶೇ 6.3ರಷ್ಟಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ತಯಾರಿಕಾ ನೀತಿಯಿಂದ ಒಟ್ಟಾರೆ ಆರ್ಥಿಕ ಪುನಶ್ಚೇತವನ್ನು ಸರ್ಕಾರ ನಿರೀಕ್ಷಿಸುತ್ತಿದೆ.

ಕೈಗಾರಿಕಾ ನೀತಿ ಉತ್ತೇಜನ ಮಂಡಳಿ  ರಾಷ್ಟ್ರೀಯ ತಯಾರಿಕಾ ಸಮಿತಿ ಸಹಭಾಗಿತ್ವದಲ್ಲಿ ಈ ಕರಡು ನೀತಿಯನ್ನು ಸಿದ್ದಪಡಿಸಿದೆ. ಸುಸ್ಥಿರ ಅಭಿವೃದ್ಧಿಯ ಜತೆಗೆ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಯ ಕುರಿತೂ ಯೋಜನೆ ರೂಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.