ADVERTISEMENT

ಶೀಘ್ರ ಎಲ್ಲೆಡೆ ಸಿಎಫ್‌ಎಲ್ ಬಲ್ಬ್ ಬಳಕೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 19:30 IST
Last Updated 28 ಫೆಬ್ರುವರಿ 2011, 19:30 IST

ಬೆಂಗಳೂರು: ‘ವಿದ್ಯುತ್ ಉಳಿತಾಯದಲ್ಲಿ ಮಹತ್ವದ ಪಾತ್ರ ವಹಿಸಲಿರುವ ಸಿಎಫ್‌ಎಲ್ ಬಲ್ಬ್‌ಗಳನ್ನು ಸೆಪ್ಟೆಂಬರ್ ಅಂತ್ಯದ ಒಳಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಳಕೆಗೆ ತರಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಬೆಸ್ಕಾಂ ಸೋಮವಾರ ನಗರದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ‘ಬೆಳಕು ಯೋಜನೆ’ಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಬುರುಡೆ (ಇನ್‌ಕ್ಯಾಂಡಿಸೆಂಟ್) ಬಲ್ಬ್‌ಗಳಲ್ಲಿ ಶೇ 90ರಷ್ಟು ವಿದ್ಯುತ್ ಶಾಖವಾಗಿ ಮಾರ್ಪಟ್ಟು ಅಪವ್ಯಯವಾಗುತ್ತಿತ್ತು. ಸಿಎಫ್‌ಎಲ್ ಬಲ್ಬ್‌ಗಳನ್ನು ಬಳಸುವುದರಿಂದ ವಾರ್ಷಿಕವಾಗಿ 3 ಸಾವಿರ ದಶಲಕ್ಷ ಯೂನಿಟ್‌ನಷ್ಟು ವಿದ್ಯುತ್ ಉಳಿಸಬಹುದಾಗಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ್ಙ 940 ಕೋಟಿ ಉಳಿತಾಯವಾಗಲಿದೆ’ ಎಂದು ಹೇಳಿದರು. ‘ಬೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ, ರಾಮನಗರಗಳಲ್ಲಿ ಬೆಳಕು ಯೋಜನೆ ಈಗ ಅಸ್ತಿತ್ವಕ್ಕೆ ಬಂದಿದೆ. ಖಾಸಗಿ ಕಂಪೆನಿಗಳ ಸಹಕಾರ ಪಡೆದು ಸೆಪ್ಟೆಂಬರ್ ಅಂತ್ಯದ ಒಳಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಿಎಫ್‌ಎಲ್ ಬಲ್ಬ್‌ಗಳನ್ನು ಒದಗಿಸಲಾಗುವುದು’ ಎಂದರು.

‘ಸರ್ಕಾರ ಯೋಜನೆಯನ್ನು ಆಂದೋಲನವಾಗಿ ರೂಪಿಸುತ್ತಿದ್ದು ಜನರಿಗೆ ಯೋಜನೆಯ ಮಹತ್ವದ ಬಗ್ಗೆ ಪ್ರಚಾರ ಮಾಡುವುದು ಮುಖ್ಯವಾಗಿದೆ. ಎಲ್ಲಾ ಸ್ತರದ ಚುನಾಯಿತ ಪ್ರತಿನಿಧಿಗಳು ಈ ಯೋಜನೆಯನ್ನು ಯಶಸ್ವಿಗೊಳಿಸಬೇಕಿದೆ’ ಎಂದು ಮನವಿ ಮಾಡಿದರು. ‘ಮಾರುಕಟ್ಟೆಯಲ್ಲಿ ಸಿಎಫ್‌ಎಲ್ ಬಲ್ಬ್‌ಗಳು ಕಡಿಮೆ ಬೆಲೆಗೆ ದೊರೆಯುವಂತಾದರೆ ಹೆಚ್ಚು ಜನರು ವಿದ್ಯುತ್ ಉಳಿತಾಯಕ್ಕೆ ಮುಂದಾಗುತ್ತಾರೆ. ಈ ಹಿನ್ನೆಲೆಯಲ್ಲಿ ಖಾಸಗಿ ಕಂಪೆನಿಗಳು ಗ್ರಾಹಕರ ಕೈಗೆಟಕುವ ದರದಲ್ಲಿ ಬಲ್ಬ್‌ಗಳನ್ನು ಮಾರಾಟ ಮಾಡಬೇಕು’ ಎಂದು ಅವರು ಕರೆ ನೀಡಿದರು.

್ಙ15ಕ್ಕೆ ಸಿಎಫ್‌ಎಲ್ ಬಲ್ಬ್: ಇಂಧನ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ ‘ಬೆಳಕು ಯೋಜನೆಯ ಮೂಲಕ ಕೇವಲ ್ಙ15ಗೆ ಸಿಎಫ್‌ಎಲ್ ಬಲ್ಬ್‌ಗಳನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ. ಅಧಿಕಾರಿಗಳು ಪ್ರತಿ ಮನೆಗಳಿಗೆ ತೆರಳಿ ಹಳೆಯ ಇನ್‌ಕ್ಯಾಂಡಿಸೆಂಟ್ ಬಲ್ಬ್‌ಗಳನ್ನು ಪಡೆದು ಸಿಎಫ್‌ಎಲ್ ಬಲ್ಬ್‌ಗಳನ್ನು ಕಡಿಮೆ ಬೆಲೆಗೆ ನೀಡುತ್ತಾರೆ’ ಎಂದು ಮಾಹಿತಿ ನೀಡಿದರು.  ‘ರಾಜ್ಯದ ಎಲ್ಲಾ ಸರ್ಕಾರಿ ಕಟ್ಟಡಗಳಲ್ಲಿ ಎಲ್‌ಇಡಿ ಹಾಗೂ ಸಿಎಫ್‌ಎಲ್ ಬಲ್ಬ್‌ಗಳನ್ನು ಬಳಸುವಂತೆ ಆದೇಶ ಹೊರಡಿಸಲಾಗಿದೆ.
 
ಕೇಂದ್ರ ಸರ್ಕಾರ ಬಚತ್ ಲ್ಯಾಂಪ್ ಯೋಜನೆಯಡಿ ಕಡಿಮೆ ವಿದ್ಯುತ್ ಬಳಸುವ ಬಲ್ಬ್‌ಗಳಿಗೆ ಉತ್ತೇಜನ ನೀಡುತ್ತಿದೆ. ಜನರ ಹಿತದೃಷ್ಟಿಯಿಂದ ಖಾಸಗಿ ಕಂಪೆನಿಗಳು ಮಾರುಕಟ್ಟೆಯಲ್ಲಿ ದೊರೆಯುವ ಸಿಎಫ್‌ಎಲ್ ಬಲ್ಬ್‌ಗಳ ಮೇಲಿನ ದರವನ್ನು ಕಡಿಮೆಗೊಳಿಸಬೇಕು’ ಎಂದರು. ‘ಸಿಎಫ್‌ಎಲ್ ಬಲ್ಬ್ ಬಳಕೆ ಮಾಡಬೇಕು ಎಂಬುದು ಈವರೆಗೆ ಕೇವಲ ಕಡತಗಳಲ್ಲಿ ಮಾತ್ರ ದಾಖಲಾಗಿತ್ತು. ಆದರೆ ಬೆಳಕು ಯೋಜನೆ ಸಿಎಫ್‌ಎಲ್ ಬಳಕೆಯ ಮಹತ್ವವನ್ನು ಜನರಿಗೆ ತಿಳಿಸಲಿದೆ. ಈ ಬಲ್ಬ್‌ಗಳನ್ನು ಜನರು ಬಳಸುವಂತಾದರೆ ರಾಜ್ಯದಲ್ಲಿ ಪ್ರತಿದಿನ ಸುಮಾರು 500 ಮೆಗಾವ್ಯಾಟ್ ವಿದ್ಯುತ್ ಉಳಿತಾಯವಾಗಲಿದೆ’ ಎಂದು ಹೇಳಿದರು.

ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ, ಶಾಸಕರಾದ ಎನ್. ಸಂಪಗಿ, ವೈ.ಎ.ನಾರಾಯಣ ಸ್ವಾಮಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಭಾಗ್ಯಮ್ಮ, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಚೆನ್ನಪ್ಪ, ಕೋಲಾರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಮಂಜುಳ, ಕರ್ನಾಟಕ ವಿದ್ಯುತ್ ಕಾರ್ಖಾನೆ ಅಧ್ಯಕ್ಷ ಬಿ.ಪಿ.ಮುನಿವೆಂಕಟಪ್ಪ, ಕೊಳಚೆ ನಿರ್ಮೂಲನೆ ಮಂಡಳಿ ಅಧ್ಯಕ್ಷ ಜೆ.ನಾರಾಯಣ ಸ್ವಾಮಿ, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಮೀಮ್ ಬಾನು, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕಿ ಲತಾ ಕೃಷ್ಣರಾವ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಿ. ಮಣಿವಣ್ಣನ್ ಮತ್ತಿತರರು ಉಪಸ್ಥಿತರಿದ್ದರು. 

ಯೋಜನೆಯ ಉಪಯೋಗಗಳು
*ವಿದ್ಯುತ್ ಉಳಿತಾಯ
* ವಿದ್ಯುತ್ ಸೋರಿಕೆಗೆ ತಡೆ
* 15 ರೂಗೆ ಸಿಎಫ್‌ಎಲ್ ಬಲ್ಬ್
* ಗ್ರಾಹಕರಿಗೆ ಕಡಿಮೆ ಹೊರೆ
* ಕಾರ್ಬನ್ ಹೊರ ಸೂಸುವಿಕೆ ಕಡಿಮೆ
* ವಿದ್ಯುತ್ ಖರೀದಿಸುವ ವೆಚ್ಚದಲ್ಲಿ ಉಳಿತಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.